ತುಮಕೂರು: ಸಾರ್ವಜನಿಕರಿಂದ ಸ್ವೀಕೃತವಾದ ದೂರು ಅರ್ಜಿಗಳನ್ನು ಸಮರ್ಪಕವಾಗಿ ವಿಲೇವಾರಿ ಮಾಡದೆ ಕರ್ತವ್ಯಲೋಪ ಎಸಗಿರುವುದೂ ಸೇರಿದಂತೆ ವಿವಿಧ 9 ಕಾರಣಗಳನ್ನು ಉಲ್ಲೇಖಿಸಿ ಹೆಗ್ಗರೆ ಗ್ರಾಮ ಪಂಚಾಯಿತಿ ಪಿಡಿಒ ಅವರನ್ನು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಅಮಾನತುಗೊಳಿಸಿದ್ದಾರೆ.
ಪಿಡಿಒ ಕೆ.ಟಿ.ಮೋಹನ್ ಕುಮಾರ್ ಅವರೇ ಅಮಾನತಿಗೆ ಒಳಗಾಗಿರುವ ಅಧಿಕಾರಿ. ಇವರು ನಿಗದಿತ ಗ್ರಾಮ ಸಭೆ ಹಾಗೂ ವಾರ್ಡ್ ಸಭೆಗಳನ್ನು ನಡೆಸಿಲ್ಲ. ಸ್ಥಾಯಿ ಸಮಿತಿ ಸಭೆಗಳನ್ನೂ ನಿಗದಿತವಾಗಿ ನಡೆಸಿಲ್ಲ. ಸಾಮಾನ್ಯ ಸಭೆಗಳನ್ನು ನಡೆಸಲು ಕ್ರಮಕೈಗೊಳ್ಳದೆ ಕರ್ತವ್ಯಲೋಪ ಎಸಗಿದ್ದಾರೆ.
ಕಟ್ಟಡ ವಿನ್ಯಾಸ ನಕ್ಷೆಗೆ ಅನುಮೋದನೆ ಪಡೆಯದೆ ವ್ಯಕ್ತಿಯೊಬ್ಬರು ಕಟ್ಟಡ ನಿರ್ಮಾಣ ಮಾಡಿದ್ದರೂ ಯಾವುದೇ ಕ್ರಮಕೈಗೊಂಡಿಲ್ಲ. ಪರಿಶಿಷ್ಟರ ಅನುದಾನವನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಿಲ್ಲ. ಬೀದಿದೀಪಗಳನ್ನು ಖರೀದಿಸುವಾಗ ಟೆಂಡರ್ ಪ್ರಕ್ರಿಯೆ ನಡೆಸದೆ ಮಾರುಕಟ್ಟೆ ಮೌಲ್ಯಕ್ಕಿಂತ ಹೆಚ್ಚಿನ ದರದಲ್ಲಿ ಖರೀದಿಸಿರುತ್ತಾರೆ. ಪಂಚಾಯಿತಿ ಸದಸ್ಯರ ಹಾಜರಾತಿಯನ್ನು ತಂತ್ರಾಂಶದಲ್ಲಿ ನಮೂದಿಸದೆ ಕರ್ತವ್ಯಲೋಪ ಎಸಗಿದ್ದಾರೆ.
ಈ ಎಲ್ಲಾ ಕಾರಣಗಳಿಗೆ ನೋಟಿಸ್ ನೀಡಿದ್ದರೂ ಸಹ ಸಮಜಾಯಿಷಿ ಉತ್ತರ ನೀಡದೆ ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳನ್ನು ಉಲ್ಲಂಘಿಸಿರುತ್ತಾರೆ. ಈ ಕಾರಣಗಳ ಅನ್ವಯ ಪಿಡಿಒ ಮೋಹನ್ ಕುಮಾರ್ ಅವರನ್ನು ಅಮಾನತಿನಲ್ಲಿಟ್ಟು ಆದೇಶ ಹೊರಡಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC




