ತುಮಕೂರು: ಪ್ರಧಾನ ಮಂತ್ರಿ ವಿಕಸಿತ ಭಾರತ್ ರೋಜಾರ್ ಯೋಜನೆ (PM–VBRY)ಯ ಯಶಸ್ವಿ ಅನುಷ್ಠಾನದ ಅಂಗವಾಗಿ, ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು 2026ರ ಜೂನ್ 19ರಂದು ನವದೆಹಲಿಯ ವಿಜ್ಞಾನ ಭವನದಲ್ಲಿ ಬೃಹತ್ ರಾಷ್ಟ್ರೀಯ ಕಾರ್ಯಕ್ರಮವನ್ನು ಆಯೋಜಿಸಿದೆ. ಭಾರತದ ಗೌರವಾನ್ವಿತ ಪ್ರಧಾನಮಂತ್ರಿಗಳ ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮ ನಡೆಯಲಿದೆ.
ಈ ಐತಿಹಾಸಿಕ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ನೇರ ಲಾಭ ವರ್ಗಾವಣೆ (DBT) ಮೂಲಕ ದೇಶದ ಫಲಾನುಭವಿಗಳಿಗೆ ಸುಮಾರು ₹2,400 ಕೋಟಿ ಮೊತ್ತದ ಪ್ರೋತ್ಸಾಹ ಧನವನ್ನು ನೇರವಾಗಿ ವಿತರಿಸಲಿದ್ದಾರೆ. PM–VBRY ಯೋಜನೆಯಡಿ ನೀಡಲಾಗುತ್ತಿರುವ ಈ ಆರ್ಥಿಕ ಬೆಂಬಲವು ದೇಶದಲ್ಲಿ 15 ಲಕ್ಷಕ್ಕೂ ಹೆಚ್ಚು ಜನರಿಗೆ ಹೆಚ್ಚುವರಿ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ನೆರವಾಗಲಿದೆ ಎಂದು ಅಂದಾಜಿಸಲಾಗಿದೆ.
ನವದೆಹಲಿಯಲ್ಲಿ ನಡೆಯಲಿರುವ ಮುಖ್ಯ ಕಾರ್ಯಕ್ರಮದಲ್ಲಿ ದೇಶದ ವಿವಿಧ ಭಾಗಗಳನ್ನು ಪ್ರತಿನಿಧಿಸುವ ಉದ್ಯೋಗದಾತರು, ಉದ್ಯೋಗಿ ಫಲಾನುಭವಿಗಳು ಮತ್ತು ಗಣ್ಯರು ಸೇರಿದಂತೆ ಸುಮಾರು 1,200 ಆಹ್ವಾನಿತರು ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ದೇಶದ ವಿವಿಧ ಪ್ರದೇಶಗಳ ಫಲಾನುಭವಿಗಳೊಂದಿಗೆ ನೇರ ಸಂವಹನ ನಡೆಸಲಿದ್ದು, ಇಡೀ ಕಾರ್ಯಕ್ರಮವು ದೂರದರ್ಶನದಲ್ಲಿ ನೇರ ಪ್ರಸಾರವಾಗಲಿದೆ.
ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಹಾಗೂ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವರಾದ ಡಾ. ಮನ್ಸುಖ್ ಮಾಂಡವಿಯ, ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹಾಗೂ ಸಚಿವಾಲಯದ ಹಿರಿಯ ಅಧಿಕಾರಿಗಳು ನವದೆಹಲಿಯ ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ.
ನವದೆಹಲಿಯ ಮುಖ್ಯ ಕಾರ್ಯಕ್ರಮದ ನೇರ ಪ್ರಸಾರ ಹಾಗೂ ಪ್ರಾದೇಶಿಕ ಕಾರ್ಯಕ್ರಮವು ತುಮಕೂರಿನ ಎಸ್.ಐ.ಟಿ. ಕಾಲೇಜು ಕ್ಯಾಂಪಸ್ನಲ್ಲಿರುವ ಬಿರ್ಲಾ ಆಡಿಟೋರಿಯಂನಲ್ಲಿ ಜೂನ್ 19ರ ಸಂಜೆ 4.30 ರಿಂದ ಆಯೋಜಿಸಲಾಗಿದೆ ಎಂದು ತುಮಕೂರು ಇ.ಪಿ.ಎಫ್.ಒ. ಪ್ರಾದೇಶಿಕ ಪಿಎಫ್ ಆಯುಕ್ತರಾದ ಶ್ರೀ ವಂಶಿ ಕೃಷ್ಣ ದಿಂಡಿ ಅವರು ತಿಳಿಸಿದ್ದಾರೆ.
ಈ ಪ್ರಾದೇಶಿಕ ಕಾರ್ಯಕ್ರಮದಲ್ಲಿ ತುಮಕೂರು ನಗರ ಶಾಸಕರಾದ ಜಿ.ಬಿ.ಜ್ಯೋತಿ ಗಣೇಶ್ ಮತ್ತು ತುಮಕೂರು ಗ್ರಾಮೀಣ ಶಾಸಕರಾದ ಬಿ.ಸುರೇಶ್ ಗೌಡ ಅವರು ಭಾಗವಹಿಸಲಿದ್ದಾರೆ. ಜಿಲ್ಲೆಯ ಹಿರಿಯ ಸರ್ಕಾರಿ ಅಧಿಕಾರಿಗಳು, ಉದ್ಯೋಗದಾತರು ಹಾಗೂ ಉದ್ಯೋಗಿ ಮಿತ್ರರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಇ.ಪಿ.ಎಫ್.ಒ (EPFO) ಪ್ರಕಟಣೆಯಲ್ಲಿ ಹಾರ್ದಿಕವಾಗಿ ಆಹ್ವಾನಿಸಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


