ಕೊರಟಗೆರೆ: ಮಧುಗಿರಿ ಸಂಘಟನಾತ್ಮಕ ಜಿಲ್ಲೆಯ ನೂತನ ಜಿಲ್ಲಾ ಮೋರ್ಚಾ ಪದಾಧಿಕಾರಿಗಳ ಪಟ್ಟಿಯನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜೇಂದ್ರ ಅವರು ತಾತ್ಕಾಲಿಕವಾಗಿ ತಡೆಹಿಡಿದಿದ್ದಾರೆ ಎಂದು ಕೊರಟಗೆರೆ ಬಿಜೆಪಿ ಮುಖಂಡ ಬಿ.ಹೆಚ್. ಅನಿಲ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಧುಗಿರಿ ಸಂಘಟನಾತ್ಮಕ ಜಿಲ್ಲೆಯ ವಿವಿಧ ಮೋರ್ಚಾಗಳಾದ ಯುವ ಮೋರ್ಚಾ, ಮಹಿಳಾ ಮೋರ್ಚಾ, ಓಬಿಸಿ ಮೋರ್ಚಾ, ರೈತ ಮೋರ್ಚಾ, ಎಸ್ಸಿ ಮೋರ್ಚಾ, ಎಸ್ಟಿ ಮೋರ್ಚಾ ಮತ್ತು ಅಲ್ಪಸಂಖ್ಯಾತರ ಮೋರ್ಚಾ ಜಿಲ್ಲಾಧ್ಯಕ್ಷ ಸ್ಥಾನಗಳು ಸೇರಿದಂತೆ ಜಿಲ್ಲಾ ವಕ್ತಾರರು, ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಹಾಗೂ ಪ್ರಕೋಷ್ಟಗಳ ಜಿಲ್ಲಾ ಸಂಯೋಜಕ ಸ್ಥಾನಗಳಿಗೆ ಇತ್ತೀಚೆಗೆ ಆಯ್ಕೆ ಪ್ರಕ್ರಿಯೆ ನಡೆದಿತ್ತು.
ವಿಧಾನಪರಿಷತ್ ಶಾಸಕ ಚಿದಾನಂದ ಎಂ. ಗೌಡ ಅವರ ನೇತೃತ್ವದಲ್ಲಿ ಕೊರಟಗೆರೆ, ಮಧುಗಿರಿ, ಶಿರಾ ಮತ್ತು ಪಾವಗಡ ತಾಲೂಕುಗಳ ವಿವಿಧ ಮೋರ್ಚಾಗಳ ಆಯ್ಕೆ ಪ್ರಕ್ರಿಯೆಯು ಜೂನ್ 26ರಂದು ನಡೆದಿತ್ತು. ಆದರೆ, ಈ ಆಯ್ಕೆ ವಿಚಾರದಲ್ಲಿ ಗೊಂದಲ ಹಾಗೂ ಭಿನ್ನಾಭಿಪ್ರಾಯಗಳು ಉಂಟಾದ ಕಾರಣ, ಪಟ್ಟಿಗೆ ತಾತ್ಕಾಲಿಕವಾಗಿ ತಡೆ ನೀಡಬೇಕು ಎಂದು ಮಧುಗಿರಿಯ ಮತ್ತೊಂದು ಬಿಜೆಪಿ ನಿಯೋಗವು ಪಕ್ಷದ ರಾಜ್ಯಾಧ್ಯಕ್ಷರಿಗೆ ಮನವಿ ಸಲ್ಲಿಸಿತ್ತು.
ಮನವಿಗೆ ಸ್ಪಂದಿಸಿರುವ ರಾಜ್ಯಾಧ್ಯಕ್ಷ ಬಿ.ವೈ. ವಿಜೇಂದ್ರ ಅವರು, ಮಧುಗಿರಿ ಸಂಘಟನಾತ್ಮಕ ಜಿಲ್ಲೆಯಲ್ಲಿ ಯಾವುದೇ ಗೊಂದಲ ಉಂಟಾಗದಂತೆ ಎಚ್ಚರಿಕೆ ವಹಿಸಲು ಮುಖಂಡರಿಗೆ ಸೂಚಿಸಿದ್ದಾರೆ. ಅಲ್ಲದೆ, ಬಿನ್ನಾಭಿಪ್ರಾಯ ಏನೇ ಇದ್ದರೂ ಜುಲೈ 10ರಂದು ಸಭೆ ನಡೆಸಿ ಎಲ್ಲವನ್ನೂ ಬಗೆಹರಿಸಿಕೊಂಡು, ಆ ಬಳಿಕವಷ್ಟೇ ಜಿಲ್ಲಾ ಮೋರ್ಚಾ ಪದಾಧಿಕಾರಿಗಳ ಆಯ್ಕೆ ಅಂತಿಮಗೊಳಿಸುವಂತೆ ಜಿಲ್ಲಾ ಪ್ರಭಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಿದ್ದಾರೆ ಎಂದು ಅನಿಲ್ ಕುಮಾರ್ ವಿವರಿಸಿದ್ದಾರೆ.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


