ಕುಣಿಗಲ್: ತಾಲ್ಲೂಕಿನಲ್ಲಿ ಐದು ಸಾವಿರಕ್ಕೂ ಅಧಿಕ ಬಾಂಗ್ಲಾ ದೇಶದ ವಲಸೆಗಾರರು ಇದ್ದಾರೆ. ಅವರು ಆಧಾರ್ ಕಾರ್ಡ್, ರೇಷನ್ ಕಾರ್ಡ್, ಮತದಾರರ ಗುರುತಿನ ಚೀಟಿ ಹೊಂದಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಬಿ.ಎನ್. ಜಗದೀಶ್, ದೇಶದ ಉಳಿವಿಗಾಗಿ ವಲಸೆಗಾರರನ್ನು ಮತದಾರರ ಪರಿಷ್ಕರಣೆಯಿಂದ ಕೈ ಬಿಟ್ಟು, ದೇಶದ ಮೂಲ ವಾಸಿಗಳನ್ನು ಉಳಿಸಬೇಕೆಂದು ಅವರು ಒತ್ತಾಯಿಸಿದರು. ಅವರು ಜೆಡಿಎಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಕಾಂಗ್ರೆಸ್ನಿಂದ ಎಸ್ ಇಆರ್ ದುರ್ಬಳಕೆ: ಎಸ್ ಇಆರ್ ಅನ್ನು ಕಾಂಗ್ರೆಸ್ ಸರ್ಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಬಿಎಲ್ಒಗಳನ್ನು ರಾಜಕೀಯ ಮುಖಂಡರು ತಮ್ಮ ಕೈಗೊಂಬೆಯಾಗಿ ಮಾಡಿಕೊಂಡಿದ್ದಾರೆ. ಎಸ್ ಇಆರ್ ನಲ್ಲಿ ತೊಡಗಿರುವ ಅಧಿಕಾರಿಗಳಿಗೆ ದಮ್ಮಿ ಹಾಕುವ ಮೂಲಕ ರಾಜ್ಯ ವ್ಯಾಪಿ ಆಡಳಿತ ಯಂತ್ರವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ. ತಾಲ್ಲೂಕು ಸೇರಿದಂತೆ ರಾಜ್ಯದಲ್ಲಿ ಎಸ್ ಇಆರ್ ಪ್ರಾಮಾಣಿಕವಾಗಿ ನಡೆಯುತ್ತಿಲ್ಲ. ಚುನಾವಣಾ ಆಯೋಗ ಇಡೀ ದೇಶದಲ್ಲಿ ವಿಶೇಷ ಕಾರ್ಯಕ್ರಮವಾಗಿ ಎಸ್ಇಆರ್ ಅನ್ನು ರೂಪಿಸಿದೆ. ಇದು ನಿಜವಾದ ಭಾರತೀಯರಿಗೆ ಬಹಳ ಅವಶ್ಯಕತೆ ಇದೆ. ಕೇವಲ ರಾಜಕೀಯ ಅಧಿಕಾರ ಉಳಿಸಿಕೊಳ್ಳುವ ರಾಜಕಾರಣಿಗಳಿಗೆ ಇದರ ಅವಶ್ಯಕತೆ ಇಲ್ಲವಾಗಿದೆ ಎಂದು ಹೇಳಿದರು.
ಪಟ್ಟಣದ ವಾರ್ಡ್ ನಂ 19 ರಲ್ಲಿ ಬಿಎಲ್ಒ ಇಂದುಮತಿಯವರು, ಆಫ್ರೀಜ್ ತಾಜ್ ಎಂಬ ಕಾಂಗ್ರೆಸ್ ಮುಖಂಡರನ್ನು ಮನೆಯೊಂದರಲ್ಲಿ ಕೂರಿಸಿಕೊಂಡು ಎಸ್ಇಆರ್ ಮಾಹಿತಿ ಸಂಗ್ರಹಣೆ ಮಾಡಿರುವುದು ತಾಲ್ಲೂಕಿನ ಪ್ರಭಾವಿ ರಾಜಕಾರಣಿ ತಾಲ್ಲೂಕು ಆಡಳಿತವನ್ನು ದುರುಪಯೋಗಪಡಿಸಿಕೊಳ್ಳುವುದಕ್ಕೆ ನೈಜ ಸಾಕ್ಷಿಯಾಗಿದೆ ಎಂದು ಆರೋಪಿಸಿ, ವೀಡಿಯೋ ಬಿಡುಗಡೆ ಮಾಡಿದರು. ತಾಲ್ಲೂಕಿನಲ್ಲಿ ಶಾಸಕರು ಪಟ್ಟಿ ಮಾಡಿಕೊಟ್ಟ ಹಾಗೆ ಎಂಎಲ್ಎ ಮತ್ತು ಬಿಎಲ್ ಒಗಳನ್ನು ಚುನಾವಣಾಧಿಕಾರಿಗಳು ನೇಮಕ ಮಾಡಿದ್ದಾರೆ ಎಂದರು.
ಪಕ್ಷಗಳಿಗೆ ಮಾಹಿತಿ ಇಲ್ಲ: ಚುನಾವಣಾ ಆಯೋಗ ಮತದಾರರ ಪರಿಷ್ಕರಣೆ ಸಂಬಂಧ ಎಲ್ಲಾ ರಾಜಕೀಯ ಪಕ್ಷದ ಬೂತ್ ಮಟ್ಟದ ಬಿಎಲ್ಎಗಳಿಗೆ ಮಾಹಿತಿ ನೀಡಬೇಕೆಂದು ಸ್ಪಷ್ಟವಾದ ಆದೇಶ ನೀಡಿದ್ದರೂ ಈವರೆಗೂ ಜೆಡಿಎಸ್ನ ಬಿಎಲ್ಎಗಳಿಗೆ ಬಿಎಲ್ಒಗಳು ಮಾಹಿತಿ ನೀಡಿಲ್ಲ. ಈ ಬಗ್ಗೆ ಬಿಎಲ್ಒಗಳಿಗೆ ಕೇಳಿದರೆ ಈ ಸಂಬಂಧ ನಮಗೆ ಯಾವುದೇ ಮಾಹಿತಿ ಇಲ್ಲ ಎನ್ನುತ್ತಾರೆ. ಎಸ್ಐಆರ್ಅನ್ನು ಅಧಿಕಾರಿಗಳು ಕಾಟಾಚಾರಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಬಿಎಲ್ಒಗಳು ಕಾಂಗ್ರೆಸ್ ಏಜೆಂಟರ ರೀತಿ ಕೆಲಸ ಮಾಡುತ್ತಿದ್ದು, ಅದನ್ನು ತಡೆಯಬೇಕು. ಚುನಾವಣಾಧಿಕಾರಿಗಳ ಧೋರಣೆ ಹೀಗೆಯೇ ಮುಂದುವರಿದರೆ ಯಾವ ರೀತಿಯ ಹೋರಾಟಕ್ಕೂ ಪಕ್ಷ ಸಿದ್ಧವಾಗಿರುತ್ತದೆ. ಮಾಹಿತಿ ಇಲ್ಲದ ಬಿಎಲ್ಎಗಳು ಮಾಡಿರುವ ಪರಿಷ್ಕರಣೆಯನ್ನು ನಾವು ಒಪ್ಪುವುದಿಲ್ಲ ಎಂದರು.
ಗೋಷ್ಠಿಯಲ್ಲಿ ಪುರಸಭಾ ಮಾಜಿ ಅಧ್ಯಕ್ಷ ಕೆ.ಎಲ್.ಹರೀಶ್, ಸದಸ್ಯರಾದ ಇ.ಮಂಜು, ಶ್ರೀನಿವಾಸ್, ಗ್ರಾ.ಪಂ ಮಾಜಿ ಅಧ್ಯಕ್ಷ ಮಂಜುನಾಥ್, ಸದಸ್ಯ ಯಡಿಯೂರು ದೀಪು, ವಕ್ತಾರ ತರೀಕೆರೆ ಪ್ರಕಾಶ್, ಮುಖಂಡರಾದ ರಂಗಸ್ವಾಮಿ, ವಸಂತ್ ಕುಮಾರ್, ಮನೋಜ್, ಜಗದೀಶ್ ಮತ್ತಿತರರು ಇದ್ದರು.
ತಾಲ್ಲೂಕಿನಲ್ಲಿ ಸುಮಾರು ಐದರಿಂದ ಆರು ಸಾವಿರಕ್ಕೂ ಹೆಚ್ಚು ಬಾಂಗ್ಲಾ ವಲಸಿಗರು ಇದ್ದಾರೆ, ಅವರ ಬಳಿ ಆಧಾರ್ ಕಾರ್ಡ್, ರೇಷನ್ ಕಾರ್ಡ್, ಮತದಾರರ ಗುರುತಿನ ಚೀಟಿ ಇದೆ, ಸರ್ಕಾರದಿಂದ ಏನೇನು ಸೌಲಭ್ಯ ಸಿಗುತ್ತದೋ ಅವೆಲ್ಲಾ ಅಧಿಕೃತ ಕಾರ್ಡ್ಗಳು ಅವರ ಹೊಂದಿದ್ದಾರೆ, ಚುನಾವಣಾಧಿಕಾರಿಗಳು ಈ ಅಕ್ರಮ ವಲಸಿಗರನ್ನು ಚುನಾವಣಾ ಪರಿಷ್ಕರಣೆ ಸಮಯದಲ್ಲಿ ಹೊರ ಇಡಬೇಕು, ಈ ಸಂಬಂಧ ಕ್ರಮಕೈಗೊಳ್ಳದಿದ್ದರೆ ಮುಂದಿನ ದಿನದಲ್ಲಿ ಜೆಡಿಎಸ್ ತಾಲ್ಲೂಕು ಘಟಕ ಹೋರಾಟಕ್ಕೆ ಇಳಿಯಲಿದೆ.
| ಬಿ.ಎನ್.ಜಗದೀಶ್, ಅಧ್ಯಕ್ಷರು, ತಾಲ್ಲೂಕು ಜೆಡಿಎಸ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


