ತುಮಕೂರು: ಕೊರಟಗೆರೆ ತಾಲೂಕಿನ ಹೊಳವನಹಳ್ಳಿ ಹೋಬಳಿ ವ್ಯಾಪ್ತಿಯ ಚೆಂಪುಗಾನಹಳ್ಳಿ ಗ್ರಾಮದಲ್ಲಿ ಸುಮಾರು ಮೂರು ದಿನಗಳ ಕಾಲ ಗ್ರಾಮ ದೇವತೆ ಮಾರಮ್ಮ ದೇವಿಯ ಜಾತ್ರಾ ಮಹೋತ್ಸವವು ಅತ್ಯಂತ ಅದ್ದೂರಿಯಾಗಿ ಜರುಗಿತು.
ದೇವಿಯ ಉತ್ಸವ ಪ್ರಾರಂಭವಾಗುತ್ತಿದ್ದಂತೆಯೇ ಗ್ರಾಮದ ಸುತ್ತ ಕುರ್ಜು ರಥವನ್ನು ಎಳೆದು, ಗ್ರಾಮಕ್ಕೆ ಯಾವುದೇ ರೀತಿಯ ತೊಂದರೆಯಾಗದಂತೆ ಗ್ರಾಮಸ್ಥರು ಆರತಿ ಸೇವೆ ಹಾಗೂ ವಿಶೇಷ ಪೂಜೆಗಳನ್ನು ಸಲ್ಲಿಸಿದರು.
ಮಾರಮ್ಮನ ಜಾತ್ರೆ ಎಂದರೆ ಮಾಂಸಾಹಾರಿ (ನಾನ್–ವೆಜ್) ಊಟದ ವ್ಯವಸ್ಥೆ ಕಡ್ಡಾಯವಾಗಿರುತ್ತದೆ. ಅದೇ ರೀತಿ ಚೆಂಪುಗಾನಹಳ್ಳಿಯಲ್ಲಿ ನಡೆದ ಮಾರಮ್ಮ ದೇವಿಯ ಜಾತ್ರಾ ಮಹೋತ್ಸವಕ್ಕೆ ಆಗಮಿಸಿದ ನೆಂಟರು, ರಾಜಕೀಯ ಮುಖಂಡರು, ಅಧಿಕಾರಿಗಳು, ಸ್ನೇಹಿತರು ಮತ್ತು ಬಂಧುಗಳಿಗಾಗಿ ಗ್ರಾಮಸ್ಥರು ಸುಮಾರು ಒಂದು ಸಾವಿರಕ್ಕೂ ಹೆಚ್ಚು ಕುರಿಗಳನ್ನು ಕಡಿದು ವಿಶೇಷ ಬಾಡೂಟದ ವ್ಯವಸ್ಥೆ ಮಾಡಿದ್ದರು. ಪ್ರತಿಯೊಬ್ಬರ ಮನೆಯ ಮುಂದೆ, ರಸ್ತೆಯ ಇಕ್ಕೆಲಗಳಲ್ಲಿ ಶಾಮಿಯಾನ (ಪೆಂಡಾಲ್) ಹಾಕಿ ಬಾಡೂಟದ ವ್ಯವಸ್ಥೆ ಮಾಡಿದ್ದು ಈ ಜಾತ್ರೆಯ ವಿಶೇಷವಾಗಿತ್ತು.
ಇದೇ ಸಂದರ್ಭದಲ್ಲಿ ಊರಿನ ಹೊರಗಿನ ಮುತ್ಯಾಲಮ್ಮ, ತೋರೆ ಮಾರಮ್ಮ, ಸಪ್ಲಮ್ಮ, ಮಾವುತ್ತೂರಮ್ಮ ಸೇರಿದಂತೆ ಸಪ್ತ ಮಾತೃಕಾ ದೇವತೆಗಳಿಗೆ ಗ್ರಾಮಸ್ಥರು ಆರತಿ ಸೇವೆ ಸಲ್ಲಿಸಿದರು. ಅನೇಕ ಭಕ್ತರು ಮಳೆ–ಬೆಳೆಗಾಗಿ ಹಾಗೂ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ವಿಶೇಷ ಹರಕೆಗಳನ್ನು ತೀರಿಸಿದರು. ಮೂರು ದಿನಗಳ ಕಾಲ ನಡೆದ ಈ ಜಾತ್ರಾ ಮಹೋತ್ಸವವು ಭವ್ಯ ಮೆರವಣಿಗೆಯೊಂದಿಗೆ ಸಂಪನ್ನಗೊಂಡಿತು. ಜಾತ್ರೆಯ ಅಂಗವಾಗಿ ಚೆಂಪುಗಾನಹಳ್ಳಿ ಯುವ ಮಿತ್ರರಿಂದ ‘ಕುರುಕ್ಷೇತ್ರ’ ಪೌರಾಣಿಕ ನಾಟಕ ಪ್ರದರ್ಶನವನ್ನು ಸಹ ಹಮ್ಮಿಕೊಳ್ಳಲಾಗಿತ್ತು. ಇದರಲ್ಲಿ ಊರಿನ ಯಜಮಾನರು, ಕೈವಾಡದವರು, ಗೌಡರುಗಳು ಸೇರಿದಂತೆ ಗ್ರಾಮಸ್ಥರು ಸಕ್ರಿಯವಾಗಿ ಭಾಗವಹಿಸಿದ್ದರು.
ಚೆಂಪುಗಾನಹಳ್ಳಿ ಮಾರಮ್ಮ ದೇವಿಯ ಜಾತ್ರೆಗೆ ವಿವಿಧ ಜಿಲ್ಲೆಗಳು ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಅಪಾರ ಸಂಖ್ಯೆಯಲ್ಲಿ ನೆಂಟರು, ಮಿತ್ರರು ಆಗಮಿಸಿದ್ದರು. ಜನಸಾಗರವೇ ಹರಿದುಬಂದ ಹಿನ್ನೆಲೆಯಲ್ಲಿ ರಸ್ತೆಯುದ್ದಕ್ಕೂ ವಾಹನಗಳ ದಟ್ಟಣೆ ಉಂಟಾಗಿ ಭಾರೀ ಟ್ರಾಫಿಕ್ ಜಾಮ್ ಉಂಟಾಗಿತ್ತು. ಊಟಕ್ಕಾಗಿ ಮತ್ತು ಜಾತ್ರೆ ನೋಡಲು ಆಗಮಿಸಿದ ಬಂಧುಗಳು ಊರಿನ ಹೊರಗಡೆಯೇ ತಮ್ಮ ವಾಹನಗಳನ್ನು ನಿಲ್ಲಿಸಿ, ನಡೆದುಕೊಂಡು ಮನೆಗಳನ್ನು ಹುಡುಕಿಕೊಂಡು ಹೋಗುತ್ತಿದ್ದ ದೃಶ್ಯಗಳು ಕಂಡುಬಂದವು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


