ರಾಮನಗರ: ಬಿಡದಿ ಟೌನ್ ಶಿಪ್ (Bidadi Township) ನಿರ್ಮಾಣದ ವಿಚಾರವಾಗಿ ತಲೆದೂರಿರುವ ಗದ್ದಲ ಮತ್ತು ಜಟಾಪಟಿ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಸರ್ಕಾರದ ಈ ಯೋಜನೆಯ ವಿರುದ್ಧ ಜಮೀನು ಕಳೆದುಕೊಳ್ಳುವ ಭೀತಿಯಲ್ಲಿರುವ ರೈತರು ತೀವ್ರ ಆಕ್ರೋಶ ಹೊರಹಾಕಿದ್ದು, ಭೂಸ್ವಾಧೀನ ಪ್ರಕ್ರಿಯೆಯ ವಿರುದ್ಧ ತಿರುಗಿಬಿದ್ದಿದ್ದಾರೆ.
ವಿರೋಧದ ನಡುವೆಯೂ ಬಿಡದಿ ತಾಲೂಕಿನ ಮಂಡಲಹಳ್ಳಿ ಗ್ರಾಮದಲ್ಲಿ ಜಿಬಿಡಿಎ (GBDA) ಅಧಿಕಾರಿಗಳು ಜೆಎಂಸಿ (JMC) ಸರ್ವೆ ನಡೆಸಲು ಮುಂದಾಗಿದ್ದರು. ಅಧಿಕಾರಿಗಳು ಸರ್ವೆಗಾಗಿ ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಕೆರಳಿದ ಮಂಡಲಹಳ್ಳಿ ಗ್ರಾಮದ ರೈತರು ಮತ್ತು ರೈತ ಮಹಿಳೆಯರು ಅಧಿಕಾರಿಗಳ ಕಾರನ್ನು ಸುತ್ತುವರಿದರು.
ಯಾವುದೇ ಕಾರಣಕ್ಕೂ ತಮ್ಮ ಜಮೀನಿನ ಸರ್ವೆ ನಡೆಸಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದ ರೈತರು, ಅಧಿಕಾರಿಗಳು ಎಷ್ಟೇ ಮನವಿ ಮಾಡಿದರೂ ಕೇಳಲಿಲ್ಲ. ಬಲವಂತವಾಗಿ ಸರ್ವೆ ಮಾಡಲು ಮುಂದಾದ ಅಧಿಕಾರಿಗಳ ಮೇಲೆ ರೈತ ಮಹಿಳೆಯರು ಪೊರಕೆಯಿಂದ ಹೊಡೆದು ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ. ಸ್ಥಳದಲ್ಲಿ ಪೊಲೀಸರು ಉಪಸ್ಥಿತರಿದ್ದರೂ ಸಹ ರೈತರ ತೀವ್ರ ಆಕ್ರೋಶವನ್ನು ತಡೆಯಲು ಸಾಧ್ಯವಾಗಲಿಲ್ಲ. ಪೊಲೀಸರ ಎದುರೇ ಅಧಿಕಾರಿಗಳ ಕಾರಿಗೆ ಮುತ್ತಿಗೆ ಹಾಕಿ ಪೊರಕೆಗಳಿಂದ ಜಡಿಯಲಾಗಿದೆ.
ಘಟನೆ ನಡೆದ ಬೆನ್ನಲ್ಲೇ ರಾಮನಗರ ಎಸ್ ಪಿ ಶ್ರೀನಿವಾಸ ಗೌಡ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದ್ದಾರೆ. ಎಎಸ್‌ಪಿ ರಾಮಚಂದ್ರಯ್ಯ, ಡಿವೈಎಸ್ ಪಿ ಗಿರೀಶ್ ಹಾಗೂ ಶ್ರೀನಿವಾಸ್ ಅವರಿಂದ ಮಾಹಿತಿ ಪಡೆದ ಎಸ್‌ಪಿ, ಸ್ಥಳದಲ್ಲೇ ಮೊಕ್ಕಾಂ ಹೂಡಿ ರೈತರೊಂದಿಗೆ ಮಾತುಕತೆ ನಡೆಸಿದ್ದಾರೆ.
“ಯಾರೂ ಕಾನೂನನ್ನು ಕೈಗೆತ್ತಿಕೊಳ್ಳುವ ಕೆಲಸ ಮಾಡಬಾರದು. ಸರ್ಕಾರಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಬೇಡಿ. ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದರೆ ನಾವು ಸುಮ್ಮನೆ ಕೂರುವುದಿಲ್ಲ,” ಎಂದು ಎಸ್‌ಪಿ ಶ್ರೀನಿವಾಸ ಗೌಡ ಅವರು ರೈತರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಬಿಡದಿ ಟೌನ್‌ಶಿಪ್ ಜಟಾಪಟಿಯಿಂದಾಗಿ ಸದ್ಯ ಮಂಡಲಹಳ್ಳಿ ಗ್ರಾಮದಲ್ಲಿ ಬೂದಿ ಮುಚ್ಚಿದ ಕೆಂಡದಂತಹ ವಾತಾವರಣ ನಿರ್ಮಾಣವಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


