ತುಮಕೂರು / ಮಧುಗಿರಿ: ಬಾಡಿಗೆ ಕಾರು ಚಾಲಕನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದ ಅಪರಾಧಿಗೆ ಮಧುಗಿರಿಯ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ಹಾಗೂ 1 ಲಕ್ಷ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದೆ.
ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಗೋಪನಹಳ್ಳಿ ಮೂಲದ, ಪ್ರಸ್ತುತ ಆನೇಕಲ್ ತಾಲೂಕಿನ ಅತ್ತಿಬೆಲೆಯ ಅಣ್ಣಯ್ಯಪ್ಪ ಲೇಔಟ್ ನಲ್ಲಿ ವಾಸವಿದ್ದ ವೀರೇಂದ್ರ ಪಿ (24) ಶಿಕ್ಷೆಗೆ ಗುರಿಯಾದ ಅಪರಾಧಿ.
2021ರ ಜನವರಿ 29ರ ರಾತ್ರಿ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ನಿವಾಸಿ ನಿಸಾರ್ ಅಹಮದ್ (39) ಅವರು ತಮ್ಮ ಕಾರಿನಲ್ಲಿ ಪ್ರಯಾಣಿಕರಿಗಾಗಿ ಕಾಯುತ್ತಿದ್ದರು. ಅಪರಾಧಿ ವೀರೇಂದ್ರ, ಕಾರನ್ನು ಕಳವು ಮಾಡಿ, ನಂಬರ್ ಪ್ಲೇಟ್ ಬದಲಾಯಿಸಿ ಮಾರಿ ಬರುವ ಹಣದಲ್ಲಿ ತನ್ನ ಅಕ್ಕನ ಮದುವೆ ಮಾಡಲು ಸಂಚು ರೂಪಿಸಿದ್ದ.
ಅದರಂತೆ, ಪ್ರಯಾಣಿಕನ ಸೋಗಿನಲ್ಲಿ ಬಂದ ವೀರೇಂದ್ರ, ಬೆಂಗಳೂರಿನಿಂದ ತುಮಕೂರಿಗೆ ತಲುಪಿಸಲು ₹3,300 ಬಾಡಿಗೆ ಮಾತನಾಡಿ ಕಾರನ್ನೇರಿದ್ದ. ಜ.30ರ ಮಧ್ಯರಾತ್ರಿ ಸುಮಾರು 1.30 ಗಂಟೆಗೆ ಕೊರಟಗೆರೆಯ ತುಂಬಾಡಿ ಗ್ರಾಮದ ಬಸ್ ನಿಲ್ದಾಣದ ಬಳಿಯ ಆಂಜನೇಯ ಸ್ವಾಮಿ ದೇವಾಲಯದ ಹತ್ತಿರ ತಲುಪುತ್ತಿದ್ದಂತೆ, ಪೂರ್ವ ಯೋಜಿತ ಸಂಚಿನಂತೆ ಚಾಲಕ ನಿಸಾರ್ ಅಹಮದ್ ಅವರ ಎದೆಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದ. ನಂತರ ಸಾಕ್ಷ್ಯ ನಾಶಪಡಿಸಲು ಯತ್ನಿಸಿ ಸ್ಥಳದಿಂದ ಕಾಲ್ಕಿತ್ತಿದ್ದ. ಈ ಸಂಬಂಧ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಕೊರಟಗೆರೆ ಸಿಪಿಐ ಎಫ್.ಕೆ.ನದಾಫ್ ನೇತೃತ್ವದ ತನಿಖಾ ತಂಡವು ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಿ, ನ್ಯಾಯಾಲಯಕ್ಕೆ ದೋಷಾರೋಪಣ ಪತ್ರ ಸಲ್ಲಿಸಿತ್ತು.
ಮಧುಗಿರಿಯ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಸುದೀರ್ಘ ವಿಚಾರಣೆ ನಡೆದಿದ್ದು, ಮಾನ್ಯ ನ್ಯಾಯಾಧೀಶರಾದ ಸುಮಂಗಲಾ ಎಸ್. ಬಸವಣ್ಣನವರ್ ಅವರು ವೀರೇಂದ್ರನಿಗೆ ಜೀವಾವಧಿ ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ.
ಪರಿಹಾರ: ನ್ಯಾಯಾಲಯ ವಿಧಿಸಿರುವ ₹1 ಲಕ್ಷ ದಂಡದ ಹಣವನ್ನು ಮೃತ ನಿಸಾರ್ ಅಹಮದ್ ಅವರ ಪತ್ನಿ ಆಯಿಷಾ ಅವರಿಗೆ ಪರಿಹಾರವಾಗಿ ನೀಡುವಂತೆ ಆದೇಶಿಸಲಾಗಿದೆ.
ಸರ್ಕಾರಿ ಅಭಿಯೋಜಕ ನಿರಂಜನ್ ಮೂರ್ತಿ ಬಾಲವಾಡಿಮಠ ಅವರು ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು.
ಯಶಸ್ವಿ ತನಿಖೆ ನಡೆಸಿ ಅಪರಾಧಿಗೆ ಶಿಕ್ಷೆಯಾಗುವಂತೆ ಮಾಡಿದ ತನಿಖಾಧಿಕಾರಿ ಎಸ್.ಕೆ. ನದಾಫ್ ಅವರ ತಂಡವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್ ಅಭಿನಂದಿಸಿದ್ದಾರೆ.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC
