ಬೆಂಗಳೂರು: ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ನಟ ವಿಜಯ್ ಅವರ ಭರ್ಜರಿ ಗೆಲುವಿನ ಬಗ್ಗೆ ನಟಿ ಹಾಗೂ ಮಾಜಿ ಸಂಸದೆ ಸುಮಲತಾ ಅಂಬರೀಷ್ ಪ್ರತಿಕ್ರಿಯಿಸಿದ್ದಾರೆ. ವಿಜಯ್ ಅವರ ಈ ಗೆಲುವು ದಶಕಗಳ ಕಾಲ ಆಡಳಿತ ನಡೆಸಿದ ಪಕ್ಷಗಳ ವಿರುದ್ಧ ಜನರಲ್ಲಿ ಮೂಡಿದ್ದ ಅಸಮಾಧಾನ ಅಥವಾ ಆಡಳಿತ ವಿರೋಧಿ ಅಲೆಯ ಫಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ವಿಜಯ್ ಅವರಿಗೆ ಇದ್ದ ಅಪಾರ ಜನಪ್ರಿಯತೆ ಈ ಚುನಾವಣೆಯಲ್ಲಿ ಮತಗಳಾಗಿ ಪರಿವರ್ತನೆಗೊಂಡಿದ್ದು, ಅವರ ದೊಡ್ಡ ಗೆಲುವಿಗೆ ಪ್ರಮುಖ ಕಾರಣವಾಗಿದೆ ಎಂದು ಸುಮಲತಾ ತಿಳಿಸಿದ್ದಾರೆ.
ಪ್ರಜಾಪ್ರಭುತ್ವದಲ್ಲಿ ಜನರ ತೀರ್ಪನ್ನು ಗೌರವಿಸಬೇಕು. ಆದರೆ, ತಮಿಳುನಾಡಿನಲ್ಲಿ ಸೃಷ್ಟಿಯಾಗಿರುವ ಅತಂತ್ರ ವಿಧಾನಸಭೆಯ ಸ್ಥಿತಿಯು ಸರ್ಕಾರದ ಸ್ಥಿರತೆಯ ಬಗ್ಗೆ ಕಳವಳ ಮೂಡಿಸುತ್ತದೆ ಎಂದು ಅವರು ಹೇಳಿದ್ದಾರೆ.
ವಿಜಯ್ ಅವರು ನೀಡಿರುವ ಕೆಲವು ಚುನಾವಣಾ ಭರವಸೆಗಳನ್ನು ಸುಮಲತಾ ಟೀಕಿಸಿದ್ದಾರೆ. “ಅನಗತ್ಯ ಹಾಗೂ ಅನುಷ್ಠಾನಕ್ಕೆ ಕಷ್ಟವಾದ ಭರವಸೆಗಳು ಅವರ ಪಟ್ಟಿಯಲ್ಲಿವೆ. ಈಗಾಗಲೇ ಸಾಲದ ಸುಳಿಯಲ್ಲಿರುವ ತಮಿಳುನಾಡಿನಲ್ಲಿ ಇಂತಹ ಭರವಸೆಗಳನ್ನು ಈಡೇರಿಸುವುದು ದೊಡ್ಡ ಸವಾಲಾಗಬಹುದು” ಎಂದು ಅವರು ಎಚ್ಚರಿಸಿದ್ದಾರೆ.
ಇದೇ ಸಂದರ್ಭದಲ್ಲಿ ಕನ್ನಡ ಚಿತ್ರರಂಗದ ಸ್ಟಾರ್ ಗಳಾದ ಶಿವರಾಜ್ ಕುಮಾರ್ ಮತ್ತು ರಿಷಬ್ ಶೆಟ್ಟಿ ಕೂಡ ವಿಜಯ್ ಅವರ ಸಾಧನೆಯನ್ನು ಶ್ಲಾಘಿಸಿದ್ದು, ಈ ಗೆಲುವು ತಮಿಳುನಾಡು ರಾಜಕೀಯದಲ್ಲಿ ಹೊಸ ಅಧ್ಯಾಯಕ್ಕೆ ನಾಂದಿ ಹಾಡಲಿದೆ ಎಂದು ಆಶಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


