ಪಾವಗಡ: ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಬಾಬು ಜಗಜೀವನ ರಾಮ್ ಯುವಕ ಸಂಘದ ಕರೆಕ್ಯಾತನಹಳ್ಳಿ ವತಿಯಿಂದ ಅಂಬೇಡ್ಕರ್ ಅವರ 135ನೇ ಜನ್ಮದಿನ ಆಚರಿಸಲಾಯಿತು. ಸಂವಿಧಾನದ ಪೀಠಿಕೆಯನ್ನು ಓದುವ ಮೂಲಕ ಶಾಸಕ ಹೆಚ್.ವಿ. ವೆಂಕಟೇಶ್ ಹಾಗೂ ಮಾಜಿ ಶಾಸಕ ಕೆ.ಎಂ. ತಿಮ್ಮರಾಯಪ್ಪ ಕಾರ್ಯಕ್ರಮ ಉದ್ಘಾಟಿಸಿದರು.
ಕರೆಕ್ಯಾತನಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ಅಂಬೇಡ್ಕರ್ ಅವರ 135ನೇ ಜನ್ಮದಿನವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಹೆಚ್.ವಿ. ವೆಂಕಟೇಶ್, ಕಳೆದ 30 ವರ್ಷಗಳಿಗೆ ಹೋಲಿಸಿದರೆ ಇಂದಿನ ಜನಜೀವನ ಎಲ್ಲಾ ಹಂತದಲ್ಲಿಯೂ ಸ್ವಲ್ಪ ಮಟ್ಟಿಗೆ ಸುಧಾರಣೆ ಕಂಡಿದೆ. ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆಯುವ ನಿಟ್ಟಿನಲ್ಲಿ ಹೆಚ್ಚು ಗಮನ ಹರಿಸಬೇಕು. ತಾಲೂಕಿನ ಯಾವುದೇ ಸಮಸ್ಯೆಗಳಿಗೆ ನಿರಂತರವಾಗಿ ಸ್ಪಂದಿಸುತ್ತಿದ್ದು, ಯಾವುದೇ ಸಮಸ್ಯೆ ಇದ್ದರೆ ನೇರವಾಗಿ ನನ್ನ ಗಮನಕ್ಕೆ ತರಬೇಕು. ಸಮಸ್ಯೆಗಳನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು ಎಂದು ತಿಳಿಸಿದರು.
ತುಮಕೂರು ವಿವಿ ಸಿಂಡಿಕೇಟ್ ಮಾಜಿ ಸದಸ್ಯ ಡಾ. ಕೊಟ್ಟ ಶಂಕರ್ ಮಾತನಾಡಿ, ದಲಿತರಿಗೆ ವಿಮೋಚನೆ ದಾರಿ ತೋರಿಸಿದವರೇ ಡಾ. ಬಾಬಾ ಸಾಹೇಬ್ ಅಂಬೇಡ್ಕರ್. ಬಹುದೊಡ್ಡ ಸಂವಿಧಾನವನ್ನು ದೇಶಕ್ಕೆ ನೀಡಿದ ದಲಿತರಿಗೆ ರಾಜಕೀಯವಾಗಿ ಬೆಳೆಯಲು ಸಾಧ್ಯವಾಗಿಲ್ಲ. ಕೇವಲ ರಾಜಕೀಯವು ಕೆಲವು ವರ್ಗಗಳಿಗೆ ಮಾತ್ರ ಸೀಮಿತವಾಗಿದೆ ಎಂದು ಹೇಳಿದರು.
ಎಸ್ ಸಿ ಘಟಕದ ಮಾಜಿ ಜಿಲ್ಲಾಧ್ಯಕ್ಷ ಈ. ಶಿವಣ್ಣ ಮಾತನಾಡಿ, ಕೇಂದ್ರ ಸರ್ಕಾರ ಸಂವಿಧಾನದ ಮೇಲೆ ದಾಳಿ ನಡೆಸುತ್ತಿದೆ. ಕಳೆದ ಹತ್ತು ವರ್ಷದಲ್ಲಿ ದೇಶದಲ್ಲಿ ದಲಿತರ ಮೇಲೆ ವ್ಯಾಪಕವಾದ ದಬ್ಬಾಳಿಕೆ ಮತ್ತು ದೌರ್ಜನ್ಯಗಳು ನಡೆದಿವೆ. ದಲಿತರ ಅಭಿವೃದ್ಧಿಗಾಗಿ ಇದುವರೆಗೂ ವಿಶೇಷವಾದ ಸಂಸತ್ ಅಧಿವೇಶನ ನಡೆದಿಲ್ಲ. ದಲಿತರನ್ನು ಕೇವಲ ಮತಬ್ಯಾಂಕ್ ರಾಜಕಾರಣಕ್ಕಾಗಿ ಉಪಯೋಗಿಸಿಕೊಳ್ಳಲಾಗುತ್ತಿದೆ. ದೇಶದ ನೈಜ ಸಮಸ್ಯೆಗಳನ್ನು ಕುರಿತು ಪ್ರಧಾನಿ ನರೇಂದ್ರ ಮೋದಿ ಒಂದು ದಿನವೂ ಸಹ ಮಾತನಾಡುತ್ತಿಲ್ಲ. ಕೇವಲ ಚುನಾವಣೆ ಸಂದರ್ಭದಲ್ಲಿ ಮಾತ್ರ ಆವೇಶದಿಂದ ಮಾತನಾಡುತ್ತಾರೆ. ದಲಿತರ ರಕ್ಷಣೆಗಾಗಿ ಮತ್ತು ಸಂವಿಧಾನದ ರಕ್ಷಣೆಗಾಗಿ ಕೇಂದ್ರ ಸರ್ಕಾರ ಯಾವುದೇ ಯೋಜನೆಗಳನ್ನು ರೂಪಿಸಿಲ್ಲ ಎಂದು ದೂರಿದರು.
ರಾಜಕೀಯವು ಯಾರಿಗೂ ಶಾಶ್ವತವಾದುದ್ದಲ್ಲ. ಎಲ್ಲರೂ ಸಮಾನವಾಗಿ ಬದುಕಬೇಕು. ನನ್ನ ಅವಧಿಯಲ್ಲಿ ಹಲವು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. ಮುಂದೆಯೂ ಸಹ ಜನ ಆಶೀರ್ವಾದ ಮಾಡಿದರೆ ಇನ್ನಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡುತ್ತೇನೆ ಎಂದು ಮಾಜಿ ಶಾಸಕ ಕೆ.ಎಂ. ತಿಮ್ಮರಾಯಪ್ಪ ಭರವಸೆ ನೀಡಿದರು.
ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಿ ನಗದು ಬಹುಮಾನ ನೀಡಲಾಯಿತು. ಕೆಂಚರಾಯ, ನಾಗರಾಜ, ಕಾರ್ಯದರ್ಶಿ ಸಿ. ಶಿವಣ್ಣ, ಅಧ್ಯಕ್ಷ ಕೆ.ಎಸ್. ಶಿವಕುಮಾರ್, ವಕೀಲ ಕೆ.ಒ.ಶಿವಣ್ಣ, ಗ್ರಾ.ಪಂ. ಮಾಜಿ ಸದಸ್ಯ ಸ್ವರ್ಣಮ್ಮ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಸುನೀತ, ಸಿ.ಕೆ. ತಿಪ್ಪೇಸ್ವಾಮಿ, ವೆಂಕಟರವಣಪ್ಪ, ಟಿ. ಹನುಮಂತರಾಯ ಇದ್ದರು.
ಭಾರತದ ಸಂವಿಧಾನವು ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಎಲ್ಲಾ ಜಾತಿ ಧರ್ಮಗಳಿಗೂ ಸಮಾನವಾದ ಅವಕಾಶವನ್ನು ನೀಡಿದೆ. ಉನ್ನತ ಶಿಕ್ಷಣದಲ್ಲಿ ಮೀಸಲಾತಿ ಜಾರಿ ಇರುವುದರಿಂದ ಕೆಳವರ್ಗದ ಬಹುತೇಕ ವಿದ್ಯಾರ್ಥಿಗಳು ಇಂಜಿನಿಯರಿಂಗ್, ಮೆಡಿಕಲ್ ಹೀಗೆ ವಿದ್ಯೆ ಪಡೆಯುವಂತಾಯಿತು.
— ಹೆಚ್.ವಿ. ವೆಂಕಟೇಶ್, ಶಾಸಕರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


