ವರದಿ: ಅರವಿಂದ ಮಲ್ಲಿಗೆ, ಬೀದರ್
ಬೀದರ್: ಜಿಲ್ಲೆಯಲ್ಲಿ ಮಾದಕ ವಸ್ತುಗಳ ಮಾರಾಟ ಮತ್ತು ಸಾಗಾಟ ಜಾಲದ ವಿರುದ್ಧ ಪೊಲೀಸರು ಬಿಗಿ ಪಂಜಾ ಚಾಚಿದ್ದಾರೆ. ನಗರದ ಗಾಂಧಿ ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆದ ಎರಡು ಪ್ರತ್ಯೇಕ ದಾಳಿಗಳಲ್ಲಿ ಪೊಲೀಸರು, ಒಟ್ಟು ₹14.50 ಲಕ್ಷ ಮೌಲ್ಯದ 25 ಕೆ.ಜಿ. ಗಾಂಜಾ ವಶಪಡಿಸಿಕೊಂಡು, ಮೂವರು ಆರೋಪಿಗಳನ್ನು ಹೆಡೆಮುರಿಕಟ್ಟಿದ್ದಾರೆ.
ಜೂನ್ 10 ರಂದು ನಗರದ ಇರಾನಿ ಗಲ್ಲಿಯಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮತ್ತು ಸಾಗಾಟ ನಡೆಯುತ್ತಿರುವ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿ ಲಭಿಸಿತ್ತು. ಜಿಲ್ಲಾ ಪೊಲೀಸ್ ಅಧೀಕ್ಷಕ (SP) ಪ್ರದೀಪ ಗುಂಟಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಚಂದ್ರಕಾಂತ ಪೂಜಾರಿ ಹಾಗೂ ಡಿವೈಎಸ್ಪಿ ದೂದ್ ಪೀರ್ ಹುಸೇನಸಾಬ್ ಮುಲ್ಲಾ ಅವರ ಮಾರ್ಗದರ್ಶನದಲ್ಲಿ, ಗಾಂಧಿಗಂಜ್ ಠಾಣೆಯ ಇನ್ಸ್ಪೆಕ್ಟರ್ ಆನಂದರಾವ್ ಎಸ್.ಎನ್. ನೇತೃತ್ವದ ವಿಶೇಷ ತಂಡ ಎರಡು ಪ್ರತ್ಯೇಕ ಕಾರ್ಯಾಚರಣೆಗಳನ್ನು ಕೈಗೊಂಡಿತು.
ಮೊದಲ ದಾಳಿ: ಇರಾನಿ ಗಲ್ಲಿಯಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ವೇಳೆ ದಾಳಿ ನಡೆಸಿದ ಪೊಲೀಸರು, ಓರ್ವ ಮಹಿಳಾ ಆರೋಪಿಯನ್ನು ಬಂಧಿಸಿದ್ದಾರೆ. ಆಕೆಯಿಂದ ₹8 ಲಕ್ಷ ಮೌಲ್ಯದ 16 ಕೆ.ಜಿ. ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ.
ಎರಡನೇ ದಾಳಿ: ಅದೇ ದಿನ ಮಧ್ಯಾಹ್ನ ಇರಾನಿ ಗಲ್ಲಿಯಲ್ಲೇ ಮತ್ತೊಂದು ಯಶಸ್ವಿ ಕಾರ್ಯಾಚರಣೆ ನಡೆದಿದೆ. ಗಾಂಜಾವನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಓರ್ವ ಮಹಿಳೆ ಮತ್ತು ಓರ್ವ ಪುರುಷನನ್ನು ಬಂಧಿಸಲಾಗಿದ್ದು, ಅವರ ಬಳಿಯಿದ್ದ ₹4.50 ಲಕ್ಷ ಮೌಲ್ಯದ 9 ಕೆ.ಜಿ. ಗಾಂಜಾ ಹಾಗೂ ಸಾಗಾಟಕ್ಕೆ ಬಳಸುತ್ತಿದ್ದ 1 ಆಟೋ ರಿಕ್ಷಾವನ್ನು ಜಪ್ತಿ ಮಾಡಲಾಗಿದೆ.
ಒಟ್ಟು ಜಪ್ತಿ ವಿವರ: ಎರಡು ಪ್ರಕರಣಗಳಿಂದ ಒಟ್ಟು 25 ಕೆ.ಜಿ. ಗಾಂಜಾ (ಮೌಲ್ಯ ₹12.50 ಲಕ್ಷ) ಹಾಗೂ ₹2 ಲಕ್ಷ ಮೌಲ್ಯದ ಆಟೋ ರಿಕ್ಷಾ ಸೇರಿದಂತೆ ಒಟ್ಟು ₹14.50 ಲಕ್ಷ ಮೌಲ್ಯದ ಸೊತ್ತನ್ನು ವಶಪಡಿಸಿಕೊಳ್ಳಲಾಗಿದೆ.
ಕಾರ್ಯಾಚರಣೆ ತಂಡಕ್ಕೆ ಶ್ಲಾಘನೆ:
ಈ ಯಶಸ್ವಿ ಕಾರ್ಯಾಚರಣೆಯಲ್ಲಿ ನ್ಯೂಟೌನ್ ಠಾಣೆಯ ಪಿಐ ವಿಜಯಕುಮಾರ, ಮಾರ್ಕೆಟ್ ಠಾಣೆಯ ಸಿಪಿಐ ಫಾಲಕ್ಷಯ್ಯ ಹಿರೇಮಠ, ಡಿಎಸ್ಎ ಪಿಎಸ್ಐ ವಿಶ್ವರಾಧ್ಯ, ಸಬ್ ಅರ್ಬನ್ ಠಾಣೆಯ ಪಿಎಸ್ಐ ತಸ್ಲಿಮಾ ಹಾಗೂ ಅಪರಾಧ ವಿಭಾಗದ ಸಿಬ್ಬಂದಿಗಳಾದ ನವೀನ್, ಅನೀಲ್, ಇರ್ಫಾನ್, ಗಂಗಾಧರ, ಸುಧಾಕರ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. ಯಶಸ್ವಿಯಾಗಿ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ ಇಡೀ ತಂಡವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ ಗುಂಟಿ ಅವರು ಮುಕ್ತಕಂಠದಿಂದ ಅಭಿನಂದಿಸಿದ್ದಾರೆ.
ಬಂಧಿತ ಮೂವರೂ ಆರೋಪಿಗಳ ವಿರುದ್ಧ ಮಾದಕ ವಸ್ತು ನಿಯಂತ್ರಣ ಕಾಯ್ದೆ (NDPS Act) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಸದ್ಯ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


