ಬೆಂಗಳೂರು: ಆಡಳಿತ ವ್ಯವಸ್ಥೆಯಲ್ಲಿ ಭ್ರಷ್ಟಾಚಾರವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಮತ್ತು ಕಚೇರಿಗಳಲ್ಲಿ ಮಧ್ಯವರ್ತಿಗಳ ಹಸ್ತಕ್ಷೇಪಕ್ಕೆ ಅವಕಾಶ ನೀಡಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರ್ನಾಟಕ ಆಡಳಿತ ಸೇವೆ (ಕೆಎಎಸ್) ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಸೋಮವಾರ ಬೆಂಗಳೂರಿನಲ್ಲಿ ನಡೆದ ಕರ್ನಾಟಕ ಆಡಳಿತ ಸೇವೆ ಅಧಿಕಾರಿಗಳ ಸಂಘದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮಧ್ಯವರ್ತಿಗಳು ಎಲ್ಲೆಡೆ ಇರುತ್ತಾರೆ. ಆದರೆ ಅವರನ್ನು ಯಾವುದೇ ಕಾರಣಕ್ಕೂ ಕಚೇರಿಯ ಒಳಗೆ ಬಿಟ್ಟುಕೊಳ್ಳಬಾರದು. ಅವರನ್ನು ಕಚೇರಿಯಿಂದ ಹೊರಗಿಟ್ಟಾಗ ಮಾತ್ರ ಪಾರದರ್ಶಕ ಆಡಳಿತ ಸಾಧ್ಯ ಎಂದು ಸಿಎಂ ಹೇಳಿದರು.
ಕೆಲಸಗಳಲ್ಲಿ ವಿಳಂಬ ಮಾಡುವುದು ಭ್ರಷ್ಟಾಚಾರಕ್ಕೆ ದಾರಿ ಮಾಡಿಕೊಡುತ್ತದೆ. ಆದ್ದರಿಂದ ಅಧಿಕಾರಿಗಳು ಯಾವುದೇ ಫೈಲ್ ಗಳನ್ನು ಬಾಕಿ ಉಳಿಸಿಕೊಳ್ಳದೆ, ಶೀಘ್ರವಾಗಿ ವಿಲೇವಾರಿ ಮಾಡಬೇಕು ಎಂದು ಅವರು ತಿಳಿಸಿದರು.
ಅಧಿಕಾರಿಗಳಿಗೆ ಕೇವಲ ಕಾನೂನಿನ ಅರಿವಿದ್ದರೆ ಸಾಲದು, ಸಮಾಜದ ಬಡವರು ಮತ್ತು ದುರ್ಬಲ ವರ್ಗದವರ ಬಗ್ಗೆ ಕಾಳಜಿ ಇರಬೇಕು. ಗ್ರಾಮೀಣ ಭಾಗದ ಜನರು ಕಚೇರಿಗೆ ಬಂದಾಗ ಅವರ ಸಮಸ್ಯೆಗಳನ್ನು ಪ್ರೀತಿಯಿಂದ ಆಲಿಸಿ ಪರಿಹರಿಸಬೇಕು ಎಂದು ಸಲಹೆ ನೀಡಿದರು.
ಸರ್ಕಾರದ ಗ್ಯಾರಂಟಿ ಯೋಜನೆಗಳು ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸಿವೆ. ಹಣ ನೇರವಾಗಿ ಫಲಾನುಭವಿಗಳ ಖಾತೆಗೆ ಸೇರುತ್ತಿರುವುದು ಇದಕ್ಕೆ ಸಾಕ್ಷಿ ಎಂದು ಅವರು ಅಭಿಪ್ರಾಯಪಟ್ಟರು.
ಕೆಎಎಸ್ ಅಧಿಕಾರಿಗಳ ಪದೋನ್ನತಿ (Promotion) ಕುರಿತಂತೆ ಕಂದಾಯ ಸಚಿವರು ಈಗಾಗಲೇ ಕಾರ್ಯೋನ್ಮುಖರಾಗಿದ್ದಾರೆ. ಶೇ. 33ರಷ್ಟು ಅಧಿಕಾರಿಗಳಿಗೆ ಸಿಇಒಗಳಾಗಿ ಬಡ್ತಿ ನೀಡಲು ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಸಿಎಂ ಇದೇ ಸಂದರ್ಭದಲ್ಲಿ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಮೈಸೂರು ಸಂಸ್ಥಾನದ ಕೊಡುಗೆ ಮತ್ತು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ದಕ್ಷ ಆಡಳಿತವನ್ನು ಸ್ಮರಿಸಿದ ಸಿಎಂ, ಅಧಿಕಾರಿಗಳು ತಮ್ಮ ಸೇವಾವಧಿಯನ್ನು ಸಾರ್ಥಕವಾಗಿ ಕಳೆಯಬೇಕು ಎಂದು ಕರೆ ನೀಡಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


