ಕುಣಿಗಲ್: ಸರ್ಕಾರದ ಯೋಜನೆ ನೇರವಾಗಿ ಫಲಾನುಭವಿಗಳಿಗೆ ತಲುಪುತ್ತಿದೆ. ಇದರಲ್ಲಿ ಮಧ್ಯವರ್ತಿಗಳಿಗೆ ಅವಕಾಶವಿಲ್ಲ. ಮಹಿಳೆಯರು ಸರ್ಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಅಭಿವೃದ್ಧಿ ಹೊಂದುವುದರ ಜತೆಗೆ ಸ್ವಾಭಿಮಾನದ ಬದುಕು ಕಟ್ಟಿ ಕೊಳ್ಳುವಂತೆ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ.ಪದ್ಮಾವತಿ ತಿಳಿಸಿದರು.
ಅವರು ಕೆಎಸ್ ಎಸ್ ಐಡಿಸಿ ಕೈಗಾರಿಕಾ ವಸಾಹತು ಪ್ರದೇಶದಲ್ಲಿ ಶ್ರೀ ಈಶ್ವರಿ ಮಹಿಳಾ ಸಮಾಜ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕರ್ನಾಟಕ ರಾಜ್ಯ ಅಭಿವೃದ್ಧಿ ನಿಗಮ ಸಂಯುಕ್ತಾಶ್ರಯದಲ್ಲಿ ಸೆಲ್ಫ್ ಎಂಪ್ಲಾಯ್ಡ್ ಟೈಲರಿಂಗ್ ತರಬೇತಿ ಕೇಂದ್ರ ಉದ್ಘಾಟಿಸಿ ಮಾತನಾಡಿದರು.
ಬ್ಯಾಂಕ್ ಸಹಕಾರ ಅಗತ್ಯ: ಮಹಿಳೆಯ ಆರ್ಥಿಕ ಅಭಿವೃದ್ಧಿಗೆ ರಾಜ್ಯ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದು, ನೂರಾರು ಕೋಟಿ ರೂ.ಗಳು ಸಹಾಯ ಧನ ನೀಡುತ್ತಿದೆ. ಮಹಿಳಾ ಸ್ವಸಹಾಯ ಸಂಘಗಳು ಸರ್ಕಾರದ ಸಹಾಯಧನವನ್ನು ಬ್ಯಾಂಕ್‌ಗಳ ಸಾಲ ಸೌಲಭ್ಯದಿಂದ ಪಡೆದು, ರೊಟ್ಟಿ, ಹಪ್ಪಳ ತಯಾರಿಕೆ, ಹೊಲಿಗೆ ತರಬೇತಿ ಸೇರಿದಂತೆ ಅನೇಕ ಗೃಹ ಕಸುಬುಗಳಲ್ಲಿ ತೊಡಗಿಸಿಕೊಂಡು ಆರ್ಥಿಕವಾಗಿ ಅಭಿವೃದ್ಧಿ ಹೊಂದುತ್ತಿದ್ದಾರೆ. ಸರ್ಕಾರ ಯೋಜನೆಗಳಿಗೆ ಯಾವುದೇ ಮಧ್ಯವರ್ತಿ, ದಲ್ಲಾಳಿಗಳು ಇಲ್ಲದೇ ನೇರವಾಗಿ ಫಲಾನುಭವಿಗಳ ಖಾತೆಗಳಿಗೆ ಹಣ ಜಮಾ ಮಾಡುತ್ತಿದೆ ಎಂದರು.
ಶಿಕ್ಷಣ ಕ್ರಾಂತಿ: ಅಕ್ಷರದವ್ವ ಸಾವಿತ್ರಿ ಬಾಯಿ ಪುಲೆ ಅವರು ಮಹಿಳೆಯರು ಮನೆಗೆ ಸೀಮಿತವಾಗಬಾರದು, ಎಲ್ಲರಂತೆ ಮಹಿಳೆಯರು ಶಿಕ್ಷಣ ಕಲಿಯಬೇಕು, ಶಿಕ್ಷಣದಿಂದ ವಂಚಿತರಾಗಬಾರದೆಂದು ಮಹಿಳಾ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿ ಶಿಕ್ಷಣ ಕ್ರಾಂತಿ ನಿರ್ಮಾಣ ಮಾಡಿದರು. ಇಂದು ಹೆಣ್ಣು ಮಕ್ಕಳು ಸ್ವಾಭಿಮಾನದಿಂದ ಬದುಕುತ್ತಿದ್ದಾರೆ ಎಂದರೆ ಸಾವಿತ್ರಿ ಬಾಯಿ ಪುಲೆ ಅವರು ಕಾರಣರಾಗಿದ್ದಾರೆ ಎಂದು ಹೇಳಿದರು.
ಮಹಿಳಾ ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಡಾ.ಎಸ್. ಸಿದ್ದರಾಮಣ್ಣ ಮಾತನಾಡಿ ಮಹಿಳೆಯರ ಅಭಿವೃದ್ಧಿಗೆ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯ ದಬ್ಬಾಳಿಕೆ ತಡೆಗಟ್ಟಲು ಕೇವಲ ಸರ್ಕಾರದಿಂದ ಸಾಧ್ಯವಿಲ್ಲ. ಇದಕ್ಕೆ ಸಂಘ ಸಂಸ್ಥೆಗಳು ಮತ್ತು ಸಾರ್ವಜನಿಕರು ಕೈ ಜೋಡಿಸಿದರೆ ಇದು ಸಾಧ್ಯವಾಗಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಕೆ.ಎಚ್. ಅಂಬಿಕಾ, ಸಿಡಿಪಿಒ ಕೆ.ಕಮಲಮ್ಮ, ಅಭಿವೃದ್ಧಿ ನಿರೀಕ್ಷಕಿ ಜಾನ್ಹವಿ, ನ್ಯಾಯವಾದಿ ಗಾಯತ್ರಿರಾಜು, ಎಸ್‌ಬಿಐ ಬ್ಯಾಂಕ್ ವ್ಯವಸ್ಥಾಪಕ ಶ್ರೀಧರ್‌ಮೂರ್ತಿ, ಈಶ್ವರಿ ಮಹಿಳಾ ಸಮಾಜದ ಅಧ್ಯಕ್ಷೆ ರಂಗಮ್ಮ, ಮುಖಂಡ ರಾಜು ಮತ್ತಿತರರು ಇದ್ದರು.
ಅಂದಿನ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿ ಎಸ್.ಎಂ .ಕೃಷ್ಣ ಅವರು ಗ್ರಾಮೀಣ ಭಾಗದಲ್ಲಿ ಸ್ತ್ರೀ ಶಕ್ತಿ ಸಂಘವನ್ನು ಸ್ಥಾಪನೆ ಮಾಡಿ ಆ ಸಂಘಗಳಿಗೆ ಆರ್ಥಿಕ ನೆರವು ನೀಡುವ ಮೂಲಕ ಮಹಿಳೆಯರ ಆರ್ಥಿಕ ಮತ್ತು ಸ್ವಾವಲಂಬಿ ಬದುಕಿಗೆ ನೆರವಾಗಿದ್ದರು. ರಾಜ್ಯದಲ್ಲಿ ಐದು ಗ್ಯಾರಂಟಿ ಯೋಜನೆಗಳು ಮಹಿಳೆಯರ ಆರ್ಥಿಕ ಅಭಿವೃದ್ಧಿಗೆ ಪೂರಕವಾಗಿವೆ.
— ಜಿ.ಪದ್ಮಾವತಿ, ಅಧ್ಯಕ್ಷರು, ಮಹಿಳಾ ಅಭಿವೃದ್ಧಿ ನಿಗಮ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


