ತಿಪಟೂರು: ತಾಲ್ಲೂಕಿನಾದ್ಯಂತ ಸಾರ್ವಜನಿಕರ ಆರೋಗ್ಯ ರಕ್ಷಣೆಗೆ ಶ್ರಮಿಸುತ್ತಿರುವ ತಿಪಟೂರು ಲಯನ್ಸ್ ಕ್ಲಬ್ ವತಿಯಿಂದ ಗುರುವಾರ ಹಮ್ಮಿಕೊಳ್ಳಲಾಗಿದ್ದ ಎರಡು ಪ್ರತ್ಯೇಕ ಕಣ್ಣಿನ ಉಚಿತ ತಪಾಸಣೆ, ಶಸ್ತ್ರಚಿಕಿತ್ಸೆ ಮತ್ತು ಲೆನ್ಸ್ ಅಳವಡಿಕೆ ಕಾರ್ಯಕ್ರಮಗಳು ಯಶಸ್ವಿಯಾಗಿ ಜರುಗಿವೆ. ಈ ಕುರಿತು ಲಯನ್ಸ್ ಕ್ಲಬ್ ನ ಕಾರ್ಯದರ್ಶಿ ತಿಪಟೂರು ಕೃಷ್ಣ ಅವರು ಮಾಹಿತಿ ನೀಡಿದ್ದಾರೆ.
ತಿಪಟೂರು ಲಯನ್ಸ್ ಕ್ಲಬ್, ಸತ್ಯಕುಮಾರ್ ರಿಲೀಫ್ ಫೌಂಡೇಷನ್, ಬೆಂಗಳೂರಿನ ಶ್ರದ್ಧಾ ಐ ಕೇರ್ ಟ್ರಸ್ಟ್ ಹಾಗೂ ಕುಟುಂಬ ಮತ್ತು ಕಲ್ಯಾಣ ಇಲಾಖೆಯ ಜಂಟಿ ಆಶ್ರಯದಲ್ಲಿ ಪ್ರತಿ ತಿಂಗಳೂ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಒಟ್ಟು ಐದು ಉಚಿತ ಶಿಬಿರಗಳನ್ನು ನಡೆಸಲು ಯೋಜನೆ ರೂಪಿಸಲಾಗಿದೆ. ಇದರ ಮುಂದಿನ ಭಾಗವಾಗಿ ಬರುವ ನಾಲ್ಕನೇ ಮಂಗಳವಾರ ನೊಣವಿನಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶಿಬಿರ ಆಯೋಜನೆಯಾಗಲಿದೆ.
ಬಿಳಿಗೆರೆ ಪಿ.ಹೆಚ್.ಸಿ: ಬಿಳಿಗೆರೆಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದ ಉಚಿತ ಕಣ್ಣಿನ ಪರೀಕ್ಷೆ ಮತ್ತು ಶಸ್ತ್ರಚಿಕಿತ್ಸೆ ಕಾರ್ಯಕ್ರಮದಲ್ಲಿ ಲಯನ್ಸ್ ಸದಸ್ಯರಾದ ಕೆ.ಆರ್. ದೇವರಾಜು, ವೈದ್ಯರಾದ ಮಂಜುನಾಥ್ ಮತ್ತಿತರರು ಪಾಲ್ಗೊಂಡಿದ್ದರು. ಇಲ್ಲಿ ಒಟ್ಟು 22 ಜನ ಕಣ್ಣಿನ ಪರೀಕ್ಷೆಗೆ ಒಳಗಾಗಿದ್ದು, ಅವರಲ್ಲಿ 6 ಜನರನ್ನು ಲೆನ್ಸ್ ಅಳವಡಿಕೆಗೆ ಆಯ್ಕೆ ಮಾಡಲಾಗಿದೆ.
ಹಾಲ್ಕುರಿಕೆ ಪಿ.ಹೆಚ್.ಸಿ: ಹಾಲ್ಕುರಿಕೆ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದ ಶಿಬಿರಕ್ಕೂ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಆಸ್ಪತ್ರೆಯ ವೈದ್ಯಾಧಿಕಾರಿಗಳು, ಕಣ್ಣಿನ ತಜ್ಞ ವೈದ್ಯರು ಹಾಗೂ ಲಯನ್ಸ್ ಸಂಸ್ಥೆಯ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಇಲ್ಲಿ ತಪಾಸಣೆ ನಡೆಸಿದ 46 ಜನರಲ್ಲಿ 6 ಜನರನ್ನು ಉಚಿತ ಕಣ್ಣಿನ ಶಸ್ತ್ರಚಿಕಿತ್ಸೆಗೆ ಆಯ್ಕೆ ಮಾಡಲಾಗಿದೆ ಎಂದು ಅವರುತ ತಿಳಿಸಿದರು.
ಗ್ರಾಮೀಣ ಭಾಗದ ಜನರಿಗೆ ಉಚಿತವಾಗಿ ಕಣ್ಣಿನ ಆರೈಕೆ ತಲುಪಿಸುತ್ತಿರುವ ಈ ಮಾನವೀಯ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವರದಿ: ಆನಂದ್, ತಿಪಟೂರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


