ಕನ್ನಡ ಚಿತ್ರರಂಗದ ಮೊದಲ ಬಿಗ್ ಬಜೆಟ್ ಹಾಗೂ ಪ್ಯಾನ್ ಇಂಡಿಯಾ ಸಿನಿಮಾ ಎಂದೇ ಪ್ರಸಿದ್ಧಿ ಪಡೆದ ‘ಶಾಂತಿ ಕ್ರಾಂತಿ’ ಚಿತ್ರವನ್ನು ಮತ್ತೆ ಚಿತ್ರಮಂದಿರಗಳಲ್ಲಿ ನೋಡಬೇಕು ಎಂಬುದು ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ಅಭಿಮಾನಿಗಳ ಆಸೆಯಾಗಿದೆ. ಇದಕ್ಕಾಗಿ ಸೋಶಿಯಲ್ ಮೀಡಿಯಾದಲ್ಲಿ ‘ಶಾಂತಿ ಕ್ರಾಂತಿ ರಿ-ರಿಲೀಸ್’ ಕ್ಯಾಂಪೇನ್ ಕೂಡ ಜೋರಾಗಿ ನಡೆಯುತ್ತಿದೆ. ಆದರೆ, ಈ ಕುರಿತು ರವಿಚಂದ್ರನ್ ಅವರ ಸಹೋದರ ಬಾಲಾಜಿ ಅವರು ಸ್ಪಷ್ಟನೆ ನೀಡಿದ್ದು, ಹರಡುತ್ತಿರುವ ವದಂತಿಗಳಿಗೆ ತೆರೆ ಎಳೆದಿದ್ದಾರೆ.
ಬಾಲಾಜಿ ಅವರ ಪ್ರಕಾರ, ಸದ್ಯಕ್ಕೆ ‘ಶಾಂತಿ ಕ್ರಾಂತಿ’ ಸಿನಿಮಾದ ಮೂಲ ನೆಗೆಟಿವ್ (Negative) ಲಭ್ಯವಿಲ್ಲ. ಹಳೆಯ ನೆಗೆಟಿವ್ ಮೆಲ್ಟ್ (ಕರಗಿ) ಆಗಿರುವ ಕಾರಣದಿಂದಾಗಿ, ಉತ್ತಮ ಕ್ವಾಲಿಟಿಯ ಬೇರೆ ಮೂಲಗಳನ್ನು (Source) ಹುಡುಕಲಾಗುತ್ತಿದೆ.
ಥಿಯೇಟರ್ ಗಳಲ್ಲಿ ಪ್ರದರ್ಶಿಸಲು ಸೂಕ್ತವಾದ ಕ್ವಾಲಿಟಿ ಪ್ರಿಂಟ್ ಸಿಕ್ಕ ನಂತರವಷ್ಟೇ ಕೆಲಸ ಆರಂಭಿಸಲಾಗುವುದು. ಸೂಕ್ತ ಮೂಲ ಸಿಕ್ಕರೂ ಸಹ, ಆಧುನಿಕ ತಂತ್ರಜ್ಞಾನ ಬಳಸಿ ಥಿಯೇಟರ್ ಗೆ ತರಲು ಕನಿಷ್ಠ 8 ತಿಂಗಳಿಂದ 1 ವರ್ಷ ಸಮಯ ಬೇಕಾಗುತ್ತದೆ.
ಅಂದಿನ ಕಾಲದಲ್ಲೇ ರವಿಚಂದ್ರನ್ ಅವರು ಈ ಸಿನಿಮಾವನ್ನು ಅತ್ಯುತ್ತಮ ತಾಂತ್ರಿಕ ಗುಣಮಟ್ಟದಲ್ಲಿ ನಿರ್ಮಿಸಿದ್ದರು. ಅದನ್ನು ಅದೇ ವೈಭವದಲ್ಲಿ ತರುವುದು ಸವಾಲಿನ ಕೆಲಸವಾಗಿದೆ.
ವದಂತಿ ಸುಳ್ಳು:
ಸೋಷಿಯಲ್ ಮೀಡಿಯಾದಲ್ಲಿ ಸೆಪ್ಟೆಂಬರ್ ಅಥವಾ ಅಕ್ಟೋಬರ್ ತಿಂಗಳಲ್ಲಿ ‘ಶಾಂತಿ ಕ್ರಾಂತಿ’ ಮರು ಬಿಡುಗಡೆಯಾಗಲಿದೆ ಎಂಬ ಸುದ್ದಿಗಳು ಹರಿದಾಡುತ್ತಿದ್ದವು. ಆದರೆ ಈ ಬಗ್ಗೆ ಮಾತನಾಡಿದ ಬಾಲಾಜಿ, “ತಕ್ಷಣಕ್ಕೆ ಸಿನಿಮಾ ರಿ–ರಿಲೀಸ್ ಮಾಡುವುದು ಕಷ್ಟ. ಸೆಪ್ಟೆಂಬರ್ ಅಥವಾ ಅಕ್ಟೋಬರ್‌ನಲ್ಲಿ ಬಿಡುಗಡೆಯಾಗುತ್ತದೆ ಎಂಬುದೆಲ್ಲ ಸುಳ್ಳು. ಏನೇ ನಿರ್ಧಾರ ಕೈಗೊಂಡರೂ ಅಭಿಮಾನಿಗಳಿಗೆ ಅಧಿಕೃತವಾಗಿ ತಿಳಿಸಿಯೇ ಮುಂದಿನ ಹೆಜ್ಜೆ ಇಡುತ್ತೇವೆ,” ಎಂದು ಹೇಳಿದ್ದಾರೆ.
ಬೆಟ್ಟದಷ್ಟು ಕನಸಿನ ಸಿನಿಮಾ
ಒಂದೇ ಸಮಯದಲ್ಲಿ ಕನ್ನಡ, ತೆಲುಗು, ತಮಿಳು ಹಾಗೂ ಹಿಂದಿ ಭಾಷೆಗಳಲ್ಲಿ ನಿರ್ಮಾಣಗೊಂಡು, ದಕ್ಷಿಣ ಭಾರತದ ದಿಗ್ಗಜ ನಟರು ನಟಿಸಿದ್ದ ಈ ಸಿನಿಮಾ ರವಿಚಂದ್ರನ್ ಅವರ ಕನಸಿನ ಯೋಜನೆಯಾಗಿತ್ತು. ಹಲವು ಕಷ್ಟ–ನಷ್ಟಗಳ ನಡುವೆಯೂ ತೆರೆಕಂಡಿದ್ದ ಈ ಐತಿಹಾಸಿಕ ಚಿತ್ರವನ್ನು ಮತ್ತೆ ಬೆಳ್ಳಿತೆರೆಯ ಮೇಲೆ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
