ತುಮಕೂರು/ಮಧುಗಿರಿ: ಕ್ಷೇತ್ರದಲ್ಲಿ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವ ಮಹತ್ವದ ಹೆಜ್ಜೆಯಾಗಿ ದೊಡ್ಡೇರಿ ಹೋಬಳಿಯ ಬಡವನಹಳ್ಳಿಯ ಸಮೀಪವಿರುವ ಮೊರಾರ್ಜಿ ವಸತಿ ಶಾಲೆಗೆ ಪ.ಪೂ ವಿಜ್ಞಾನ ವಿಭಾಗ ಮಂಜೂರಾಗಿದ್ದು, ಹತ್ತನೇ ತರಗತಿವರೆಗೆ ಮಾತ್ರ ಇದ್ದ ವಸತಿ ಶಾಲೆ ಇದೀಗ ವಿಜ್ಞಾನ ಪದವಿ ಪೂರ್ವ ಕಾಲೇಜಾಗಿ ಮೇಲ್ದರ್ಜೆಗೇರಿದೆ.
ಮಾಜಿ ಸಚಿವ ಹಾಗೂ ಶಾಸಕ ಕೆ.ಎನ್.ರಾಜಣ್ಣ ಹಾಗೂ ಎಂಎಲ್ಸಿ ಆರ್.ರಾಜೇಂದ್ರ ಅವರ ಪ್ರಯತ್ನದಿಂದ ತಾಲೂಕಿನ ದೊಡ್ಡೇರಿ ಹೋಬಳಿಯ ಬಡವನಹಳ್ಳಿ ಸುತ್ತಮುತ್ತಲ ಗ್ರಾಮೀಣ ವಿದ್ಯಾರ್ಥಿಗಳಿಗೆ ತಮ್ಮ ನೆಲೆ ಸಮೀಪವೇ ವಿಜ್ಞಾನ ನಿಕಾಯವನ್ನು ಅಭ್ಯಾಸಿಸುವ ಮಹತ್ವದ ಅವಕಾಶ ದೊರೆತಂತಾಗಿದೆ.
2013ರಲ್ಲೂ ಶಾಸಕರಾಗಿದ್ದ ಕೆ.ಎನ್.ರಾಜಣ್ಣ ಅವರ ಪ್ರಯತ್ನದಿಂದಲೇ ಮಂಜೂರಾಗಿದ್ದ 10 ಎಕರೆ ವ್ಯಾಪ್ತಿಯ ವಸತಿ ಶಾಲೆಯಲ್ಲಿ ಕೇವಲ ಪ್ರೌಢಶಾಲಾ ವಿಭಾಗ ಮಾತ್ರ ಈವರೆಗೆ ಕಾರ್ಯನಿರ್ವಹಿಸುತ್ತಿತ್ತು. ಪ್ರೌಢಶಾಲೆಗೆ ದೊಡ್ಡೇರಿ ಹೋಬಳಿ ಸೇರಿದಂತೆ ತಾಲೂಕಿನ ವಿವಿಧೆಡೆಯ ವಿದ್ಯಾರ್ಥಿಗಳು ಆಗಮಿಸಿ ಅಭ್ಯಾಸಮಾಡುವ ಅವಕಾಶ ದೊರೆತಿತ್ತು. ವಸತಿ ಶಾಲೆಗೆ ದೊರೆತ ಉತ್ತಮ ಸ್ಪಂದನೆ, ವಿದ್ಯಾರ್ಥಿಗಳು ಉತ್ತಮ ಫಲಿತಾಂಶವೂ ದಾಖಲಿಸಿದ್ದು, ಇಲ್ಲಿಯೇ ವಿಜ್ಞಾನ ಕಾಲೇಜು ಆರಂಭಿಸಿದರೆ ದೊಡ್ಡೇರಿ ಹೋಬಳಿಯಲ್ಲಿ ವಿಜ್ಞಾನ ವಿಭಾಗದ ಕೊರತೆಯು ನೀಗಿದಂತಾಗುತ್ತದೆ ಜೊತೆಗೆ ವಿದ್ಯಾರ್ಥಿಗಳು ವಿಜ್ಞಾನ ಪದವಿಗಾಗಿ ಪ್ರತಿನಿತ್ಯ ತಾಲೂಕು ಕೇಂದ್ರಕ್ಕೆ ಹೋಗಿಬರುವ ಪ್ರತಿನಿತ್ಯ ಪರದಾಡುವುದು ತಪ್ಪುತ್ತದೆಂಬುದು ಅನೇಕ ವಿದ್ಯಾರ್ಥಿಗಳು ಗ್ರಾಮೀಣರ ಬೇಡಿಕೆಯಾಗಿತ್ತು ಅನಿಸಿಕೆಯಾಗಿತ್ತು.
ಪ್ರಸ್ತುತ ಶಾಸಕರು, ಎಂಎಲ್ಸಿ ಅವರ ಶೈಕ್ಷಣಿಕ ಒತ್ತಾಸೆಯಿಂದಾಗಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವಿಜ್ಞಾನ ಕಾಲೇಜಿಗೆ ಅನುಮೋದನೆ ದೊರೆತಿದ್ದು, ಇದರಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಪ.ಪೂ ಹಂತಕ್ಕೂ ಸ್ಥಳೀಯವಾಗಿಯೇ ಗುಣಮಟ್ಟದ ಶಿಕ್ಷಣ ದೊರೆಯಲು ಸಾಧ್ಯವಾಗಿದೆ ಎಂದು ವಸತಿ ಶಾಲೆ ಪ್ರಾಂಶುಪಾಲ ರಮೇಶ್ ಹಾಗೂ ಸ್ಥಳೀಯ ನಿವಾಸಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಿಂದೆ ಕೆಎನ್‌ಆರ್ ಅವರು 2004ರಲ್ಲಿ ಬೆಳ್ಳಾವಿ ಕ್ಷೇತ್ರದ ಶಾಸಕರಾಗಿದ್ದ ಸಂದರ್ಭದಲ್ಲಿ ಬಡವನಹಳ್ಳಿಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಲಾ ಕಾಲೇಜು ಪ್ರಾರಂಭಿಸಿದ್ದನ್ನು ಸ್ಥಳೀಯರು ಸ್ಮರಿಸಿದ್ದಾರೆ.
ಶೈಕ್ಷಣಿಕ ಶಾಲೆ ಕಾಲೇಜು ತೆರೆಯುವುದು ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯ ಕಟ್ಟಿಕೊಟ್ಟಂತೆ. ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇರಿಸಿದ್ದು, ರಾಜ್ಯದ ವಸತಿ ಶಾಲೆಗಳ ಪೈಕಿ 31 ವಸತಿ ಶಾಲೆಗಳನ್ನು ಪದವಿ ಪೂರ್ವ ವಸತಿ ಕಾಲೇಜುಗಳಾಗಿ ಉನ್ನತೀಕರಿಸಲು ಅನುಮೋದನೆ ನೀಡಿದ್ದು, ಇದರಲ್ಲಿ ಮಧುಗಿರಿ ತಾಲೂಕಿನ ಬಡವನಹಳ್ಳಿ ಮೊರಾರ್ಜಿ ವಸತಿ ಶಾಲೆಯೂ ಸೇರಿದೆ. ಇದರಿಂದ ಗ್ರಾಮೀಣ ಬಡ ಹಿಂದುಳಿದ ಸಮುದಾಯದಿಂದ ಬಂದ ವಿದ್ಯಾರ್ಥಿಗಳು ಹತ್ತನೇ ತರಗತಿ ಬಳಿಕ ವಸತಿ ಶಾಲೆಯಲ್ಲೇ ಮುಂದುವರಿದು ಪದವಿ ಪೂರ್ವ ಶಿಕ್ಷಣವನ್ನು ಕಲಿಯಲು ಸಹಕಾರಿಯಾಗಿದೆ.
— ಕೆ.ಎನ್.ರಾಜಣ್ಣ, ಮಧುಗಿರಿ ಶಾಸಕರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC
