ಬೆಂಗಳೂರು: ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯನ್ನು ಕಾಂಗ್ರೆಸ್ ನಾಯಕರು ರಾಜಕೀಯಗೊಳಿಸುತ್ತಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ತೀವ್ರವಾಗಿ ಆಕ್ಷೇಪಿಸಿದ್ದಾರೆ. ಅಲ್ಲದೆ, ಇಂಧನಗಳ ಮೇಲಿನ ಮೌಲ್ಯವರ್ಧಿತ ತೆರಿಗೆಯನ್ನು (ವ್ಯಾಟ್) ತಕ್ಷಣವೇ ಕಡಿತಗೊಳಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅವರು ಒತ್ತಾಯಿಸಿದ್ದಾರೆ.
ಬೆಂಗಳೂರಿನಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, “ರಾಜ್ಯ ಸರ್ಕಾರ ವಿಧಿಸಿರುವ ಹೆಚ್ಚಿನ ವ್ಯಾಟ್ ನಿಂದಾಗಿ ಕರ್ನಾಟಕದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ದೆಹಲಿ ಸೇರಿದಂತೆ ದೇಶದ ಇತರ ಹಲವು ರಾಜ್ಯಗಳಿಗಿಂತ ಹೆಚ್ಚಾಗಿದೆ. ಕಾಂಗ್ರೆಸ್ ಸರ್ಕಾರವು ಇಂಧನ ಬೆಲೆ ಏರಿಕೆಯಿಂದ ಹೆಚ್ಚುವರಿ ಆದಾಯ ಗಳಿಸುತ್ತಿದ್ದರೂ, ವ್ಯಾಟ್ ಕಡಿಮೆ ಮಾಡುವ ಬದಲು ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುತ್ತಿದೆ” ಎಂದು ಟೀಕಿಸಿದರು.
“ಬೆಲೆ ಏರಿಕೆಯಿಂದ ಕೇಂದ್ರ ಸರ್ಕಾರಕ್ಕೆ ಯಾವುದೇ ಹೆಚ್ಚುವರಿ ಆದಾಯ ಹೋಗುತ್ತಿಲ್ಲ. ಆದರೆ ರಾಜ್ಯ ಸರ್ಕಾರ ಮಾತ್ರ ಇಂಧನ ತೆರಿಗೆಯಿಂದ ವಾರ್ಷಿಕವಾಗಿ ಸುಮಾರು 6,000 ಕೋಟಿ ರೂ.ಗಳಷ್ಟು ಹೆಚ್ಚುವರಿ ಆದಾಯ ಪಡೆಯುತ್ತಿದೆ. ಈ ಹಣವನ್ನು ಸರ್ಕಾರ ತನ್ನ ಗ್ಯಾರಂಟಿ ಯೋಜನೆಗಳಿಗಾಗಿ ಬಳಸಿಕೊಳ್ಳುತ್ತಿದೆ” ಎಂದು ಆರ್. ಅಶೋಕ್ ಕಿಡಿಕಾರಿದರು.
“ಸರ್ಕಾರಕ್ಕೆ ನಿಜವಾಗಿಯೂ ಜನರ ಮೇಲೆ ಕಾಳಜಿ ಇದ್ದರೆ ತಾನು ವಿಧಿಸುತ್ತಿರುವ ತೆರಿಗೆಯನ್ನು ಕಡಿತಗೊಳಿಸಲಿ. ಇಲ್ಲದಿದ್ದರೆ, ಇಂಧನ ದರ ಏರಿಕೆಯಿಂದ ತನಗೆ ಸಿಗುತ್ತಿರುವ ಹೆಚ್ಚುವರಿ ಆದಾಯ ಎಷ್ಟು ಎಂಬುದನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಲಿ” ಎಂದು ಸವಾಲು ಹಾಕಿದ ಅವರು, ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ ಮಾಡುತ್ತಿರುವ ಪ್ರತಿಭಟನೆಗಳು ಜನರನ್ನು ವಂಚಿಸುವ ತಂತ್ರವಾಗಿದೆ ಎಂದರು. ಜಾಗತಿಕವಾಗಿ ಯುದ್ಧದ ಪರಿಸ್ಥಿತಿಯಿಂದಾಗಿ ಹಲವು ದೇಶಗಳು ಪೆಟ್ರೋಲ್ ಬಳಕೆಗೆ ಕಟ್ಟುನಿಟ್ಟಿನ ನಿಯಮಗಳನ್ನು ತಂದಿದ್ದರೂ, ಭಾರತದಲ್ಲಿ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅಂತಹ ಯಾವುದೇ ನಿರ್ಬಂಧಗಳನ್ನು ವಿಧಿಸದೆ ಜನರಿಗೆ ನೆರವಾಗಿದೆ ಎಂದು ಸಮರ್ಥಿಸಿಕೊಂಡರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


