ಬೆಂಗಳೂರು: “ಹಜ್ ಯಾತ್ರೆ ಕೈಗೊಳ್ಳುವ ಪ್ರತಿಯೊಬ್ಬ ಯಾತ್ರಿಕರು ತಮ್ಮ ಪ್ರಾರ್ಥನೆಯಲ್ಲಿ ರಾಜ್ಯದ ಹಿತ ಮತ್ತು ಸರ್ಕಾರದ ಒಳಿತನ್ನು ಬಯಸಬೇಕು” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮನವಿ ಮಾಡಿದರು.
ಕರ್ನಾಟಕ ಹಜ್ ಸಮಿತಿಯು ಹಮ್ಮಿಕೊಂಡಿದ್ದ ‘ಹಜ್–2026’ ಯಾತ್ರಿಕರ ವಿಮಾನಯಾನಕ್ಕೆ ಇಂದು ಹಸಿರು ನಿಶಾನೆ ತೋರಿ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಹಜ್ ಯಾತ್ರೆಯ ಮಹತ್ವ ಹಾಗೂ ಮಾನವೀಯ ಮೌಲ್ಯಗಳ ಬಗ್ಗೆ ಮುಖ್ಯಮಂತ್ರಿಗಳು ಅರ್ಥಪೂರ್ಣ ಮಾತುಗಳನ್ನಾಡಿದರು.
ಇಸ್ಲಾಂ ಧರ್ಮದ ಐದು ಪ್ರಮುಖ ಸ್ತಂಭಗಳಲ್ಲಿ ಒಂದಾದ ಹಜ್ ಯಾತ್ರೆಯನ್ನು ಪ್ರತಿಯೊಬ್ಬ ಮುಸಲ್ಮಾನನು ಜೀವಿತಾವಧಿಯಲ್ಲಿ ಒಮ್ಮೆಯಾದರೂ ಕೈಗೊಳ್ಳಬೇಕು. ಈ ಯಾತ್ರೆಯಿಂದ ಮನುಷ್ಯನ ಹಿಂದಿನ ಪಾಪಗಳು ಕ್ಷಮಿಸಲ್ಪಡುತ್ತವೆ ಮತ್ತು ಆತ ಮರುಜನ್ಮ ಪಡೆದ ಮಗುವಿನಂತೆ ಪರಿಶುದ್ಧನಾಗುತ್ತಾನೆ ಎಂಬ ನಂಬಿಕೆಯಿದೆ ಎಂದು ಸಿಎಂ ತಿಳಿಸಿದರು.
“ಯಾರಾದರೂ ಒಬ್ಬ ನಿರಪರಾಧಿಯನ್ನು ಕೊಂದರೆ, ಅವನು ಇಡೀ ಮಾನವಕುಲವನ್ನೇ ಕೊಂದಂತೆ; ಮತ್ತು ಒಬ್ಬ ಜೀವವನ್ನು ಉಳಿಸಿದರೆ ಇಡೀ ಮಾನವಕುಲವನ್ನೇ ಉಳಿಸಿದಂತೆ” ಎಂಬ ಕುರಾನ್ ನ ಅತ್ಯುನ್ನತ ಸಂದೇಶವನ್ನು ಅವರು ಈ ಸಂದರ್ಭದಲ್ಲಿ ಸ್ಮರಿಸಿದರು.
ಯಾವುದೇ ಧರ್ಮ ಹಿಂಸೆಯನ್ನು ಬೋಧಿಸುವುದಿಲ್ಲ. ಮಾನವೀಯತೆಯೇ ನಿಜವಾದ ಧರ್ಮ. ಪರರ ಒಳಿತನ್ನು ಬಯಸುವವರನ್ನು ದೇವರು ರಕ್ಷಿಸುತ್ತಾನೆ. ಪ್ರತಿಯೊಬ್ಬರೂ ತನ್ನ ಧರ್ಮವನ್ನು ಪ್ರೀತಿಸುವುದರ ಜೊತೆಗೆ ಇತರ ಧರ್ಮಗಳ ಬಗ್ಗೆ ಸಹಿಷ್ಣುತೆ ಬೆಳೆಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.
ಭ್ರಾತೃತ್ವ, ಸಮಾನತೆ ಮತ್ತು ಸೌಹಾರ್ದತೆಗಳೇ ನಮ್ಮ ಸಂವಿಧಾನದ ಅಡಿಪಾಯ. ಇದನ್ನು ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಮುಖ್ಯಮಂತ್ರಿಗಳು ಪ್ರತಿಪಾದಿಸಿದರು.
2026–27ನೇ ಸಾಲಿನ ಆಯವ್ಯಯದಲ್ಲಿ ಕಲಬುರಗಿ ಮತ್ತು ಹುಬ್ಬಳ್ಳಿಯಲ್ಲಿ ನೂತನ ಹಜ್ ಭವನಗಳನ್ನು ನಿರ್ಮಿಸಲಾಗುವುದು. ಇದು ಯಾತ್ರಿಕರು ಮತ್ತು ಅವರ ಸಂಬಂಧಿಕರಿಗೆ ಹೆಚ್ಚಿನ ಸೌಲಭ್ಯ ನೀಡಲಿದೆ. ನಮ್ಮ ಸರ್ಕಾರವು ಅಲ್ಪಸಂಖ್ಯಾತರ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂದು ಅವರು ಪುನರುಚ್ಚರಿಸಿದರು.
ಹಜ್ ಯಾತ್ರೆ ಸುಖಕರವಾಗಿರಲಿ ಎಂದು ಹಾರೈಸಿದ ಮುಖ್ಯಮಂತ್ರಿಗಳು, ಎಲ್ಲ ಯಾತ್ರಿಕರು ನಿಷ್ಕಲ್ಮಶ ಮನಸ್ಸಿನಿಂದ ಈ ಪವಿತ್ರ ಕಾರ್ಯದಲ್ಲಿ ತೊಡಗಿಸಿಕೊಳ್ಳಲಿ ಎಂದು ಶುಭ ಹಾರೈಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


