ಕುಣಿಗಲ್: ಸುಮಾರು ನಾಲ್ಕು ದಶಕಗಳಿಂದ ರಸ್ತೆ ಅಭಿವೃದ್ಧಿ ಕಾಣದ ಕುಣಿಗಲ್ ತಾಲೂಕಿನ ಗಡಿ ಭಾಗ ಗ್ರಾಮಗಳ ಸಮಗ್ರ ರಸ್ತೆ ಅಭಿವೃದ್ಧಿಗೆ ಕ್ರಮ ಕೈಗೊಂಡು ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದು ಶಾಸಕ ಡಾ. ಎಚ್.ಡಿ. ರಂಗನಾಥ್ ತಿಳಿಸಿದರು. ಅವರು ಅಮೃತೂರು ಹೋಬಳಿ ಬೆಟ್ಟಹಳ್ಳಿ ಗ್ರಾಮದಲ್ಲಿ ಎರಡು ಕೋಟಿ ರೂ. ವೆಚ್ಚದ ರಸ್ತೆ, ಚರಂಡಿ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ತಾಲೂಕಿನ ಗಡಿಭಾಗಗಳ ರಸ್ತೆಗಳು ಕಳೆದ ನಲವತ್ತು ವರ್ಷಗಳಿಂದ ಸುಧಾರಣೆ ಆಗದ ಕಾರಣ ಗ್ರಾಮಗಳ ಜನರ ಸಂಚಾರಕ್ಕೆ ತೊಂದರೆ ಉಂಟಾಗಿದೆ, ರಸ್ತೆಗಳ ಅಭಿವೃದ್ಧಿಗೆ ಕ್ರಮಕೈಗೊಳ್ಳುವಂತೆ ಗ್ರಾಮಸ್ಥರು ಮನವಿ ಮಾಡಿದರು, ಈ ಹಿನ್ನೆಲೆಯಲ್ಲಿ ತಾಲೂಕಿನ ರಸ್ತೆಗಳ ಅಭಿವೃದ್ಧಿಗೆ ಅನುದಾನ ಮಂಜೂರು ಮಾಡಿಕೊಡುವಂತೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಪ್ರಸ್ತಾವನೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಸಂಬಂಧಪಟ್ಟ ಸಚಿವರು ಹೆಚ್ಚಿನ ಅನುದಾನ ಬಿಡುಗಡೆ ಮಾಡಿದ ಕಾರಣ ತಾಲೂಕಿನ ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ಧಿಗೆ ಒತ್ತು ನೀಡಿದೆ ಎಂದರು.
ಇದೇ ವೇಳೆ ತಾಲೂಕಿನ ಎಡಿಯೂರು ಹೋಬಳಿ ಕಗ್ಗೆರೆ ಗ್ರಾಮದಲ್ಲಿ 65 ಲಕ್ಷ ರೂ. ವೆಚ್ಚದಲ್ಲಿ ಆಯುಷ್ಮಾನ್ ಆರೋಗ್ಯ ಮಂದಿರ ಕಟ್ಟಡ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಂಡಿದೆ. ಆರೋಗ್ಯ ಮಂದಿರದಲ್ಲಿ ಡೇ ಕೇರ್ ಸೆಂಟರ್, ಲ್ಯಾಬ್ ಮತ್ತು ಸ್ಟೋರ್, ಶೌಚಾಲಯ, ಚಿಕಿತ್ಸಾ ಕೊಠಡಿ, ಪರೀಕ್ಷಾ ವಿಭಾಗ, ದಾಖಲೆ ಕೊಠಡಿ, ವೆಲ್ ನೆಸ್ ಕೊಠಡಿ, ಎರಡು ವಾಸದ ಕೊಠಡಿ, ಲಿವಿಂಗ್ ಹಾಲ್, ಡೈನಿಂಗ್ ಹಾಲ್ ನಿರ್ಮಾಣ ಮಾಡಲಾಗುವುದು. ಇದು ನಿರ್ಮಾಣವಾದರೆ ಈ ಭಾಗದ ಜನರ ಆರೋಗ್ಯ ತಪಾಸಣೆಗೆ ಅನುಕೂಲವಾಗಲಿದೆ ಎಂದು ಹೇಳಿದರು.
ರೈತರು ಎತ್ತಿನ ಗಾಡಿ, ದ್ವಿಚಕ್ರ ವಾಹನ, ಸೈಕಲ್ ಮತ್ತು ಲಘು ವಾಹನಗಳಲ್ಲಿ ಹಾಲು, ದವಸ ಧಾನ್ಯ, ತರಕಾರಿಗಳಂತಹ ಸರಕುಗಳನ್ನು ನಗರ ಮತ್ತು ಪಟ್ಟಣ ಪ್ರದೇಶಕ್ಕೆ ಮಾರಾಟ ಮಾಡಲು ತೆಗೆದುಕೊಂಡು ಹೋಗಲು ಹಾಗೂ ನಗರ ಮತ್ತು ಪಟ್ಟಣ ಪ್ರದೇಶದಿಂದ ಕೃಷಿಗೆ ಅಗತ್ಯವಿರುವ ರಸಗೊಬ್ಬರ ಬಿತ್ತನೆ ಬೀಜಗಳಂತಹ ವಸ್ತುಗಳನ್ನು ತರಲು ಉತ್ತಮ ರಸ್ತೆ ಅತ್ಯವಶ್ಯವಾಗಿರುತ್ತದೆ. ರೈತರ ಸಮಸ್ಯೆ ಅರಿತು ಅಂದಿನ ಸಂಸದ ಡಿ.ಕೆ. ಸುರೇಶ್ ಅವರ ಸಹಕಾರದಿಂದ ನೂರಾರು ಕೋಟಿ ವೆಚ್ಚದಲ್ಲಿ ಗ್ರಾಮೀಣ ಭಾಗದ ರಸ್ತೆಗಳನ್ನು ಅಭಿವೃದ್ಧಿ ಪಡಿಸಿದ ಕಾರಣ, ಇಂದು ರೈತರು ತಮ್ಮ ಸರಕು ಸಾಗಾಣಿಕೆಯನ್ನು ಸಾಗಿಸಲು ಅನುಕೂಲ ವಾಗಿದೆ ಎಂದು ಹೇಳಿದರು.
ಹೋಬಳಿ ಕೇಂದ್ರವಾದ ಅಮೃತೂರಿನಲ್ಲಿ ಸಮರ್ಪಕವಾದ ರಸ್ತೆ ಇಲ್ಲದೆ, ಇಲ್ಲಿನ ನಾಗರಿಕರಿಗೆ ತೀವ್ರ ಅನಾನುಕೂಲವಾಗಿತ್ತು, ಇದನ್ನು ಮನಗಂಡು ನನ್ನ ಅಧಿಕಾರ ಅವಧಿಯಲ್ಲಿ ಕೆಬಿ ಕ್ರಾಸ್ ನಿಂದ ಚೌಕರಿವರೆಗೆ 2.20 ಕೋಟಿ ವೆಚ್ಚದಲ್ಲಿ ರಸ್ತೆ, ಚರಂಡಿ ಹಾಗೂ ರಸ್ತೆಯ ಮಧ್ಯ ಭಾಗದಲ್ಲಿ ಡಿವೈಡರ್ ನಿರ್ಮಾಣ ಮಾಡಿ, ಲೈಟಿಂಗ್ ಅಳವಡಿಸಲಾಗಿದೆ, ಅಲ್ಲದೆ ಎರಡು ಕೋಟಿ ರೂ ಮೊತ್ತದಲ್ಲಿ ತಿಗಳರಪಾಳ್ಯ, ನಾಗನಹಳ್ಳಿ ಗ್ರಾಮಗಳ ಚರಂಡಿ, ರಸ್ತೆಯನ್ನು ಅಭಿವೃದ್ಧಿ ಪಡಿಸಲಾಗಿದೆ ಎಂದರು.
ಸುಧಾಕರ್ ಆತ್ಮಕ್ಕೆ ಶಾಂತಿ ಸಿಗಲಿ: ಸಚಿವ ಡಾ.ಡಿ. ಸುಧಾಕರ್ ಅವರು ಅಲ್ಪ ಸಂಖ್ಯಾತ ಜೈನ ಸಮುದಾಯದವರಾಗಿದ್ದು ಕಾಂಗ್ರೆಸ್ ಮುಖಂಡರಾಗಿರುವರು. ಅವರು ಮೂರು ಬಾರಿ ಶಾಸಕರಾಗಿ, ಎರಡು ಬಾರಿ ಸಚಿವರಾಗಿ ಉತ್ತಮ ಸೇವೆ ಸಲ್ಲಿಸಿದ್ದಾರೆ. ಅವರ ಅಕಾಲಿಕ ಮರಣ ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಹೇಳಿದರು. ಈ ವೇಳೆ ಹೇಮಾವತಿ ಜೆಇ ಗೋವಿಂದೇಗೌಡ, ಟಿಎಪಿಎಸಿಎಂಎಸ್ ಮರಿಯಪ್ಪ, ಗುತ್ತಿಗೆದಾರ ಲಕ್ಷ್ಮಣ್ ಗೌಡ ಇದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


