ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಅಳ್ವೆಕೋಡಿ ಕಡಲತೀರ ಹಾಗೂ ತಟ್ಟಿಹಕ್ಕಲು (ವೆಂಕಟಾಪುರ) ನದಿಯ ಬಳಿ ಸಂಭವಿಸಿದ ಭೀಕರ ಜಲ ದುರಂತದಲ್ಲಿ ಕಪ್ಪೆಚಿಪ್ಪು (Mussels) ಸಂಗ್ರಹಿಸಲು ಹೋಗಿ ನೀರಿನಲ್ಲಿ ಮುಳುಗಿ ಮೃತಪಟ್ಟವರ ಸಂಖ್ಯೆ 11ಕ್ಕೆ ಏರಿಕೆಯಾಗಿದೆ.
ನಿನ್ನೆ (ಮೇ 24) ನಡೆದ ಈ ಅವಘಡದಲ್ಲಿ 10 ಜನರ ಮೃತದೇಹಗಳು ಪತ್ತೆಯಾಗಿದ್ದವು. ಆದರೆ ನಾಪತ್ತೆಯಾಗಿದ್ದ ಮಾದೇವ್ ನಾಯ್ಕ್ ಎಂಬುವವರ ಪತ್ತೆಗಾಗಿ ಇಂದು ಎನ್ ಡಿಆರ್ ಎಫ್ (NDRF) ಮತ್ತು ಈಶ್ವರ ಮಲ್ಪೆ ಅವರ ತಂಡ ನಡೆಸಿದ ಜಂಟಿ ಶೋಧ ಕಾರ್ಯಾಚರಣೆಯಲ್ಲಿ ಅವರ ಮೃತದೇಹವೂ ಪತ್ತೆಯಾಗಿದ್ದು, ಇದರೊಂದಿಗೆ ಒಟ್ಟು ಸಾವಿನ ಸಂಖ್ಯೆ 11ಕ್ಕೇರಿದೆ. ನೀರಿನ ಅಬ್ಬರಕ್ಕೆ 11 ಮಂದಿ ಜಲಸಮಾಧಿಯಾಗಿದ್ದರೆ, ಇಬ್ಬರು ಮಹಿಳೆಯರನ್ನು ರಕ್ಷಿಸುವಲ್ಲಿ ರಕ್ಷಣಾ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ, ಮೃತರ ಪೈಕಿ ಮಾಸ್ತಮ್ಮ ನಾಯ್ಕ್ ಎಂಬುವವರು ನೀರಿನಲ್ಲಿ ಕಪ್ಪೆಚಿಪ್ಪು ಹೆಕ್ಕುತ್ತಿದ್ದಾಗ ಮುಳುಗುತ್ತಿರುವುದನ್ನು ಕಂಡ ಅವರ ಮಗ ಉಮೇಶ್ ನಾಯ್ಕ್, ತಾಯಿಯನ್ನು ರಕ್ಷಿಸಲು ಬಂಡೆಯ ಮೇಲಿಂದ ನೀರಿಗೆ ಹಾರಿದ್ದಾರೆ. ಆದರೆ, ತಾಯಿಯನ್ನು ಎಳೆದುಕೊಂಡು ಬರುವ ಪ್ರಯತ್ನದಲ್ಲಿ ಯಶಸ್ವಿಯಾಗದ ಉಮೇಶ್, ಹಿಂತಿರುಗುವಾಗ ಮುಳುಗುತ್ತಿದ್ದ ಇತರ ಇಬ್ಬರು ಮಹಿಳೆಯರು ಇವರ ಕಾಲನ್ನು ಹಿಡಿದು ಎಳೆದಿದ್ದರಿಂದ ಇವರೂ ಸಹ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಈ ದುರಂತದಿಂದಾಗಿ ಹಲವು ಕುಟುಂಬಗಳು ಬೀದಿಗೆ ಬಿದ್ದಿವೆ. ಮಾದೇವ ನಾಯ್ಕ್ ಮತ್ತು ಲಕ್ಷ್ಮಿ ನಾಯ್ಕ್ ದಂಪತಿ ಇಬ್ಬರೂ ಮೃತಪಟ್ಟಿದ್ದರಿಂದ ಅವರ ಮಕ್ಕಳಾದ ದರ್ಶನ ಮತ್ತು ಕೀರ್ತನಾ ಅನಾಥರಾಗಿದ್ದಾರೆ. ಮತ್ತೊಂದೆಡೆ, 10 ವರ್ಷಗಳ ಹಿಂದೆಯೇ ಪತಿಯನ್ನು ಕಳೆದುಕೊಂಡು ನಾಲ್ಕು ಮಕ್ಕಳಿಗೆ ಆಧಾರವಾಗಿದ್ದ ಲಕ್ಷ್ಮೀ ಶಿವರಾಮ ನಾಯ್ಕ್ ಅವರೂ ಈ ದುರಂತದಲ್ಲಿ ಕೊನೆಯುಸಿರೆಳೆದಿದ್ದು, ಮಕ್ಕಳ ಭವಿಷ್ಯ ಕತ್ತಲಾದಂತಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


