ತಿಪಟೂರು: ಕನ್ನಡ ಸಾಹಿತ್ಯ ಕ್ಷೇತ್ರ ಎಲ್ಲಾ ಕನ್ನಡಿಗರ ಜನಜೀವನದ ಗತಿಬಿಂಬ ಎಂಬ ಹೇಳಿಕೆಯೊಂದಿದೆ, ಅದರಂತೆ ಅದು ಸಾಗಬೇಕಿದೆ. ಆದರೆ ಇತ್ತೀಚೆಗೆ ದುರಾದೃಷ್ಟವಶಾತ್ ನಮ್ಮ ಸಾಹಿತ್ಯ ಜನಜೀವನದ ಗತಿಯನ್ನು ಪ್ರತಿಬಿಂಬಿಸದೆ ಜನಪ್ರಿಯ ಮತ್ತು ದ್ವೇಷ ಸಾಹಿತ್ಯದ ಹಿಂದೆ ಚಲಿಸುತ್ತಿರುವುದು, ವಿಷಾದನೀಯ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ, ಚಿಂತಕ ಪ್ರೊ. ಕೃಷ್ಣಮೂರ್ತಿ ಬಿಳಿಗೆರೆ ಅಭಿಪ್ರಾಯಪಟ್ಟರು.
ಅವರು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ತಿಪಟೂರಿನ ಕೆ.ಎಲ್.ಎ. ಕಾನೂನು ಕಾಲೇಜಿನಲ್ಲಿ ಆಯೋಜಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನ ಆಚರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿ, ಸಾವಿರಾರು ವರ್ಷಗಳ ಇತಿಹಾಸ ಇರುವ ಕನ್ನಡ ಭಾಷೆ ಸಾಹಿತ್ಯ ಸಂಸ್ಕೃತಿ ನಾಡಿನ ಜನರ ಮನೆ ಮಾತಾಗಬೇಕಿದೆ. ಸಾಹಿತ್ಯ ಸಂಸ್ಕೃತಿ ಕಾರ್ಯಕ್ರಮಗಳನ್ನು ಸರ್ಕಾರಗಳು ಹೆಚ್ಚು ಆಯೋಜನೆ ಮಾಡಬೇಕಾಗಿದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೆ.ಎಲ್.ಎ. ಕಾನೂನು ಕಾಲೇಜಿನ ಪ್ರಾಂಶುಪಾಲರಾದ ಪ್ರಸನ್ನರವರು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಕಳೆದ ನಾಲ್ಕು ವರ್ಷಗಳಿಂದ ಜನ ಮಾನಸಕ್ಕೆ ಹತ್ತಿರವಾಗುವಂತಹ ನೂರಾರು ಕಾರ್ಯಕ್ರಮಗಳನ್ನು ತಾಲೂಕಿನಾದ್ಯಂತ ಆಯೋಜಿಸಿ ಮೆಚ್ಚುಗೆಗೆ ಪಾತ್ರವಾಗಿರುವುದು ಅಭಿನಂದನೀಯ ಎಂದು ಅಭಿಪ್ರಾಯಪಟ್ಟರು.
ನಗರದ ಅಕ್ಷಿನ್ ಪ್ಯಾರಾ ಮೆಡಿಕಲ್ ಸಂಸ್ಥೆಯ ಕಾರ್ಯದರ್ಶಿ ಮತ್ತು ಪ್ರಾಂಶುಪಾಲರಾದ ಶಮಂತ ಎಚ್.ಎಸ್. ಮತ್ತು ಎಮ್.ಡಿ. ಶಿವಕುಮಾರ್ ಪ್ರಾಂಶುಪಾಲರು ಬಾಲಕರ ಸ.ಪ.ಪೂ. ಕಾಲೇಜು ತಿಪಟೂರು ಇವರು ಪರಿಷತ್ತಿನ ಬಗ್ಗೆ ಮಾತನಾಡಿದರು.
ವಿದ್ಯಾರ್ಥಿಗಳೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಪ್ರಶ್ನೆಗಳಿಗೆ ಉತ್ತರಿಸಿದ ತಾಲ್ಲೂಕು ಕ.ಸಾ.ಪ ಅಧ್ಯಕ್ಷರಾದ ಎಂ. ಬಸವರಾಜಪ್ಪನವರು ಯುವಕರು, ವಿದ್ಯಾರ್ಥಿಗಳು ಹೆಚ್ಚು ಸಂಖ್ಯೆಯಲ್ಲಿ ಪರಿಷತ್ತಿನ ಆಜೀವ ಸದಸ್ಯತ್ವ ಪಡೆಯುವ ಮೂಲಕ ನಾಡು, ನುಡಿಯ ಪ್ರಗತಿಯಲ್ಲಿ ಪಾಲ್ಗೊಳ್ಳಿ ಎಂದು ಕರೆ ನೀಡಿದರು. ಇದೇ ಸಂದರ್ಭದಲ್ಲಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿದ ತಾಲ್ಲೂಕಿನ ನಾಲ್ಕು ಹೋಬಳಿಗಳ ಅಧ್ಯಕ್ಷರಾದ ಎನ್. ಚನ್ನಬಸಪ್ಪ, ಡಾ. ಪಿ. ಶಂಕರಪ್ಪ ಬಳೆಕಟ್ಟೆ, ಎಚ್. ನಂದೀಶಪ್ಪ ಮತ್ತು ಎಚ್.ಎಸ್. ಓಂಕಾರಯ್ಯನವರನ್ನು ಸನ್ಮಾನಿಸಲಾಯಿತು. ಎಚ್.ಜಿ. ನರಸಿಂಹಮೂರ್ತಿ ಕನ್ನಡ ಗೀತೆಗಳನ್ನು ಹಾಡಿದರು. ಬಿ. ನಾಗರಾಜು, ಪಿ. ರೇಖಾ, ಎಚ್.ಎಸ್. ಮಂಜಪ್ಪ, ಕೆ.ಸಿ. ಮಲ್ಲಿಕಾರ್ಜುನಯ್ಯ, ಟಿ.ಪಿ. ಗೋವಿಂದರಾಜು, ಕಾಲೇಜು ಸಿಬ್ಬಂದಿ ಉಪಸ್ಥಿತರಿದ್ದರು.
ಸಾಮಾಜಿಕ ಅಭಿವೃದ್ಧಿಯ ಹರಿಕಾರ, ಮಾದರಿ ಮೈಸೂರಿನ ನಿರ್ಮಾತೃ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಸರ್ ಎಂ. ವಿಶ್ವೇಶ್ವರಯ್ಯನವರು ನಾಡು, ನುಡಿ, ಸಂಸ್ಕೃತಿಗಳ ಅಭಿವೃದ್ಧಿಗೆ ಪೂರಕವಾಗಿ ಕನ್ನಡ ಸಾಹಿತ್ಯ ಪರಿಷತ್ತನ್ನು ಹುಟ್ಟು ಹಾಕಿದರು. ಇದರ ಪ್ರತಿಫಲವಾಗಿಯೇ ನಮ್ಮ ಚೆಲುವ ಕನ್ನಡ ನಾಡು ಉದಯವಾಯಿತು. ಪರಿಷತ್ತಿನ ಮೊದಲ ಅಧ್ಯಕ್ಷರಾದ ಎಚ್.ವಿ. ನಂಜುಂಡಯ್ಯನವರಿಂದ ಪ್ರಾರಂಭವಾಗಿ ಇದುವರೆಗೆ ಪರಿಷತ್ತು ನಮ್ಮ ಭಾಷಾ ಬೆಳವಣಿಗೆಯಲ್ಲಿ ಹಲವು ಕ್ಲಿಷ್ಟಕರ ಸಂದರ್ಭಗಳಲ್ಲಿ ಮಹತ್ವದ ಪಾತ್ರ ನಿರ್ವಹಿಸಿದೆ.
— ಪ್ರೊ. ಟಿ.ಎಸ್. ನಾಗರಾಜ ಶೆಟ್ಟರು, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


