ಬೆಂಗಳೂರು: ಡಾ. ರಾಜ್‌ಕುಮಾರ್ ಸ್ಮಾರಕಕ್ಕೆ ಸರ್ಕಾರ ಜಮೀನು ನೀಡಿರುವುದನ್ನು ವಿರೋಧಿಸಿ ಪೋಸ್ಟ್ ಮಾಡಿದ್ದ ನಟ ಚೇತನ್ ಅಹಿಂಸಾ, ಇದೀಗ ಕನ್ನಡಪರ ಹೋರಾಟಗಾರ ಸಾ.ರಾ. ಗೋವಿಂದು ಅವರ ವರ್ತನೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. “ನನ್ನ ಮನೆ ಮುಂದೆ ಬಂದು ಗೂಂಡಾಗಳ ರೀತಿ ವರ್ತಿಸಿ ಧಮ್ಕಿ ಹಾಕಿದರೆ ನಾನು ಹೆದರುವುದಿಲ್ಲ, ಕಾನೂನು ಹೋರಾಟ ಮಾಡುತ್ತೇನೆ” ಎಂದು ಅವರು ಎಚ್ಚರಿಸಿದ್ದಾರೆ.
ನಿನ್ನೆ ತಮ್ಮ ಮನೆ ಮುಂದೆ ಪ್ರತಿಭಟನೆ ನಡೆದಾಗ ಚೇತನ್ ಕ್ಷಮೆ ಕೇಳಿದ್ದರು. ಆದರೆ ಇಂದು ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದ ಅವರು, “ನಾನು ಕ್ಷಮೆ ಕೇಳಿದ್ದು ಅಣ್ಣಾವ್ರ ಅಭಿಮಾನಿಗಳಿಗೆ ನೋವಾಗಿದ್ದರೆ ಮಾತ್ರ. ಆದರೆ ನನ್ನ ನಿಲುವು ಮತ್ತು ನಾನು ಮಾಡಿದ ಟ್ವೀಟ್ ಗೆ ನಾನು ಇಂದಿಗೂ ಬದ್ಧನಾಗಿದ್ದೇನೆ” ಎಂದು ಹೇಳಿದ್ದಾರೆ.
ಸಾ.ರಾ. ಗೋವಿಂದು ಅವರು ಬಳಸಿದ ಪದಗಳು ಸರಿಯಿಲ್ಲ. ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯವಿದೆ. ಅವರು ಸೌಜನ್ಯದಿಂದ ಚರ್ಚಿಸಬಹುದಿತ್ತು. ಅದನ್ನು ಬಿಟ್ಟು ಮನೆ ಮುಂದೆ ಬಂದು ಗೂಂಡಾಗಿರಿ ಮಾಡುವುದು ಸರಿಯಲ್ಲ. ಇಂತಹ ವರ್ತನೆಗಳಿಂದ ಅವರು ಡಾ. ರಾಜ್‌ಕುಮಾರ್ ಅವರ ಹೆಸರಿಗೆ ಮಸಿ ಬಳಿಯುತ್ತಿದ್ದಾರೆ ಎಂದು ಚೇತನ್ ಆರೋಪಿಸಿದ್ದಾರೆ.
“ಒಂದು ವೇಳೆ ಅಣ್ಣಾವ್ರು ಇಂದು ಬದುಕಿದ್ದರೆ, ಸರ್ಕಾರ ತಮಗೆ ಎರಡೂವರೆ ಎಕರೆ ಜಮೀನು ನೀಡುವುದನ್ನು ಅವರೇ ವಿರೋಧಿಸುತ್ತಿದ್ದರು ಮತ್ತು ಬೇಡ ಎನ್ನುತ್ತಿದ್ದರು. ನಾನು ರಾಜ್ ಕುಮಾರ್ ಅವರನ್ನು ಟಾರ್ಗೆಟ್ ಮಾಡುತ್ತಿಲ್ಲ, ಸರ್ಕಾರದ ತಾರತಮ್ಯದ ನೀತಿಯನ್ನು ಪ್ರಶ್ನಿಸುತ್ತಿದ್ದೇನೆ” ಎಂದು ಚೇತನ್ ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ.
ತಮಗೆ ಬೆದರಿಕೆ ಹಾಕುವವರ ವಿರುದ್ಧ ಮತ್ತು ತಮ್ಮ ವಿರುದ್ಧ ಅಸಭ್ಯವಾಗಿ ವರ್ತಿಸಿದವರ ವಿರುದ್ಧ ಕಾನೂನು ಸಲಹೆಗಾರರ ಜೊತೆ ಚರ್ಚಿಸಿ ಮುಂದಿನ ದಿನಗಳಲ್ಲಿ ಕಾನೂನು ರೀತಿ ಹೋರಾಟ ಮಾಡುವುದಾಗಿ ಚೇತನ್ ತಿಳಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


