ಊರು: ಸುರಪುರವೆಂಬ ಹಳ್ಳಿ, ಮಿತ್ರರ ಹೆಸರು: ಸೋಮ, ಭೀಮ, ಮತ್ತು ಚಾಮ. ವರ್ಗ: ಸ್ವಲ್ಪ ಮಧ್ಯಮ ವರ್ಗದ ಬಡತನದ ಜೀವನ, ಮಾತಿಗೆ ಸೇರುವ ಜಾಗ: ಊರ ಹೊರಗಿನ ಅರಳಿ ಕಟ್ಟೆ.
(ಒಮ್ಮೆ ಮೂವರೂ ಮಿತ್ರರು ಅದೇ ಅರಳಿ ಕಟ್ಟೆ ಮೇಲೆ ಕುಳಿತು ಬೇಸರದ ಮುಖ ಮಾಡಿಕೊಂಡು ತಮ್ಮ ತಮ್ಮ ಕಷ್ಟಗಳನ್ನು ಮಾತನಾಡಿಕೊಳ್ಳುತ್ತಿರುವಾಗ ಒಂದು ನಿರ್ದಾರಕ್ಕೆ ಬರುತ್ತಾರೆ ಅದರಂತೆ ….ಚಾಮನು..)
ಚಾಮ: ನೋಡ್ರುಲಾ ನಾವು ಇಂಗೆ ನಿಯತ್ತಿಗಿದ್ರೆ ನಾವು ಇಂಗೆ ಇರ್ಬೇಕಾಯ್ತದೆ ಆರಕ್ಕೇರಲ್ಲ ಮೂ…..
ಸೋಮ: ಮೂರಕ್ಕಿಳಿಯಲ್ಲ..
ಚಾಮ: ಏ ಈಗ ಅಂಗಲ್ಲ ಕಣ್ಲಾ ಗಾದೆ ಬದಲಾಗದೆ..
ಸೋಮ: ಮತ್ತೆ?
ಚಾಮ: ಮೂರಕ್ಕೇನು ಎರಡಕ್ಕೂ ಇಳಿಬೇಕಾಯ್ತದೆ, ಒಂದಕ್ಕೂ ಇಳಿಬೇಕಾಯ್ತದೆ
ಭೀಮ: ಅದು ಬೇರೆ ಅರ್ಥ ಬರ್ತದೆ ಬಿಡ್ಲಾ
ಚಾಮ: ಏ ಅಂಗಲ್ಲ ಕಣ್ಲಾ ದಿನೇ ದಿನೇ ಇನ್ನ ಕೆಳಮಟ್ಟಕ್ಕೆ ಹೋಯ್ತಿರ್ತಿವಿ ಅಂತ
ಭೀಮ: ಸರಿ ಈಗ ಏನ್ ಮಾಡವ ಅಂತ?
ಚಾಮ: ಲೇ ಭೀಮ ಸೋಮ ನಿಮ್ಗೊಂದು ವಿಸಯ ಗೊತ್ತನ್ರುಲಾ… ಆ ನಮ್ ಪಕ್ಕದ್ದು ಕರೆಕಟ್ಟೆ ಊರೈತಲ್ಲಾ, ಕೋಳಿ ಅಂಗಡಿ ಇಟ್ಟವ್ನಲ್ಲಾ ಆ ರಾಮಯ್ಯಂಗೆ ಅವನ್ಯಾರೋ ತಗಳಪ್ಪ ನಿನ್ ಸಾಲ ಅಂತ ಮೂವತ್ತು ಸಾವಿರ ಪಾವಸ್ ಕೊಟ್ಟೋದ.
ಭೀಮ: ನೀನ್ಯಾಕೆ ಹೋಗಿದ್ದೆ ಅಲ್ಲಿ..?
ಸೋಮ: ರಂಗಮ್ಮನ ಮನೆತಕ್ಕೆ ಹೋಗಿರ್ಬೇಕು..
ಚಾಮ: ಹೂ..ಏ ಅಲ್ಲ ಕೋಳಿ ತಕ್ಕವ ಅಂತ ಹೋಗಿದ್ದೆ
ಭೀಮ: ಸರಿ ಈಗ ನಾವು ಸಾಲ ಮಾಡದೇ….?
ಸೋಮ: ಸಾಲ ಅಲ್ಲ ಆ ದುಡ್ಡನ್ನೇ ಲಪಟಾಯಿಸಿದರೆ ಹೇಗೆ….?
ಸೋಮ: ಅಂದ್ರೆ ಕಳ್ಳತನ ಮಾಡುವ ಅಂತನೇ…?
ಚಾಮ: ಹೂ ನೀನು ಗೆಸ್ ಮಾಡ್ದೆ ನೋಡು…
ಭೀಮ: ಯಾಕ್ಲ ಬತ್ತಾ ಬತ್ತಾ ಈ ಮಟ್ಟಕ್ಕೆ ಇಳ್ಬುಟ್ಟೆ ನೀನು ಚಾಮ
ಚಾಮ: ನಾನ ಆಗ್ಲೆ ಹೇಳ್ಳಿಲ್ವೇ ನಾವು ಇಂಗೆ ಇದ್ರೆ ಮೇಲಕ್ಕೆ ಬರಕ್ಕೆ ಆಗಕ್ಕಿಲ್ಲ ಅಂತವ
ಸೋಮ: ಅದಿಕ್ಕೆ ಕಳ್ಳತನ ಮಾಡೋದೇ?
ಚಾಮ: ಹೂ ಕಂಡ್ರುಲಾ ರಾಮಯ್ಯ ಏನ್ ನಿಯತ್ತಗೆ ದುಡ್ದಿರ್ತನೇ ಎಲ್ಲ ಅವ್ರಿವ್ರು ತಲೆ ಮೇಲೆ ಕೈ ಇಟ್ಟು ದುಡ್ದಿರ್ತನೆ
ಭೀಮ: ಆದ್ರು ಯಾಕೋ ಎಡಗಣ್ಣು ಹಾರ್ತಿದೆ ಕಣ್ಳಾ..
ಸೋಮ: ಬಲಗಣ್ಣಿಗೂ ರಕ್ಕೆ ಹಾಕ್ಕೊಬುಡ್ಲಾ ಅದು ಹಾರ್ತದೆ..
ಭೀಮ: ನಿಂಗ್ ತಮಾಸೆ..
ಸೋಮ: ಮತ್ತೀನ್ನೇನ್ಲಾ ನಂಗು ಯಾಕೋ ಅವನು ಹೇಳ್ತಿರೋದು ಸರಿ ಅನ್ನುಸ್ತಿದೆ
ಚಾಮ: ಏ ಅವೆಲ್ಲ ಬಿಡ್ಲಾ. ಇವತ್ತು ರಾತ್ರಿನೇ ಎಲ್ಲ ಪ್ಲಾನ್ ಮಾಡ್ಕೊಂಡು ನಾವು ಮೂವರು ರಗ್ಗು ಹೊದ್ದು ಕೊಂಡು ರಾಮಯ್ಯ ಮಲಗಿದ್ದಾಗ ಮನೆ ಒಳಿಕ್ಕೆ ಹೋಗಿ 30 ಸಾವಿರ ಕದ್ದು ಬಿಡುವ, ಪಾಪ ಏನಿಲ್ಲ, ತಲಾ ಹತ್ತತ್ತು ಸಾವಿರ ಹಂಚುಕೊಂಡು ಬಿಡುವ ಏನಂದಿರೀ, ನೀವುಗಳು ಫ್ರಂಡು ಇದ್ದೀರಿ ಅಂತ ಆಫರ್ ಕೊಡ್ತೀವ್ನೀ ಇಲ್ಲಾಂದ್ರೆ ನೀವು ಯಾರು ಬರದಿದ್ರೂ ಪರವಾಗಿಲ್ಲ ನಾನೊಬ್ಬನೇ ಹೋಯ್ತಿನಿ…30 ನಂದೇ ಆಯ್ತದೆ ಯಂಗೆ..?
(ಭೀಮ ಸೋಮರು ಮನಸ್ಸಿನಲ್ಲಿ ಈ ಚಾಮ ನಮ್ಗೇ ಬ್ರೇಕ್ ಹಾಕ್ತಾವ್ನೆ…30 ಸಾವಿರ ಇವನೊಬ್ನೇ ತಗಳಕ್ಕೆ ಮಾಡ್ತಾವ್ನೆ, ಬೇಡ ನಾವು ಹೋಗುವ)
ಭೀಮ: ಸರಿ ಕಣ್ಲಾ ನಾನು ರೆಡಿ
ಸೋಮ: ನಾನು ರೆಡಿ.
ಚಾಮ: ಇದು ಕಣ್ರುಲಾ ಫ್ರಂಡ್ ಶಿಪ್ಪು ಅಂದ್ರೆ, ಮೆಚ್ದೇ..ಕಂಡ್ರುಲಾ… ಆದ್ರೆ ಒಂದು ಕಂಡಿಷನ್
ಭೀಮ: ಮತ್ತೇನ್ಲಾ ನಿಂದು.
ಚಾಮ: ಆದ್ರೆ ಯಾರು ಕುಡುಕೊಂಡು ಗಿಡಕೊಂಡು ಬರಂಗಿಲ್ಲ ನೋಡು? ಕುಡಕೊಂಡು ಬಂದು ಏನಾರ ಎಡವಟ್ಟು ಮಾಡಿ ಕಾರ್ಯಾಚರಣೆ ಎಲ್ಲಾ ಹಾಳಾಗಿ ಹೋಯ್ತದೆ, ಮತ್ತೆ ಇವಾಗ್ಲೇ ಹಳಿವ್ನಿ ಸರಿನಾ..?
ಸೋಮ ಮತ್ತು ಭೀಮ: ವಾಕೇ….
(ಅಂದು ರಾತ್ರಿ ಮೂವರ ರಗ್ಗು ಹೊದ್ದುಕೊಂಡು ಊರ ಹೊರಗಿನ ಅರಳಿ ಕಟ್ಟೆ ಬಳಿ ಬರುತ್ತಾರೆ, ಚಾಮ ಮಾತ್ರ ಹೇಗಾದರು ಇರಲಿ ಎಂದು ಒಂದು 90 (Ninety) ಪಾಕೆಟ್ ಎಣ್ಣೆ ಮತ್ತು ನೀರಿನ ಬಾಟೆಲ್ ಬ್ಯಾಗ್ ನಲ್ಲಿ ಹಾಕಿಕೊಳ್ಳುತ್ತಾ…)
ಚಾಮ: (ಮನಸ್ಸಿನಲ್ಲಿ — ಕಾರ್ಯಾಚರಣೆ ಮಾಡಕ್ಕೆ ಮುಂಚೆ 1 ನೈನ್ ಟಿ ಹಾಕೊಂಡ್ರೆ ಧೈರ್ಯ ಬರ್ತದೆ, ಈ ಗುಗ್ಗು ನನ್ ಮಕ್ಳು ಎಡವಟ್ಟು ಗಿಡವಟ್ಟು ಮಾಡರು ಅಂತ ಅವರಿಗೆ ಬೇಡ ಅಂದೆ)
ಚಾಮ: ಯಾರು ಕುಡಕೊಂಡು ಬಂದಿಲ್ಲ ತಾನೆ?
ಭೀಮ: ಇಲ್ಲ
ಸೋಮ: ಇಲ್ಲ
ಚಾಮ: ಸರಿ ಇನ್ನ ತಡ ಮಾಡೋದು ಬೇಡ ನಡಿರಿ ಹೋಗವ ಅರ್ಧ ಫರ್ಲಾಂಗು ಎಷ್ಟೊತ್ತು ಬಿರಬಿರನೆ ಹೋಗುವ.(ಎನ್ನುತ್ತಾ ರಗ್ಗು ಹೊದ್ದುಕೊಂಡು ಕರೆಕಟ್ಟೆ ಊರಿಗೆ ಬರುತ್ತಾರೆ, ಅಲ್ಲಿಂದ ರಾಮಯ್ಯನ ಮನೆಯ ಹಿಂಭಾಗಕ್ಕೆ ಸದ್ದು ಮಾಡದೆ ಬರುತ್ತಾರೆ. ಮನೆಯ ಹಿಂಬದಿಯ ನೀರಿನ ಮನೆಯ ಹೊರಗಿನ ಕಿಟಕಿ ಕಡೆಯಿಂದ ಒಳಗೆ ನೋಡಿದಾಗ ಒಳಗೆ ಮಂಕು ಬೆಳಕು ಅಷ್ಟೇ ಕಾಣುತ್ತದೆ.)
ಚಾಮ: (ಪಿಸು ದನಿಯಲ್ಲಿ) ಭೀಮ ನೀನು ಈ ತಗಡಿನ ಬಾಗಿಲು ಮೇಲಕ್ಕೆ ಬೆಂಡ್ ಮಾಡು ಸೋಮ ಬಗ್ಗಿ ಒಳಗೆ ಇಣುಕಿ ನೋಡಲಿ ( ಎಂದಾಗ ಭೀಮ ಬಲವಾಗಿ ಹಾಗೆಯೇ ಮಾಡುತ್ತಾನೆ, ಸೋಮ ಬಗ್ಗಿ ಇಣುಕಿ ನೋಡಿ ಯಾರು ಇಲ್ಲವೆಂಬಂತೆ ಕೈ ಆಡಿಸುತ್ತಾನೆ, ಹಾಗೆಯೇ ಭೀಮ ಸೋಮರು ಒಳ ನುಸುಳುತ್ತಾರೆ)
ಚಾಮ: (ಮನಸ್ಸಿನಲ್ಲಿ ಈಗ ನೈನ್ ಟಿ ಹಾಕ್ಕೊಂಡು ಒಳಗೆ ಹೋಗುವ ಧೈರ್ಯ ಬರುತ್ತದೆ ಎಂದುಕೊಂಡು ನೀರಿನ ಬಾಟೆಲ್ ಗೆ ಪಾಕೆಟ್ ಎಣ್ಣೆ ಸುರಿದುಕೊಂಡು ಗಟಗಟನೆ ಒಮ್ಮೆಗೆ ಕುಡಿದುಬಿಡುತ್ತಾನೆ, ನಂತರ ಒಳ ನುಸುಳುತ್ತಾನೆ, ಎಲ್ಲರೂ ನೀರಿನ ಮನೆಯಿಂಗ ಒಳಗೆ ಬಂದು ಮುಖ್ಯ ಕೊಠಡಿಯ ಬದಿಯಲ್ಲಿದ್ದ ರೂಮಿನ ಬಾಗಿಲು ನಿಧಾನವಾಗಿ ತೆಗೆದು ನೋಡಿದಾಗ ಅಲ್ಲಿ ತಿಜೋರಿ ಇರುತ್ತದೆ ಯಾರು ಇರುವುದಿಲ್ಲ, ಇದೆ ಸಂದರ್ಭ ಎಂದುಕೊಂಡು ಬೆಕ್ಕಿನ ನಡಿಗೆಯಲ್ಲಿ ಒಳಗೆ ಹೋಗುತ್ತಾರೆ, ಚಾಮನಿಗೆ ಎಣ್ಣೆಯ ನಶೆ ತಲೆಗೆ ಏರಲು ಪ್ರಾರಂಭವಾಗುತ್ತದೆ, ಗಟಗಟನೆ ಕುಡಿದಿದ್ದರಿಂದ ನಶೆ ಒಮ್ಮೆಗೇ ಏರಲು ಪ್ರಾರಂಭವಾಗಿ ತನ್ನ ಮನದ ಮೇಲಿನ ಸ್ಥಿಮಿತ ಕಳೆದುಕೊಂಡವಂತಾಗಿ ತಾನು ಬಂದಿರುವ ಕೆಲಸದ ಗಮನ ಮರೆತಂತೆ ಆಗಿ ಭೀಮನಿಗೆ ಜೋರು ಧ್ವನಿಯಲ್ಲಿ ತೊದಲುತ್ತಾ ಹೀಗೆ ಕೇಳುತ್ತಾನೆ)
ಚಾಮ: ಲೇ ಭೀಮ ನಾವು ಯಾಕ್ಲಾ ಇಲ್ಲಿಗೆ ಬಂದಿದಿವಿ ಇದು ಯಾರ ಮನೆಯನ್ಲಾ, ಇಲ್ಲಿಗ್ಯಾಕೆ ಕರಕೊಂಡು ಬಂದ್ಲಾ, ಲೇ ಸೋಮ ಇವನ ಜೊತೆ ನೀನೇನ್ಲಾ ಮಾಡ್ತಿದ್ದೀ….
ಭೀಮ: (ಒಮ್ಮೆಲೆ ಗಾಬರಿಯಾಗಿ) ಲೇ ಚಾಮ ಮೆಲ್ಲಗೆ ಮಾತಾಡ್ಲಾ, ಇದೇನ್ಲಾ ಮಾಡ್ತಿದ್ದೀ, ಎಲ್ಲ ಸಿಕ್ಕಿಹಾಕ್ಕೊತಿವಿ ಮೆಲ್ಲಗೆ ಮಾತಾಡ್ಲಾ..
ಚಾಮ: ಮೆಲ್ಲಗೆ ಯಾಕ್ಲ ಮಾತಾಡ್ಬೇಕು, ಮದ್ಲು ಇಲ್ಲಿಗ್ಯಾಕೆ ಕರಕೊಂಡು ಬಂದೆ ಹೇಳು, ಎಲ್ಲಿದಿವೀಗ ಹೇಳು..
ಸೋಮ: ಓ… ಇವನ್ ಜೊತೆ ನಾವು ಕಂಬಿ ಎಣಿಸೊ ಹಾಗೆ ಮಾಡ್ತನೆ ಮಗ, ಲೇ ಭೀಮ ಮದ್ಲು ಇಲ್ಲಿಂದ ಕಳಚಿಕೊಳ್ಳುವ ರಾಮಯ್ಯ ಎದ್ದು ಬಿಡ್ತನಾನೆ..
ಚಾಮ: ಓ ರಾಮಯ್ಯ ಮನಗೆ ಕದಿಯಕ್ಕೆ ಕರಕೊಂಡು ಬಂದಿದಿರಾ ಮಕ್ಳಾ ತಡಿ ಮಾಡ್ತಿನಿ ನಿಮ್ಗೆ ಐತೆ ನಿಮ್ಗೆ , ಲೇ ರಾಮಯ್ಯಾ … ರಾಮಯ್ಯ ಬೇಗ ಬಾರ್ಲಾ ಈ ನನ್ ಮಕ್ಳು ಕದಿಯಕ್ಕೆ ಬಂದೌರೆ, ಜೊತೆಗು ನನ್ನು ಕರಕೊಂಡು ಬಂದವೌರೆ (ಎನ್ನುತ್ತಿದ್ದಂತೆ ನಿದ್ದೆಯಿಂದ ಎದ್ದ ರಾಮಯ್ಯ ರೂಮಿನಿಂದ ಯಾರೋ ಕೂಗುತ್ತಿರುವುದನ್ನು ಕಂಡು ಗಾಬರಿಯಿಂದ ದೀಪ ಹಿಡಿದು ಓಡೋಡಿ ಬರುತ್ತಾನೆ, ಮೂವರನ್ನು ನೋಡಿ….ಮುಂದೆ)
ರಾಮಯ್ಯ: (ಜೋರು ಧನಿಯಲ್ಲಿ) ಯಾರ್ಲ ನೀವೆಲ್ಲ ನಮ್ಮ ಮನೇಲಿ ಏನ್ರುಲಾ ಮಾಡ್ತಿದ್ರೀ
ಭೀಮ: (ಗಾಬರಿ ಮುಖದಲ್ಲಿ) ಅದು ….ಇದು….ಈ… ಸೋಮ….
ಸೋಮ: ಲೇ ನನ್ ಹೆಸ್ರು ಯಾಕ್ಲ ಹೇಳ್ತಿದ್ದೀ, ಲೇ ರಾಮಯ್ಯ ನಾನ್ ಹೇಳ್ತಿನಿ ಕೇಳು ಈ ನನ್ ಮಕ್ಳು ಕದಿಯಕ್ಕೆ ಬಂದೌರೆ, ಜೊತೆಗೆ ನಾನು ಬೇಡ ಕಂಡ್ರುಲಾ, ಕದಿಯದು ತಪ್ಪು ಅಂತ ಏಳ್ದೆ, ಈ ನನ್ ಮಕ್ಳು ಕೇಳ್ಳೇ ಇಲ್ಲ, ನೀನೆ ಒಸಿ ಕ್ಲಾಸ್ ತಗೊ…
ಸೋಮ: (ಭೀಮನ ಕಡೆ ತಿರುಗಿ ಮೆಲ್ಲನೆ) ಎಲ್ಲ ಉಲ್ಟ ಪಲ್ಟ ಆಗೋಯ್ತು…
ಭೀಮ: (ಮೆಲ್ಲನೆ) ಹು ಜೈಲು ಫಿಕ್ಸು…
ಭೀಮ: (ಜೋರಾಗಿ) ಏನ್ಲಾ ಹೇಳ್ತಿದ್ದೀ ಚಾಮ ನೀನೆ ಎಲ್ಲ ನಮ್ಗೆ ತಲೆ ಕೆಡಿಸಿ, ಸುಮ್ಕಿದ್ದೋರ್ನ ಇಲ್ಲಿಗ್ ಮಟ್ಟ ಕರಕೊಂಡು ಬಂದ್ಬಿಟ್ಟು ಈಗ್ಯಾಕ್ಲಾ ಹಿಂಗೆ ಹೇಳ್ತಿದ್ದೀ..
ಚಾಮ: ನಾನ್ ಯಾವಗ್ಲಾ ಹೇಳ್ದೆ ಕದಿಯಕ್ಕೆ ಹೋಗುವ ಅಂತ….
ಸೋಮ: (ಚಾಮನ ತೊದಲು ಮಾತು ಮತ್ತು ವರ್ತನೆ ನೋಡಿ) ಕುಡಿದಿಯೇನ್ಲಾ… ಚಾಮ
ಚಾಮ: ಹು ಕಣ್ಲಾ… ಕುಡಿದಿದಿನಿ, ಕುಡಿದಾಗಲೇ ಸತ್ಯ ಹೊರಗ್ ಬರದು. ಲೇ ರಾಮಯ್ಯ ನಾನು ಇವ್ರುನ ನೋಡ್ಕೊತಿನಿ ನೀನು ಹೋಗಿ ಪೋಲೀಸ್ ನೋರ್ನ ಕರಕೊಂಡು ಬಾರ್ಲಾ.. ನಾನಿದ್ದೀನಿ.. ಹೆದರ್ಬೇಡ ಹೋಗ್ಲಾ..
ರಾಮಯ್ಯ: (ರಾಮಯ್ಯನಿಗೆ ಅವರವರ ಮಾತು ಕಥೆಯಲ್ಲಿಯೇ ಎಲ್ಲವೂ ಗೊಂದಲವಾಗಿ) ತಡಿರ್ಲ ನಿಮಗೆಲ್ಲ ಐತೆ (ಎಂದವನೇ ರೂಮಿನ ಬಾಗಿಲು ಹೊರಗಿನಿಂದ ತಾಳ ಹಾಕಿಕೊಂಡು) ಪೋಲೀಸ್ ನೋರ್ನ ಕರಕಂಡು ಬರ್ತಿನಿ, ನಿಮ್ಗೆಲ್ಲ ಹಬ್ಬದೂಟ ಹಾಕುಸ್ತಿನಿ… ಈಗ ಬಂದೆ ಇರ್ಲ ನನ್ ಮಕ್ಕುಳ್ರಾ…ಕದಿಯಕ್ಕೆ ಬಂದೌರೆ ಎಲ್ಲ…
ಭೀಮ:(ರಾಮಯ್ಯ ಬಾಗಿಲು ಜಡಿದು ಅತ್ತ ಹೋಗುತ್ತಿದ್ದಂತೆ) ಲೇ ಸೋಮ ಈ ನನ್ ಮಗನ್ ಮಾತು ನಂಬಿಕೊಂಡು ಎಂತ ಕೆಲ್ಸ ಮಾಡ್ಕೊಂಡೋ ಈಗೇನ್ಲಾ ಮಾಡೋದು, ಪೋಲೀಸ್ ನೋರ್ ಬಂದ್ರೆ ಎಲ್ಲ್ರಿಗು ಲಾಳ ಪೆಟ್ತಾರೆ ಕಾಲಿಗೆ ಅಯ್ಯಯ್ಯೋ ಏನಪ್ಪ ಮಾಡದು ಈಗ…
ಸೋಮ: ಲೇ ಚಾಮ ನಮ್ಗೆ ಕುಡಿಬೇಡ ಅಂತ ಹೇಳಿ ನೀನು ಕುಡಕೊಂಡು ಬಂದು ಎಂತ ಕೆಲ್ಸ ಮಾಡ್ಬಿಟ್ಟೋ, ಎಲ್ಲರೂ ನಿನ್ನಿಂದ ಜೈಲಿಗೆ ಹೋಗಂಗೆ ಆಯ್ತಪ್ಪೋ ಅಯ್ಯಯ್ಯೋ ಈಗೇನಪ್ಪ ಮಾಡೋದು…
ಭೀಮ: (ಅಲ್ಲಿಯೇ ಇಟ್ಟಿದ್ದ ಚೊಂಬಿನಲ್ಲಿ ನೀರನ್ನು ಗಮನಿಸಿ ಚೊಂಬು ತೆಗೆದು ಕೊಂಡು ಚಾಮನ ಮುಖಕ್ಕೆ ಜೋರಾಗಿ ಎರಚುತ್ತಾನೆ) ಲೇ ಚಾಮ ಎಂತ ಕೆಲ್ಸ ಮಾಡ್ದೋ…
ಚಾಮ: (ಮುಖದ ಮೇಲೆ ಒಮ್ಮೆಲೇ ನೀರು ಬೀಳುತ್ತಲೇ ನಶೆ ಇಳಿದು ಸ್ವಲ್ಪ ಎಚ್ಚಗೊಂಡವಂತೆ ಆಗಿ.. ಭೀಮ ಸೋಮರನ್ನು ನೋಡಿ ನಂತರ) ಯಾಕ್ರುಲ ಗರ ಬಡ್ದೋರಂಗೆ ನಿಂತಿದಿರಿ ಇಬ್ರುನು.
ಭೀಮ: ಲೇ ನೀನು ಮಾಡಿರೊ ಗನಂಧಾರಿ ಕೆಲಸಕ್ಕೆ ಇನ್ನೆಂಗೆ ನಿಂತ್ಕೊತರ್ಲಾ..
ಸೋಮ: ಲೇ ಚಾಮ ನೀನು ನಮ್ಗೆ ಕದಿಯ ಪ್ಲಾನ್ ಹೇಳಿ, ಕುಡಕೊಂಡು ಬರಬೇಡಿ ಅಂತ ನಮ್ಗೆ ಹೇಳಿ, ಈಗ ನೀನು ಕುಡಕೊಂಡು ಬಂದು ಎಲ್ಲ ಎಕ್ಕುಟ್ಟುಸ್ಬಿಟ್ಟೆ. ಈಗ ಪೋಲೀಸ್ ನೋರ್ನ ಕರಕೊಂಡು ಬರಕ್ಕೆ ಹೋಗವ್ನೆ ಆ ರಾಮಯ್ಯ ಬಾಗ್ಲು ಜಡ್ಕೊಂಡು..
ಚಾಮ: ಅಯ್ಯಯ್ಯೋ ಇಷ್ಟೆಲ್ಲ ಆಯ್ತನ್ರುಲಾ.. ನಂಗೆ ಇದು ಯಾವ್ದು ಗೊತ್ತೇ ಆಗ್ಲಿಲ್ಲ ನೋಡು, (ಗಾಬರಿಯಿಂದ) ಏ ಏನಾದ್ರು ಮಾಡ್ರುಲಾ ಪ್ಲಾನು, ಇಲ್ಲಾಂದ್ರೆ ಎಲ್ಲ ಕಂಬಿ ಎಣಿಸಬೇಕಾಯ್ತದೆ..
ಭೀಮ: ಇಷ್ಟಗಟ್ಟ ನಮ್ಗೆ ಬೇದಿ ಬರಿಸಿದ್ದ ಈ ನನ್ ಮಗ, ಈಗ ಇವ್ನಿಗೆ ಬೇದಿ ಕಿತ್ಕೊಂಡುಬುಟೈತೆ ನೋಡ್ಲ ಸೋಮ
ಸೋಮ: ಆಗಬೇಕು ಈ ನನ್ ಮಗಂಗೆ
ಭೀಮ: ನೋಡ್ಲ ಚಾಮ ನೀನೇ ಏನಾರ ಐಡಿಯಾ ಮಾಡು ಇಲ್ಲಾಂದ್ರೆ ಪೋಲೀಸ್ ನೋರ್ಗೆ ಎಲ್ಲ ನಿಂದೆ ಪ್ಲಾನು ಅಂತ ಹೇಳ್ಬುಟ್ಟು ಆಚೆಗೆ ಬಂದು ಬುಟ್ತಿವಿ.
ಚಾಮ: ಅದೆಂಗಲಾ ಹೇಳ್ಬುಟ್ಟಿ ನಂದೆ ಪ್ಲಾನು ಅಂತ ಸಾಕ್ಷಿ ಕೇಳ್ತರೆ ಗೊತ್ತಾ….
ಭೀಮ: ಏ ನನ್ ಮೊಬೈಲ್ ನಾಗೆ ನೀನು ಪ್ಲಾನ್ ಹೇಳ್ದಂಗೆ ಎಲ್ಲ ರೆಕಾರ್ಡು ಮಾಡಿ ಮಡಗಿವ್ನಿ ಗೊತ್ತಾ…
ಸೋಮ: ಭಲೇ ಕಂಡ್ಲ ಭೀಮ, ಒಳ್ಳೆ ಕೆಲ್ಸ ಮಾಡಿದ್ದೀ
ಚಾಮ: ಅಯ್ಯಯ್ಯೋ ಇದೆಲ್ಲ ಮಾಡಿದಿಯೇನ್ಲಾ..
ಭೀಮ: ಹೂ ಮತ್ತೆ ನಾನು ಬಚಾವ್ ಆಗದು ಬೇಡ್ವಾ
ಸೋಮ: ನನ್ನು ಬಚಾವ್ ಮಾಡ್ಲ ಭೀಮ
ಭೀಮ: ನಾನು ಕೇಳ್ದಾಗ ಎಲ್ಲ ಸಾಲ ಕೊಟ್ಟೀಯೋ ಸೋಮು..
ಸೋಮ: ನಿಮ್ಮಪ್ಪನಾಣೆ ಕೊಡ್ತಿನ್ ಕಣ್ಲಾ..
ಭೀಮ: ನಿಮ್ಮಪ್ಪನಾಣೆ ಮಡಿಕೊಳೋ ಸೋಮ, ನಮ್ಮಪ್ಪನಾಣೆ ಯಾಕೆ ಮಡುಗ್ತೀ.
ಸೋಮ: ಅದುನ್ನೇ ಹೇಳಿದ್ದು..
ಚಾಮ: ಅಹ್ಹಹ್ಹಹ್ಹಾ….
ಬೀಮ: ಯಾಕ್ಲ ನಗ್ತಿದ್ದೀ
ಚಾಮ: ಐಡಿಯಾ ಬಂತು
ಭೀಮ: ಏನು ಐಡಿಯಾನ್ಲಾ ಹೇಳ್ಳ ವಸಿ ಮತ್ತೆ ಲೋಕಲ್ ಜೈಲ್ ನಿಂದ ಸೆಂಟ್ರಲ್ ಜೈಲ್ ಗೆ ಹೋಗಂಗೆ ಮಾಡಿಯ ಆಮೆಲೆ (ಎನ್ನುತ್ತಿದ್ದಂತೆ ತಾಳ ತೆಗೆದು ರಾಮಯ್ಯ….)
ರಾಮಯ್ಯ: ನೋಡಿ ಸಾ ಈ ನನ್ ಮಕ್ಳು ಕದಿಯಕ್ಕೆ ಬಂದೌರೆ ( ಎಂದು ಪೋಲಿಸ್ ನವರಿಗೆ ಹೇಳುತ್ತಾನೆ)
ಪೋಲಿಸ್: ಏನ್ರುಲಾ ಕದಿಯಕ್ಕೆ ಬಂದಿದಿರಾ, ಒಬ್ಬೊಬ್ಬಂದು ಬುರುಡೆ ಬಿಸಿನೀರ್ ಕಾಯಿಸಿ ಬಿಡ್ತಿನಿ.
ಚಾಮ: ಇಲ್ಲ ಸಾ ಈ ರಾಮಯ್ಯನ ವಿಸಯ ನಿಮ್ಗೆ ಗೊತ್ತಿಲ್ಲ
ಪೋಲೀಸ್: ಏನು?
ಚಾಮ: ಈ ರಾಮಯ್ಯನಿಗೆ ರಾತ್ರಿ ಹೊತ್ತು ನಿದ್ದೆಲಿ ನಡೆಯೊ ಖಾಯಿಲೆ ಇದೆ ಸಾಮಿ ವಸಿ ದೂರ ನಿಂತ್ಕಳಿ (ಹಾಗನ್ನುತ್ತಿದ್ದಂತೆ ಪೋಲೀಸ್ ಹೌದೆ ಎನ್ನುತ್ತಾ ರಾಮಯ್ಯನಿಂದ ಸ್ವಲ್ಪ ದೂರ ಸರಿದರು)
ಪೋಲೀಸ್: ಹೌದೇನ್ರಿ ರಾಮಯ್ಯ
ರಾಮಯ್ಯ: ಏ ಇಲ್ಲ ಸಾ ಇವ್ನು ಸುಳ್ಳು ಹೇಳ್ತಾವ್ನೆ, ನೀನೇ ಅಲ್ವನೋ ಚಾಮ ಕದಿಯಕ್ಕೆ ಬಂದೌರೆ ಅಂತ ಹೇಳಿದ್ದು
ಚಾಮ: ನಾನೆಲ್ಲಿ ಹೇಳ್ದೆ ಕದಿಯಕ್ಕೆ ಬಂದೌರೆ ಅಂತ
ಪೋಲೀಸ್: ಮತ್ತೆ ಏನುಕ್ಕೆ ಬಂದಿದಿರ
ಚಾಮ: (ಪೋಲಿಸ್ ನವರಿಗೆ ಹೇಳುತ್ತಾ) ನೋಡಿ ಸಾ ನಮ್ಮ ಅಪ್ಪ ಸಾಯಕ್ಕೆ ಮುಂಚೆ ರಾಮಯ್ಯನ ಅಪ್ಪನ ಹತ್ತಿರ ಹಿಂದೆ 10 ಸಾವಿರ ಸಾಲ ತಗೊಂಡಿದ್ರು, ತೀರಿಸಕ್ಕೆ ಆಗ್ದೆ ಸತ್ತು ಹೋದ್ರು, ನಂಗೆ ತೀರಿಸಕ್ಕೆ ಹೇಳಿದ್ರು ಅವಾಗಿನಿಂದ ಇವತ್ತಿನಗಂಟ 20 ಸಾವಿರ ಬಡ್ಡಿ ಸೇರಿಸಿ ರಾಮಯ್ಯನಿಗೆ ಕೊಡಕ್ಕೆ ಬಂದಿದ್ದು, ರಾಮಯ್ಯ ಖುಷಿಗೆ ಇವತ್ತು ಇಲ್ಲೆ ಇದ್ದು ಊಟ ಮಾಡ್ಕೊಂಡು ನಾಳಿಕೆ ಹೋಗಿ ಅಂದ ಅದಿಕ್ಕೆ ಇಲ್ಲೇ ಉಳ್ಕೊಂಡಿದ್ದು, ಇವನ ಈ ಖಾಯಿಲೆ ಇಂದ ಪಾಪ ಇಷ್ಟೊತ್ತಲ್ಲಿ ನಿಮ್ಗೆ ತೊಂದ್ರೆ ಕೊಟ್ಟ ಅಷ್ಟೆಯ.
ರಾಮಯ್ಯ: ಏ ಏನೋ ಇಷ್ಟೊಂದು ಸುಳ್ಳು ಬುಡ್ತಿದ್ದೀ..ಇವ್ನು ಹೇಳ್ತಿರೊದೆಲ್ಲ ಸುಳ್ಳು ಸಾ ಇವನ ಮಾತು ನಂಬೇಡಿ
ಪೋಲೀಸ್: ಹಾಗಾದ್ರೆ ದುಡ್ಡು ತೋರಿಸಿ
ಚಾಮ: ಈ ತಿಜೋರಿಲಿ ಐತೆ ಸಾ, ಏನ್ ನೋಡ್ತಿದ್ದಿ ತಿಜೋರಿ ಕದ ತೆಗೆದು ತೋರುಸ್ಲಾ ರಾಮಯ್ಯ ಸಾಮಿಯೋರಿಗೆ
ಪೋಲೀಸ್: ತಿಜೋರಿ ಓಪನ್ ಮಾಡು ರಾಮಯ್ಯ
ರಾಮಯ್ಯ: ಸಾ ಅದು ಹಾಗಲ್ಲ ಸಾ ನನ್ನ ಮಾತು ಕೇಳಿ ವಸಿ.
ಪೋಲೀಸ್: ಮೊದ್ಲು ತಿಜೋರಿ ಓಪನ್ ಮಾಡು (ಎಂದು ಗದರುತ್ತಿದ್ದಂತೆ ರಾಮಯ್ಯ ತಿಜೋರಿ ಕದ ತೆಗೆದಾಗ ಅದರಲ್ಲಿ 30 ಸಾವಿರ ದುಡ್ಡು ಇರುತ್ತದೆ ಅದನ್ನು ನೋಡಿದ ಪೋಲೀಸರು)
ಪೋಲೀಸ್: ನಿಂಗೆ ನಿದ್ದೆ ನಡೆಯೊ ಕಾಯಿಲೆ ಇದೆ ಅಂತ ಸುಮ್ನೆ ಬಿಡ್ತಿದಿನಿ ಇಲ್ಲಾಂದ್ರೆ ಶಿಕ್ಷೆ ಕೊಡ್ತಿದ್ದೆ.
ರಾಮಯ್ಯ: ಸಾ ಇಷ್ಟತಕ್ಕ ಇವರೆಲ್ಲ ಹೇಳಿದ್ದು ಸುಳ್ಳು ಸಾ ನಂಗೆ ಯಾವ್ ಖಾಯಿಲೆನು ಇಲ್ಲ ಈ ದುಡ್ಡು ಯಾವ್ದಪ್ಪ ಅಂದ್ರೆ (ಎನ್ನುವಾಗಲೇ ಭೀಮ..)
ಭೀಮ: ರಾಮಯ್ಯ ಪಾಪ ಹೋಗಿ ರೆಸ್ಟ್ ಮಾಡು ನಾಳೆ ನಿನ್ನ ಆಸ್ಪತ್ರೆ ಕರಕೊಂಡು ಹೋಯ್ತಿವಿ, ನೀವು ಹೋಗಿ ಸಾಮಿ ಸ್ಟೇಷನ್ ಗೆ ಪಾಪ ಅಲ್ಲಿ ಯಾರು ಇರಕಿಲ್ಲ.
ಪೋಲೀಸ್: ಸರಿ ನಾನು ಹೋಗ್ತಿನಿ ಹುಷಾರು ಕಣ್ರಪ್ಪ
ರಾಮಯ್ಯ: ಬಾಳಾ ಚಾಲಾಕಿ ಕಣ್ರುಲಾ ನೀವೆಲ್ಲ, ಇನ್ನೊಂದು ದಿನ ನಿಮ್ಕೆಲ್ಲ ನೋಡ್ಕೊತಿನಿ
ಚಾಮ: ಇನ್ನೊಂದು ದಿನ ನಿನ್ ಮನೆಗೆ ಬರಲ್ಲ ಬಿಡ್ಲಾ ರಾಮ, ಲೇ ಭೀಮ ಮೊದ್ಲು ನಿನ್ ಮೊಬೈಲ್ ನಲ್ಲಿ ಇರೋ ರೆಕಾರ್ಡು ಎಲ್ಲ ಡಿಲೀಟ್ ಮಾಡಪ್ಪ ( ಎಂದು ಮಾತನಾಡಿಕೊಳ್ಳುತ್ತಾ ರಾಮಯ್ಯನ ಮನೆಇಂದ ಹೊರ ನಡೆದರು)
ಭೀಮ: ನನ್ ತವು ಟಚ್ ಸ್ಕ್ರೀನ್ ಮೊಬೈಲ್ ಇದ್ರೆ ತಾನೆ ಡಿಲೀಟ್ ಮಾಡಕ್ಕೆ.
ಸೋಮ: ಹಾಗಾದ್ರೆ ಸುಮ್ಕೆ ಹಾಗಂದ, ಸಧ್ಯ ನಾನು ಬಚಾವು ಆಗಬೋದು ಅಂದುಕೊಂಡು ಬಿಟ್ಟಿದ್ದೆನಲ್ಲಪ್ಪಾ….
ಭೀಮ: ಲೇ ಚಾಮ ಒಳ್ಳೆ ಐಡಿ ಮಾಡಿದೆ ಕಣ್ಳಾ ಬಚಾವ್ ಆಗಕ್ಕೆ.
ಚಾಮ: ಇಂಗೆಲ್ಲ ಆಗ್ತಿರ್ಲಿಲ್ಲ ಯಾವ್ದೋ ಮಿಕ್ಸ್ ಮಾಡ್ಬುಟೌನೆ ಕಣ್ಲಾ ಎಣ್ಣೆಗೆ ಹೆವಿ ಕಿಕ್ಕು ನನ್ ಮಗಂದು ಕುಡಿದಮೇಕೆ ಏನು ಗೊತ್ತೇ ಆಗಕಿಲ್ಲ. ಅದು ಸರಿ ಈಗ ಇನ್ನ ಬೆಳಕರ್ದಿಲ್ಲ ಈಗ ಬೇರೆ ಮನೆಗೆ ಕನ್ನ ಹಾಕುವ ಏನಂತೀರಿ ದುಡ್ಡು ಮಾಡ್ಕೊಂಡೆ ಊರಿಗೆ ಕಾಲಿಡಬೇಕು ಅಲ್ವನ್ಲಾ ಸೋಮ…
ಸೋಮ: ಈಗ ನಾವಿಬ್ಬರೂ ಸೇರಿಸಿ ಕೊಡ್ತಿವಿ ನಿಂಗೆ ದುಡ್ಡ ಎಷ್ಟು ಬೇಕಾದ್ರು ತಗೋ, ಹಾಕ್ಲಾ ಭೀಮ ಇವಂಗೆ ಇನ್ನ ಬುದ್ಧಿ ಬಂದಿಲ್ಲ (ಎನ್ನುತ್ತಾ ಸೋಮ ಭೀಮ ಇಬ್ಬರು ಚಾಮನ ಬೆನ್ನಿನ ಮೇಲೆ ಮುಷ್ಟಿಇಂದ ಗುದಿಯುತ್ತಾ ಊರಿನ ತನಕ ಓಡಿಸಿಕೊಂಡು ಬಂದರು..)

ಸಂಪಾದಕರ ನುಡಿ
ಹಾಸ್ಯ ಎನ್ನುವುದು ಕೇವಲ ನಗುವಿನ ಸಾಧನವಲ್ಲ; ಅದು ಸಮಾಜದ ತಪ್ಪು-ಒಪ್ಪುಗಳನ್ನು ಸರಳವಾಗಿ ಮನದಟ್ಟಾಗಿಸುವ ಪರಿಣಾಮಕಾರಿ ಮಾಧ್ಯಮ. ಇದೇ ಉದ್ದೇಶವನ್ನು ಹೊತ್ತು ಬಂದಿರುವ “ಅರಳಿ ಕಟ್ಟೆ ಮಿತ್ರರು” ಸರಣಿಯ “ಮಿತ್ರರು ಕಳ್ಳತನಕ್ಕೆ ಹೋದಾಗ…” ಪ್ರಸಂಗವು ಗ್ರಾಮೀಣ ಜೀವನದ ಸಹಜ ಸೊಗಡನ್ನು, ಸ್ನೇಹಿತರ ಮುಗ್ಧತನವನ್ನು ಹಾಗೂ ತಪ್ಪು ನಿರ್ಧಾರದ ಪರಿಣಾಮವನ್ನು ಹಾಸ್ಯದ ಮೂಲಕ ಪರಿಣಾಮಕಾರಿಯಾಗಿ ಚಿತ್ರಿಸುತ್ತದೆ.
ಲೇಖಕರು ಗ್ರಾಮೀಣ ಕನ್ನಡದ ಸೊಗಡನ್ನು ಉಳಿಸಿಕೊಂಡು, ಪ್ರೇಕ್ಷಕರನ್ನು ಆರಂಭದಿಂದ ಅಂತ್ಯದವರೆಗೆ ಕುತೂಹಲದಿಂದ ಹಿಡಿದಿಟ್ಟುಕೊಳ್ಳುವ ಸಂಭಾಷಣೆಗಳನ್ನು ಹೆಣೆದಿದ್ದಾರೆ. ಚಾಮ, ಸೋಮ ಮತ್ತು ಭೀಮನ ಪಾತ್ರಗಳು ನಮ್ಮ ಸುತ್ತಮುತ್ತಲಿನ ಸಾಮಾನ್ಯ ವ್ಯಕ್ತಿಗಳಂತೆಯೇ ಭಾಸವಾಗುತ್ತವೆ. ಅವರ ನಡುವಿನ ಮಾತಿನ ಚಕಮಕಿ, ಸನ್ನಿವೇಶಗಳು ಹಾಗೂ ಕೊನೆಯಲ್ಲಿ ಉಂಟಾಗುವ ಗೊಂದಲ ನಗುವಿನ ಜೊತೆಗೆ ಚಿಂತನೆಗೂ ಕಾರಣವಾಗುತ್ತದೆ.
ಈ ನಾಟಕ ಮನರಂಜನೆಯ ಜೊತೆಗೆ ಒಂದು ಸ್ಪಷ್ಟ ಸಂದೇಶವನ್ನೂ ನೀಡುತ್ತದೆ—ಸುಲಭವಾಗಿ ಹಣ ಸಂಪಾದಿಸುವ ಆಸೆ ಕೊನೆಯಲ್ಲಿ ಸಂಕಷ್ಟಕ್ಕೆ ದಾರಿ ಮಾಡಿಕೊಡುತ್ತದೆ. ಪ್ರಾಮಾಣಿಕ ಪರಿಶ್ರಮ ಮತ್ತು ಸತ್ಯದ ಬದುಕೇ ನಿಜವಾದ ಯಶಸ್ಸಿನ ಮಾರ್ಗ ಎಂಬುದನ್ನು ಹಾಸ್ಯದ ಹೊದಿಕೆಯಲ್ಲಿ ಮನಮುಟ್ಟುವಂತೆ ಹೇಳುತ್ತದೆ.
ಈ ನಾಟಕವನ್ನು ಓದುಗರು ಮತ್ತು ರಂಗಪ್ರಿಯರು ಆತ್ಮೀಯವಾಗಿ ಸ್ವೀಕರಿಸಿ, ವೇದಿಕೆಯಲ್ಲಿ ಯಶಸ್ವಿಯಾಗಿ ಪ್ರದರ್ಶಿಸುವರೆಂಬ ವಿಶ್ವಾಸ ನಮ್ಮದು. ಲೇಖಕರ ಸೃಜನಶೀಲತೆಗೆ ಅಭಿನಂದನೆಗಳು. ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ತಮ ಕೃತಿಗಳು ಅವರಿಂದ ಹೊರಬರಲಿ ಎಂದು ಹಾರೈಸುತ್ತೇನೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


