ಕುಣಿಗಲ್: ರೈತರ ಕೃಷಿಗೆ ಅಸಮರ್ಪಕ ವಿದ್ಯುತ್ ಸರಬರಾಜು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಪದಾಧಿಕಾರಿಗಳು ಕುಣಿಗಲ್ ಬೆಸ್ಕಾಂ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.
ರೈತರಿಗೆ ಅವೈಜ್ಞಾನಿಕವಾಗಿ ಯಾವುದೇ ಸಮಯ ನಿಗದಿ ಇಲ್ಲದೆ ವಿದ್ಯುತ್ ನೀಡುವ ಕೆಪಿಟಿಸಿಎಲ್(ಬೆಸ್ಕಾಂ) ಅಧಿಕಾರಿಗಳ ಸರ್ವಾಧಿಕಾರಿ ಧೋರಣೆಯನ್ನು ಖಂಡಿಸಿ ರೈತ ಸಂಘದ ಜಿಲ್ಲಾಧ್ಯಕ್ಷ ಆನಂದ್ ಪಟೇಲ್, ತಾಲ್ಲೂಕು ಅಧ್ಯಕ್ಷ ಅನಿಲ್ ಕುಮಾರ್ ಅವರ ನೇತೃತ್ವದಲ್ಲಿ ಸಂಘದ ಪದಾಧಿಕಾರಿಗಳು ಮತ್ತು ರೈತರು ಇಲ್ಲಿನ ಬೆಸ್ಕಾಂ ಕಾರ್ಯಪಾಲಕ ಅಭಿಯಂತರರ ಕಚೇರಿ ಎದುರು ಪ್ರತಿಭಟನೆ ನಡೆಸಿ ಅಧಿಕಾರಿಗಳ ಬೇಜವಾಬ್ದಾರಿಯನ್ನು ಖಂಡಿಸಿ ಧಿಕ್ಕಾರ ಕೂಗಿದರು.
ರೈತಸಂಘ ಜಿಲ್ಲಾಧ್ಯಕ್ಷ ಆನಂದ್ ಪಟೇಲ್ ಮಾತನಾಡಿ, ರಾಜ್ಯ ಸರ್ಕಾರ ರೈತರಿಗೆ ಏಳು ಗಂಟೆ ಉಚಿತ 3 ಫೇಸ್ ವಿದ್ಯುತ್ ನೀಡುವುದಾಗಿ ಹೇಳಿ, ದಿನಕ್ಕೆ ಕನಿಷ್ಠ ಎರಡು ಗಂಟೆ ವಿದ್ಯುತ್ ನೀಡುತ್ತಿಲ್ಲ. ಹಗಲು ಹೊತ್ತು ವಿದ್ಯುತ್ ಸಮರ್ಪಕವಾಗಿ ನೀಡುತ್ತಿಲ್ಲ. ರಾತ್ರಿ ವೇಳೆ ಮನ ಬಂದಂತೆ ಕರೆಂಟ್ ನೀಡುತ್ತಿದ್ದಾರೆ. ರೈತರು ಬೆಸ್ಕಾಂ ನೀಡುವ ವಿದ್ಯುತ್ಗಾಗಿ ಹೆಂಡತಿ, ಮಕ್ಕಳನ್ನು ಬಿಟ್ಟು ಕಾಡು ಪ್ರಾಣಿಗಳ ಹಾವಳಿ ನಡುವೆ ತೋಟ ಹೊಲದಲ್ಲಿ ಮಲಗುವ ಸ್ಥಿತಿ ಎದುರಾಗಿದೆ ಎಂದರು.
ಕೈಗಾರಿಕಾ ವಲಯಕ್ಕೆ ಹಗಲು ಕರೆಂಟ್ ನೀಡಿ, ರೈತರಿಗೆ ಅವೈಜ್ಞಾನಿಕವಾಗಿ ಯಾವುದೇ ಸಮಯ ನಿಗದಿ ಇಲ್ಲದೆ ಕರೆಂಟ್ ನೀಡುವ ಬೆಸ್ಕಾಂ ಅಧಿಕಾರಿಗಳ ಸರ್ವಾಧಿಕಾರಿ ಧೋರಣೆ ಕೊನೆಗೊಳ್ಳಬೇಕು. ಕೃಷಿ ವಲಯ ಉತ್ಪಾದನೆ ಮಾಡುವುದನ್ನು ಕೈಬಿಟ್ಟರೆ ಕೈಗಾರಿಕಾ ವಲಯದ ಉತ್ಪಾದನೆಯಿಂದ ಏನೂ ಮಾಡಲು ಆಗದು ಎಂಬ ಅರಿವು ಅಧಿಕಾರಿಗಳಿಗೆ ಇರಬೇಕು. ತಾಲೂಕು ಸೇರಿ ಜಿಲ್ಲೆಯಲ್ಲಿ ಸಾಕಷ್ಟು ವಿದ್ಯುತ್ ಲಭ್ಯವಿದ್ದರೂ ಸಹ, ಸೌರಶಕ್ತಿ ಘಟಕದ ವಿದ್ಯುತ್ ವಿನಾಶವಾಗುತ್ತಿದೆ ಎಂದು ಅವರು ತಿಳಿಸಿದರು.
ಅಧಿಕಾರಿಗಳು ನಮಗೆ ಇಷ್ಟಬಂದಂತೆ ವಿದ್ಯುತ್ ಸರಬರಾಜು ಮಾಡುತ್ತಿದ್ದಾರೆ. ರೈತರು ಬೆಳೆದ ಬೆಳೆಗಳನ್ನು ಉಳಿಸಿಕೊಳ್ಳಲು ಪರದಾಡುವ ಪರಿಸ್ಥಿತಿ ಎದುರಾಗಿದೆ. ತೆಂಗು, ಅಡಿಕೆ ಬೆಳೆಗಳನ್ನು ಉಳಿಸಿಕೊಳ್ಳಲು ಕಷ್ಟಕರವಾಗಿದೆ. ಹಾಗಾಗಿ ತಾಲೂಕಿಗೆ ಸಮರ್ಪಕ ವಿದ್ಯುತ್ ನೀಡಬೇಕು. ಇಲ್ಲವಾದಲ್ಲಿ ಮುಂದಿನ ದಿನದಲ್ಲಿ ಕಚೇರಿಗೆ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸುವ ಮೂಲಕ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಬೆಸ್ಕಾಂಗೆ ಎಚ್ಚರಿಕೆ ನೀಡಿದರು.
ರೈತ ಸಂಘದ ತಾಲೂಕು ಅಧ್ಯಕ್ಷ ಅನಿಲ್ ಕುಮಾರ್ ಮಾತನಾಡಿ, ರೈತರು ಲಕ್ಷಾಂತರ ಹಣ ಖರ್ಚು ಮಾಡಿ ಕೊಳವೆ ಬಾವಿ ಕೊರೆಸಿ, ತೋಟಗಳನ್ನು ಮಾಡಿದ್ದಾರೆ. ಬೆಸ್ಕಾಂನವರು ವಿದ್ಯುತ್ ಅನ್ನು ಸಮರ್ಪಕವಾಗಿ ಕೊಡದಿದ್ದರೆ ರೈತ ಎಲ್ಲಿಗೆ ಹೋಗಬೇಕು? ರೈತ ಸಾಲ ಮಾಡಿ ಇಂದು ಆತ್ಮಹತ್ಯೆ ದಾರಿ ಹಿಡಿದಿದ್ದಾನೆ ಎಂದರೆ ಅದಕ್ಕೆ ನೇರ ಹೊಣೆ ಬೆಸ್ಕಾಂ ಇಲಾಖೆಯಾಗಲಿದೆ ಎಂದರು.
ಪ್ರತಿಭಟನೆಯಲ್ಲಿ ಸಂಘದ ಪದಾಧಿಕಾರಿಗಳಾದ ಹೊಸರಂಗಯ್ಯನಪಾಳ್ಯ ವೆಂಕಟೇಶ್, ತೆಪ್ಪಸಂದ್ರ ಆಟೋ ದೇವರಾಜು, ವೆಂಕಟರಾಮು, ಲಿಂಗರಾಜು, ಕೃಷ್ಣ, ರಾಜೇಶ್, ಪಿ.ಎಸ್. ರಾಮು, ವೈ.ಕೆ.ಶ್ರೀನಿವಾಸ್, ಮುದ್ದುರಂಗ, ಟಿ.ಬಿ.ದೇವರಾಜು, ಮೂರ್ತಿ, ಮಂಜುನಾಥ್, ಟಿ.ವೆಂಕಟೇಶ್ ಮೊದಲಾದವರು ಇದ್ದರು.
ಹುಲಿಯೂರುದುರ್ಗದಲ್ಲಿ ಮೇ 15 ರ ಒಳಗೆ 400 ಕೆ.ವಿ ಸ್ಟೇಷನ್ ಪ್ರಾರಂಭವಾಗಲಿದೆ. ಇದು ಚಾಲನೆ ಆದರೆ ತಾಲೂಕಿನಲ್ಲಿ ವಿದ್ಯುತ್ ಸಮಸ್ಯೆ ಪರಿಹಾರವಾಗಲಿದೆ. 14 ಸಬ್ ಸ್ಟೇಷನ್ ಗಳು ಇದ್ದು ಇವುಗಳು ಸಾಕಷ್ಟು ಓವರ್ ಲೋಡ್ ಆಗುತ್ತಿವೆ. ಹೊಸದಾಗಿ ತಾಲೂಕಿನ ಮೊಗನಪುರ, ಗೌಡಗೆರೆ, ಶೆಟ್ಟಗೆರೆ, ಬೆಗೂರು ಅಮ್ಮನಿಕೆರೆ ಗ್ರಾಮಕ್ಕೆ ನಾಲ್ಕು ಸ್ಟೇಷನ್ಗಳು ಮಂಜೂರಾಗಿವೆ ಎಂದು ಬೆಸ್ಕಾಂ ಇಇ ಪುರುಷೋತ್ತಮ ತಿಳಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


