ತುಮಕೂರು: ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿರುವ ಡಿ.ಕೆ. ಶಿವಕುಮಾರ್ ಅವರಿಗೆ ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಸುರೇಶ್ ಗೌಡ ಅವರು ಅಭಿನಂದನೆ ಸಲ್ಲಿಸಿದ್ದಾರೆ. ಇದೇ ವೇಳೆ, ಮುಂಬರುವ ತಮ್ಮ ಎರಡು ವರ್ಷಗಳ ಅಧಿಕಾರಾವಧಿಯಲ್ಲಿ ರಾಜ್ಯದ ಹೆಚ್ಚಿನ ಅಭಿವೃದ್ಧಿ ಹಾಗೂ ಜನ ಕಲ್ಯಾಣಕ್ಕಾಗಿ ಕೆಲಸ ಮಾಡಲಿ ಎಂದು ಅವರು ಹಾರೈಸಿದ್ದಾರೆ.
ಆದರೆ, ನೂತನ ಸಂಪುಟ ರಚನೆ ಮತ್ತು ಕಾಂಗ್ರೆಸ್ ನ ಆಂತರಿಕ ರಾಜಕೀಯದ ಕುರಿತು ಶಾಸಕ ಸುರೇಶ್ ಗೌಡ ತೀವ್ರ ಅಸಮಾಧಾನ ಹಾಗೂ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಇವತ್ತಿನ ಸಂಪುಟ ರಚನೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ, ಇದರಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ವೈಯಕ್ತಿಕ ಆಯ್ಕೆಯ ಒಬ್ಬನೇ ಒಬ್ಬ ಸಚಿವರೂ ಇದ್ದಂತೆ ಕಾಣುತ್ತಿಲ್ಲ. ಯಾವುದೇ ಒಬ್ಬ ಹೊಸ ನಾಯಕ ಅಧಿಕಾರಕ್ಕೆ ಬಂದಾಗ, ತಮ್ಮದೇ ಆದ ಆಯ್ಕೆಯ ಜನರನ್ನು ಇಟ್ಟುಕೊಂಡು ಆಡಳಿತ ನಡೆಸಲು ಬಯಸುವುದು ಸಹಜ. ಆದರೆ, ಕಾಂಗ್ರೆಸ್ ಪಕ್ಷದೊಳಗಿರುವ ಆಂತರಿಕ ಹಿತಾಸಕ್ತಿಗಳು ಹಾಗೂ ಬಣ ರಾಜಕೀಯದ ಕಾರಣದಿಂದಾಗಿ ಎಲ್ಲರೂ ಸೇರಿಕೊಂಡು ಶಿವಕುಮಾರ್ ಅವರ ಕೈಕಾಲುಗಳನ್ನು ಕಟ್ಟಿ ಹಾಕಿದಂತೆ ಭಾಸವಾಗುತ್ತಿದೆ ಎಂದು ಸುರೇಶ್ ಗೌಡ ವಿಶ್ಲೇಷಿಸಿದ್ದಾರೆ.
ಮೊದಲ ಹಂತದ ಸಂಪುಟ ವಿಸ್ತರಣೆಯಲ್ಲಿ ಒಬ್ಬರೇ ಒಬ್ಬ ಮಹಿಳೆಗೆ ಸ್ಥಾನ ನೀಡದೇ ಇರುವುದು ಎದ್ದು ಕಾಣುವ ದೊಡ್ಡ ಲೋಪವಾಗಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಶೇಕಡಾ 33ರಷ್ಟು ಮಹಿಳಾ ಮೀಸಲಾತಿ ಮಸೂದೆಯನ್ನು ಮಂಡಿಸಿದಾಗ ಅದನ್ನು ಸೋಲಿಸಲು ಯತ್ನಿಸಿದ ಕಾಂಗ್ರೆಸ್‌ನ ಮಹಿಳಾ ವಿರೋಧಿ ಧೋರಣೆ, ಈಗಿನ ಸಂಪುಟ ರಚನೆಯಲ್ಲಿಯೂ ಮುಂದುವರಿದಿದೆ ಎಂದು ಅವರು ಲೇವಡಿ ಮಾಡಿದರು.
ನೂತನ ಸಂಪುಟದಲ್ಲಿ ಮಾಜಿ ಮುಖ್ಯಮಂತ್ರಿಗಳ ಪುತ್ರ ಡಾ. ಯತೀಂದ್ರ ಅವರನ್ನು ಬಿಟ್ಟರೆ ಯಾವುದೇ ಹೊಸ ಮುಖಗಳಿಗೆ ಆದ್ಯತೆ ನೀಡಿಲ್ಲ. ಯತೀಂದ್ರ ಅವರ ಸೇರ್ಪಡೆಗೆ ಯಾವ ಮಾನದಂಡವನ್ನು ಬಳಸಲಾಗಿದೆ ಎಂದು ಹೆಚ್ಚು ಯೋಚಿಸುವ ಅಗತ್ಯ ಯಾರಿಗೂ ಇಲ್ಲ , ಮುಖ್ಯಮಂತ್ರಿಯಾಗಲು ದೊಡ್ಡ ಮಟ್ಟದ ತಪಸ್ಸನ್ನೇ ಮಾಡಬೇಕಾಗಿ ಬಂದ ಡಿ.ಕೆ. ಶಿವಕುಮಾರ್ ಅವರು, ಈಗ ‘ಹೊಸ ಬಾಟಲಿಯಲ್ಲಿ ಹಳೆಯ ಮದ್ಯ’ ಎಂಬಂತೆ ಹಳೆಯ ಮುಖಗಳನ್ನೇ ಇಟ್ಟುಕೊಂಡು ರಾಜ್ಯಕ್ಕೆ ಹೇಗೆ ತಾನೆ ದಕ್ಷ ಮತ್ತು ಪ್ರಾಮಾಣಿಕ ಆಡಳಿತ ನೀಡಲು ಸಾಧ್ಯ ಎಂದು ಸುರೇಶ್ ಗೌಡ ಪ್ರಶ್ನಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


