ತುಮಕೂರು: ನೀಟ್ ವಿಚಾರವನ್ನು ಮುಂದಿಟ್ಟುಕೊಂಡು ದೇಶ ಹಾಗೂ ರಾಜ್ಯದಲ್ಲಿ ಅರಾಜಕತೆ ಸೃಷ್ಟಿಸಲು ಕಾಂಗ್ರೆಸ್ ಮುಂದಾಗಿದ್ದು, ರಾಜ್ಯದಲ್ಲಿ ಬಿಜೆಪಿ ಶಾಸಕರ ಮೇಲೆ ಗೂಂಡಾಗಿರಿ ನಡೆಸುತ್ತಿದೆ ಎಂದು ಆರೋಪಿಸಿ ಗುರುವಾರ ಜಿಲ್ಲಾ ಬಿಜೆಪಿ ಮುಖಂಡರು ನಗರದ ಬಿಜಿಎಸ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸುವ ಮೂಲಕ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಶಾಸಕ ಜಿ.ಬಿ. ಜ್ಯೋತಿಗಣೇಶ್, ಜನರಿಂದ ತಿರಸ್ಕೃತರಾಗಿರುವ ಕಾಂಗ್ರೆಸ್, ಜನರ ವಿಶ್ವಾಸಗಳಿಸಿ ಅಧಿಕಾರದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವನ್ನು ಅಭದ್ರಗೊಳಿಸಲು ಹೊರಟಿರುವುದು ನಾಚಿಕೆಗೇಡು. ನೀಟ್ ಪರೀಕ್ಷೆ ನೆಪ ಮಾಡಿಕೊಂಡು ದೇಶದ್ರೋಹಿಗಳ ಜೊತೆ ಸೇರಿ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಬುಡಮೇಲು ಮಾಡುವ ಮೂಲಕ ರಾಜಕೀಯ ಲಾಭ ಪಡೆಯಲು ಹೊರಟ ಕಾಂಗ್ರೆಸ್ ಉದ್ದೇಶ ಈಡೇರುವುದಿಲ್ಲ ಎಂದು ಕಿಡಿಕಾರಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಹೆಚ್.ಎಸ್. ರವಿಶಂಕರ್ ಹೆಬ್ಬಾಕ ಮಾತನಾಡಿ, ಕಾಂಗ್ರೆಸ್ ಪಕ್ಷ ಅವಸಾನದ ಅಂಚಿನಲ್ಲಿದೆ. ದೇಶದಲ್ಲಿ ಕೇವಲ ಮೂರು ಕಡೆ ಕಾಂಗ್ರೆಸ್ ಆಡಳಿತದಲ್ಲಿದೆ. ಉತ್ತಮ ಆಡಳಿತ ನಡೆಸುತ್ತಿರುವ ಪ್ರಧಾನಿ ಮೋದಿಯವರ ವರ್ಚಸ್ಸು ಕಳೆಯಲು, ತನ್ನರಾಜಕೀಯ ಅಸ್ತಿತ್ವ ಉಳಿಸಿಕೊಳ್ಳುವುದಕ್ಕಾಗಿ ಕಾಂಗ್ರೆಸ್ ದೇಶದ್ರೋಹಿಗಳೊಂದಿಗೆ ಸೇರಿ ಗೊಂದಲ ಮಾಡಲು ಹೊರಟಿದೆ ಎಂದರು.
ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಟಿ.ಹೆಚ್. ಹನುಮಂತರಾಜು, ನಗರ ಅಧ್ಯಕ್ಷ ಧನುಷ್, ಮಹಿಳಾ ಮೋರ್ಚಾ ಅಧ್ಯಕ್ಷೆ ಕ್ಷೇತ್ರ ಮಂಜುನಾಥ್, ನಗರ ಅಧ್ಯಕ್ಷೆ ವಸಂತ ಸುದರ್ಶನ್, ಅಲ್ಪಸಂಖ್ಯಾತರ ಮೋರ್ಚಾ ಅಧ್ಯಕ್ಷ ಎನಾಯತ್ಜೈನ್, ಮುಖಂಡರಾದ ಸತ್ಯಮಂಗಲ ಜಗದೀಶ್, ಕೆ.ವೇದಮೂರ್ತಿ, ನವಚೇತನ್, ಬಂಬೂ ಮೋಹನ್, ಪ್ರೀತಂ ಜೈನ್, ವಿರೂಪಾಕ್ಷಪ್ಪ, ತಾಪಂ ಮಾಜಿ ಅಧ್ಯಕ್ಷ ವೆಂಕಟೇಶ್, ಸಿ.ಎನ್. ರಮೇಶ್, ಮಲ್ಲಿಕಾರ್ಜುನ್, ಪುಟ್ಟರಾಜು, ಹನುಮಂತರಾಜು, ರೇಖಾರಾಜ್, ಸಿದ್ಧಗಂಗಯ್ಯ, ಅಂಜನಾಮೂರ್ತಿ, ಗಂಗೇಶ್ ಹಡ್ಲಿಕಲ್ಲು, ವೆಂಕಟೇಶಾಚಾರ್, ಎನ್. ರಾಜಣ್ಣ, ಬ್ರಹ್ಮಪ್ರಕಾಶ್, ಜಗದೀಶ್ ಸೇರಿದಂತೆ ವಿವಿಧ ಪದಾಧಿಕಾರಿಗಳು ಭಾಗವಹಿಸಿದ್ದರು.
ಕಾಂಗ್ರೆಸ್ ಜನತಾ ಪಾರ್ಟಿಗೆ ಭಾರತದ ಬಗ್ಗೆ ಗೌರವವಿಲ್ಲ. ನೇಪಾಳ, ಶ್ರೀಲಂಕಾ, ಬಾಂಗ್ಲಾದಂತೆ ಭಾರತದಲ್ಲಿ ಅರಾಜಕತೆ ಸೃಷ್ಟಿ ಮಾಡಲು ಹೊರಟಿದ್ದೇವೆ ಎನ್ನುವ ದೇಶದ್ರೋಹಿಗಳ ಜೊತೆ ಸೇರಿರುವ ಕಾಂಗ್ರೆಸ್ ನ ಉದ್ದೇಶ ದೇಶದ ಜನರಿಗೆ ತಿಳಿದಿದೆ. ಮುಂದಿನ ಚುನಾವಣೆಯಲ್ಲಿ ಇದಕ್ಕೆ ತಕ್ಕಪಾಠ ಕಲಿಸಬೇಕಾಗುತ್ತದೆ. ವಿಶ್ವದ ಅನೇಕ ರಾಷ್ಟ್ರಗಳು ಅಭದ್ರತೆಯಲ್ಲಿರುವಾಗ ಪ್ರಧಾನಿ ಮೋದಿಯವರ ಆಡಳಿತದಿಂದಾಗಿ ಭಾರತ ಸುಭದ್ರವಾಗಿದೆ. ಬೆಂಗಳೂರಿನಲ್ಲಿ ಬಿಜೆಪಿ ಶಾಸಕರ ಮೇಲೆ ಕಾಂಗ್ರೆಸ್ ನವರು ಹಲ್ಲೆಮಾಡಿದ್ದಾರೆ, ಮೊಟ್ಟೆ ಎಸೆದಿದ್ದಾರೆ. ಇದು ಖಂಡನೀಯ, ಬಿಜೆಪಿ ಸಹಿಸುವುದಿಲ್ಲ.
— ಜಿ.ಬಿ.ಜ್ಯೋತಿಗಣೇಶ್, ನಗರ ಶಾಸಕ.
ರಾಜ್ಯದಲ್ಲಿ ಕಾಂಗ್ರೆಸ್ನವರು ಬಿಜೆಪಿ ಶಾಸಕರ ಮೇಲೆ ಹಲ್ಲೆ ಮಾಡಿದ್ದಾರೆ. ಪ್ರಜಾಪ್ರತಿನಿಧಿಗಳ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಸರ್ಕಾರ ಕೂಡಲೇ ಕಾನೂನು ಕ್ರಮ ತೆಗೆದುಕೊಳ್ಳಬೇಕು.
-ರವಿಶಂಕರ್ ಹೆಬ್ಬಾಕ, ಬಿಜೆಪಿ ಜಿಲ್ಲಾಧ್ಯಕ್ಷ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


