ತಿಪಟೂರು: ನಗರದ ನಿವೃತ್ತ ನೌಕರ ಸಂಘದ ಕಚೇರಿಯಲ್ಲಿ ನಡೆದ ತಾಲ್ಲೂಕು ನಿವೃತ್ತ ನೌಕರರ ಸಂಘದ ಮಾಸಿಕ ಸಭೆಯಲ್ಲಿ ಬಸವಣ್ಣ ವಿಚಾರಧಾರೆ ಕುರಿತು ಉಪನ್ಯಾಸ ಕಾರ್ಯಕ್ರಮ ನಡೆಯಿತು.
ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಕೊಟ್ಟೇಶ್ ಎಸ್. ಉಪ್ಪಾರ್ ಮಾತನಾಡಿ, ಬಸವಣ್ಣನನ್ನು ನಿರ್ದಿಷ್ಟ ಜಾತಿಗೆ ಸೀಮಿತಗೊಳಿಸಿ ದೇವರೆಂದು ಪೂಜಿಸುವುದು ಅವರ ಮೂಲ ತತ್ವಗಳಿಗೆ ವಿರುದ್ಧ ಎಂದು ವಿಷಾದ ವ್ಯಕ್ತಪಡಿಸಿದರು. ಅಲ್ಲದೆ ಜಾತಿ, ವರ್ಣ, ಲಿಂಗ ಭೇದಗಳನ್ನು ತಿರಸ್ಕರಿಸಿ, ಮೌಢ್ಯ ವಿರೋಧಿಸಿ ಸಾಮಾಜಿಕ ಸಮಾನತೆಯನ್ನು ಸಾರಿದ ಮಹಾನ್ ಮಾನವತಾವಾದಿಯನ್ನು ಸ್ಥಾವರ ರೂಪದಲ್ಲಿ ಕಾಣುವುದು ವಿಪರ್ಯಾಸ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ಕೆ.ಎಂ. ರಾಜಣ್ಣ ಬಸವಣ್ಣರು ಸಾಮಾಜಿಕ ಬದಲಾವಣೆಯ ಹರಿಕಾರರಾಗಿದ್ದು, ಅವರ ತತ್ವಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಿಶ್ವ ಕಾರ್ಮಿಕ ದಿನಾಚರಣೆ ಅಂಗವಾಗಿ ಪೌರ ಕಾರ್ಮಿಕ ನಾಗರಾಜುರವರನ್ನು ಗೌರವಿಸಲಾಯಿತು. ಉಪನ್ಯಾಸದಲ್ಲಿ ಎಚ್.ಜಿ. ನರಸಿಂಹಮೂರ್ತಿ, ಪಿ.ಆರ್. ಗುರುಸ್ವಾಮಿ, ಎಚ್. ಎಸ್. ಮಂಜಪ್ಪ, ಡಿ.ಎಸ್. ಮರುಳಪ್ಪ, ಕೇಂದ್ರ ಸಾಹಿತ್ಯ ವೇದಿಕೆಯ ತಾ. ಅಧ್ಯಕ್ಷೆ ಲತಾಮಣಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


