ಕೊರಟಗೆರೆ: ತಾಲೂಕಿನ ಕೊರಟಗೆರೆ ಹೊಬಳಿಯ ವಡೇರಹಳ್ಳಿ ಗ್ರಾಮದಲ್ಲಿ ವಿಷಪೂರಿತ ಆಹಾರ ಸೇವನೆಯ ಪರಿಣಾಮ 75 ಕುರಿಗಳ ಪೈಕಿ 59 ಉತ್ತಮ ತಳಿಯ ಕುರಿಗಳು ಮೃತಪಟ್ಟಿಡುವ ಘಟನೆ ಬುಧವಾರ ನಡೆದಿದೆ.
ಘಟನೆಯಿಂದ ರೈತ ಶಶಿಕಿರಣ್ ಅವರಿಗೆ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ. ಸಾವಿಗೀಡಾದ ಕುರಿಗಳಲ್ಲಿ ನಾರಿ ಸುವರ್ಣ, ಡಾರ್ಪರ್, ರಾಮ್ ಬುಲೆಟ್ ಹಾಗೂ ಬನ್ನೂರು ತಳಿಯ ಕುರಿಗಳು ಸೇರಿವೆ. ಮಾಹಿತಿ ತಿಳಿದ ಕೂಡಲೇ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವೆಗಳ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಮೃತ ಕುರಿಗಳ ಮಾದರಿಗಳನ್ನು ಸಂಗ್ರಹಿಸಿ ಪ್ರಾಥಮಿಕ ವರದಿ ಸಿದ್ಧಪಡಿಸಿದರು.
ತುಮಕೂರು ಜಿಲ್ಲಾ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವೆಗಳ ಇಲಾಖೆಯ ಉಪನಿರ್ದೇಶಕ ಡಾ. ಎಚ್.ಎಂ. ಶಿವಪ್ರಸಾದ್ ಮಾತನಾಡಿ, ಪ್ರಾಥಮಿಕ ಪರಿಶೀಲನೆಯಲ್ಲಿ ಕುರಿಗಳು ಸೇವಿಸಿದ ಆಹಾರ ವಿಷಪೂರಿತವಾಗಿರುವುದು ಕಂಡುಬಂದಿದ್ದು, ಇದೇ ಕಾರಣದಿಂದ ಸಾವು ಸಂಭವಿಸಿರುವ ಸಾಧ್ಯತೆ ಇದೆ ಎಂದು ತಿಳಿಸಿದರು. ಸರ್ಕಾರದ ನಿಯಮಾನುಸಾರ ರೈತರಿಗೆ ದೊರೆಯಬೇಕಾದ ಪರಿಹಾರ ಮಂಜೂರು ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಇಂತಹ ಘಟನೆಗಳು ಮರುಕಳಿಸದಂತೆ ಜಿಲ್ಲೆಯಾದ್ಯಂತ ಪಶುಪಾಲಕರಿಗೆ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.
ರೈತ ಶಶಿಕಿರಣ್ ಮಾತನಾಡಿ, ಸುಮಾರು 20 ರಿಂದ 25 ಲಕ್ಷ ಬಂಡವಾಳ ಹೂಡಿ ಉತ್ತಮ ತಳಿಯ 75 ಕುರಿಗಳನ್ನು ಸಾಕಾಣಿಕೆ ಮಾಡುತ್ತಿದ್ದೆವು. ಕಳೆದ ಆರು-ಏಳು ವರ್ಷಗಳಿಂದ ಕುರಿ ಸಾಕಾಣಿಕೆ ನಡೆಸುತ್ತಿದ್ದರೂ ಇಂತಹ ದುರ್ಘಟನೆ ಇದೇ ಮೊದಲ ಬಾರಿಗೆ ಸಂಭವಿಸಿದೆ. 59 ಕುರಿಗಳ ಸಾವಿನಿಂದ ಕುಟುಂಬದ ಜೀವನೋಪಾಯಕ್ಕೆ ತೀವ್ರ ಹೊಡೆತ ಬಿದ್ದಿದ್ದು, ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದು ಮನವಿ ಮಾಡಿದರು.
ಅಧಿಕಾರಿಗಳು ಸ್ಥಳದಲ್ಲೇ ರೈತನಿಗೆ ಧೈರ್ಯ ತುಂಬಿ, ಪ್ರಕರಣದ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿ ಪರಿಹಾರ ಮಂಜೂರಾತಿಗೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


