ಚಿಕ್ಕನಾಯಕನಹಳ್ಳಿ: ತಾಲ್ಲೂಕಿನಲ್ಲಿರುವ ಬೋರನಕಣಿವೆ ಜಲಾಶಯದಲ್ಲಿ ಮೀನುಗಾರಿಕೆಗೆ ಉತ್ತೇಜನ ನೀಡುವುದು ಸೇರಿದಂತೆ ಮೀನುಗಾರಿಕೆ ಕುರಿತ ತರಬೇತಿ ಕೇಂದ್ರ ಹಾಗೂ ಮೀನುಮರಿ ಉತ್ಪಾದಕ ಘಟಕವನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಸಿ.ಬಿ.ಸುರೇಶ್ ಬಾಬು ತಿಳಿಸಿದರು. ಅವರು ಪಟ್ಟಣದ ಮೀನುಗಾರಿಕೆ ಇಲಾಖೆಗೆ ಭೇಟಿ ನೀಡಿ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದರು.
ಮೀನುಗಾರಿಕೆಯು ಒಂದು ಲಾಭದಾಯಕ ಕೆಲಸವಾಗಿದ್ದು, ತಾಲ್ಲೂಕಿನ ಜನರಿಗೆ ಮಾಹಿತಿ ನೀಡಿ, ತರಬೇತಿ ನೀಡುವಂತಹ ಕೆಲಸವಾಗಬೇಕು. ಹುಳಿಯಾರಿನಲ್ಲಿ ಬೀದಿ ಬದಿಯಲ್ಲಿ ಮೀನು ಮಾರಾಟ ಮಾಡಲಾಗುತ್ತಿದೆ. ಮೀನು ಮಾರಾಟಕ್ಕೆ ಒಂದು ಕೇಂದ್ರವನ್ನು ತೆರೆಯಲು ಕ್ರಮ ಕೈಗೊಳ್ಳಿ. ಬೋರನಕಣಿವೆ ಜಲಾಶಯದಲ್ಲಿ ಹೆಚ್ಚು ಮೀನುಗಾರಿಕೆ ನಡೆಸುವುದು, ಒಂದು ಪ್ರಯೋಗಾಲಯ ಸ್ಥಾಪನೆ, ತರಬೇತಿ ಕೇಂದ್ರ, ಮಾರಾಟ ಕೇಂದ್ರ, ಹೆಚ್ಚು ಲಾಭ ತರುವಂತಹ ಮೀನುಗಳ ಸಾಕಣೆಗೆ ಉತ್ತೇಜನ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮೀನುಗಾರಿಕೆ ಇಲಾಖೆ ಉಪ ನಿರ್ದೇಶಕ ನಂಜುಂಡಪ್ಪ ಮಾಹಿತಿ ನೀಡಿ, ತಾಲ್ಲೂಕಿನಲ್ಲಿ 2025-26ನೇ ಸಾಲಿನಲ್ಲಿ 39 ಕೆರೆಗಳಿಗೆ ಒಟ್ಟು 35 ಲಕ್ಷ ಮೀನು ಮರಿಗಳನ್ನು ಬಿತ್ತನೆ ಮಾಡಿದೆ. ಇದರೊಂದಿಗೆ 80 ಜನರಿಗೆ ಪರವಾನಗಿ ನೀಡಲಾಗಿದೆ. ರಾಜ್ಯ ವಲಯದಲ್ಲಿ ಒಂದು ಲಕ್ಷ ರೂ. ವೆಚ್ಚದಲ್ಲಿ 10 ಜನರಿಗೆ ಸಲಕರಣೆಗಳ ಕಿಟ್ ವಿತರಿಸಿದೆ. ಜಿಲ್ಲಾ ವಲಯದಲ್ಲಿ 2 ಲಕ್ಷ ರೂ. ವೆಚ್ಚದಲ್ಲಿ 20 ಜನರಿಗೆ ನೀಡಲಾಗಿದೆ. ಇದರೊಂದಿಗೆ 60 ಸಾವಿರ ರೂ. ವೆಚ್ಚದಲ್ಲಿ ಮತ್ಸ್ಯ ವಾಹಿನಿಯನ್ನು ಇಬ್ಬರಿಗೆ ನೀಡಲಾಗಿದೆ. ತಾಲ್ಲೂಕಿನಲ್ಲಿ 2860 ಟನ್ ಮೀನು ಉತ್ಪಾದನೆ ಮಾಡಲಾಗಿದೆ. ತಾಲ್ಲೂಕಿನಲ್ಲಿ ಒಟ್ಟು 28 ಲಕ್ಷ ಮೀನಿನ ಮರಿಗಳ ಬೇಡಿಕೆ ಇದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರಾದ ಮಂಜುಶ್ರೀ ಇದ್ದರು.
ಮೀನುಗಾರರಿಗೆ ಕೇವಲ 1 ಲಕ್ಷದ 20 ಸಾವಿರ ರೂ. ಗಳನ್ನು ನಿರ್ಮಾಣಕ್ಕೆ ನೀಡಲಾಗುತ್ತಿದೆ. ಆದರೆ ಇಷ್ಟು ಸಣ್ಣ ಮೊತ್ತದಲ್ಲಿ ಮನೆ ನಿರ್ಮಿಸಿಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ಗಣಿಬಾಧಿತ ಪ್ರದೇಶಾಭಿವೃದ್ಧಿ ಯೋಜನೆಯಡಿ ಈ ಭಾಗದಲ್ಲಿ ಮೀನುಗಾರ ಕುಟುಂಬದ ಮನೆ ಇಲ್ಲದವರನ್ನು ಗುರುತಿಸಿ ಪಟ್ಟಿ ನೀಡಿ, ಅವರಿಗೆ ಮನೆಗಳನ್ನು ಮಂಜೂರು ಮಾಡಿಸಲಾಗುವುದು.
— ಸಿ.ಬಿ.ಸುರೇಶ್ ಬಾಬು, ಶಾಸಕರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


