ಕುಣಿಗಲ್: ತಾಲೂಕಿನಲ್ಲಿ ಎಸ್ ಐಆರ್ ಶೇ. ನೂರರಷ್ಟು ಪ್ರಗತಿ ಸಾಧಿಸಲೆಂದು ಜಿ.ಪಂ, ತಾ.ಪಂ, ತಾಲೂಕು ಸ್ವೀಪ್ ಸಮಿತಿ ವತಿಯಿಂದ ತಾ.ಪಂ. ಇಒ ವಸಂತಕುಮಾರ್ ಅವರ ನೇತೃತ್ವದಲ್ಲಿ ಹುಲಿಯೂರುದುರ್ಗದಲ್ಲಿ ಜು. 13ರಂದು ಮೇಣದ ಬತ್ತಿ ದೀಪ ಹಿಡಿದು ಜನ ಜಾಗೃತಿ ಜಾಥಾ ಮೂಲಕ ಎಸ್ ಐಆರ್ ಅರಿವು ಮೂಡಿಸಿದರು.
ಇಲ್ಲಿನ ಗ್ರಾಮ ಪಂಚಾಯಿತಿ ಆವರಣದಲ್ಲಿ ನೂರಾರು ಸ್ವ–ಸಹಾಯ ಸಂಘದ ಮಹಿಳೆಯರು, ನಾಗರಿಕರು, ಅಧಿಕಾರಿಗಳು ಪಂಚಾಯಿತಿಯಿಂದ ಹಳೇಪುರಮ್ಮ ದೇವಾಲಯದ ರಸ್ತೆವರೆಗೆ ಕ್ಯಾಂಡಲ್ ಹಿಡಿದು ಜಾಥಾ ನಡೆಸುವ ಮೂಲಕ ಜನ ಜಾಗೃತಿ ಮೂಡಿಸಿದರು. ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಗೆ ಸೂಕ್ತ ದಾಖಲೆ ನೀಡಿ ಮತದಾರರ ಪಟ್ಟಿಗೆ ಹೆಸರು ನೊಂದಾಯಿಸಲು ತಿಳಿಸಿದರು. ಅಲ್ಲದೆ ವಿವಿಧ ಪಂಚಾಯಿತಿ ಆವರಣದಲ್ಲಿ ಮೇಣದ ಬತ್ತಿ ದೀಪದ ಮೂಲಕ ಎಸ್ ಐಆರ್ ಎಂದು ಇಂಗ್ಲಿಷ್ ಅಕ್ಷರ ಆಕಾರ ಮೂಡಿಸಿದ್ದು ವಿಶೇಷವಾಗಿತ್ತು.
ತಾ.ಪಂ ಇಒ ವಸಂತಕುಮಾರ್ ಮಾತನಾಡಿ, ತಾಲೂಕಿನ ಅಮೃತೂರು ಹೋಬಳಿಯಲ್ಲಿ ಶೇ.96.27 ರಷ್ಟು, ಹುಲಿಯೂರುದುರ್ಗ ಹೋಬಳಿಯಲ್ಲಿ ಶೇ.93.09 ರಷ್ಟು, ಹುತ್ತರಿದುರ್ಗದಲ್ಲಿ ಶೇ.96.54 ರಷ್ಟು, ಕಸಬಾ ಹೋಬಳಿಯಲ್ಲಿ ಶೇ.97.29 ರಷ್ಟು, ಕೊತ್ತಗೆರೆ ಹೋಬಳಿಯಲ್ಲಿ ಶೇ.96.46 ರಷ್ಟು, ಕುಣಿಗಲ್ ಟೌನ್ ಶೇ.85.81 ರಷ್ಟು, ಯಡಿಯೂರು ಹೋಬಳಿಯಲ್ಲಿ ಶೇ.96.41 ರಷ್ಟು ಸೇರಿದಂತೆ ತಾಲೂಕಿನಲ್ಲಿ ಒಟ್ಟಾರೆಯಾಗಿ ಸರಾಸರಿ ಈವರೆಗೂ ಶೇ.94.39 ರಷ್ಟು ಎಸ್ ಐಆರ್ ಪ್ರಗತಿಯಾಗಿದೆ. ಶೇ.ನೂರರಷ್ಟು ಯಶಸ್ಸಿ ಗೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ತಾಲೂಕಿನ 1500 ಸ್ವ–ಸಹಾಯ ಸಂಘಗಳನ್ನು ಬಳಸಿಕೊಂಡು ಆ ಮೂಲಕ ಗ್ರಾಮೀಣ ಪ್ರದೇಶದಲ್ಲಿ ಎಸ್‌ಎಸ್‌ಆರ್ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಹೇಳಿದರು.
ಜಾಥಾದಲ್ಲಿ ತಾ.ಪಂ. ವ್ಯವಸ್ಥಾಪಕ ಉಮಾಮಹೇಶ್, ಪಂಚಾಯತ್ ರಾಜ್ ಸಹಾಯಕ ನಿರ್ದೇಶಕ ನರಸಿಂಹಮೂರ್ತಿ ಮತ್ತಿತರರು ಇದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


