ಚಾಮರಾಜನಗರ: ಕಾವೇರಿ ವನ್ಯಜೀವಿಧಾಮದ ಶಾಗ್ಯ ಬೀಟ್ ನ ಹೊಳೆಮುರಿದಟ್ಟಿ ಅರಣ್ಯ (ತೋಮಿಯರ್‌ಪಾಳ್ಯ ಗ್ರಾಮದ ಬಳಿ) ಪ್ರದೇಶದಲ್ಲಿ ಇತ್ತೀಚೆಗೆ ನಡೆದ ಮೂವರ ಶೂಟೌಟ್ ಪ್ರಕರಣ ರಾಜ್ಯಾದ್ಯಂತ ತೀವ್ರ ಚರ್ಚೆಗೆ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ. ಸಾವನ್ನಪ್ಪಿದ ಮೂವರನ್ನು ‘ಹವ್ಯಾಸಿ ಬೇಟೆಗಾರರು’ ಎಂದು ಅರಣ್ಯ ಇಲಾಖೆ ಹೇಳುತ್ತಿದ್ದರೆ, ಮೃತರ ಕುಟುಂಬಸ್ಥರು ಹಾಗೂ ಸಂಬಂಧಿಕರು ಈ ವಾದವನ್ನು ಸಂಪೂರ್ಣವಾಗಿ ತಳ್ಳಿಹಾಕಿದ್ದು, ಅರಣ್ಯ ಸಿಬ್ಬಂದಿ ವಿರುದ್ಧ ತೀವ್ರ ಆರೋಪ ಮಾಡಿದ್ದಾರೆ.
ಮೃತ ಆಂಥೋನಿಯ ಪತ್ನಿ ಲೌರ್ಡೆ ಮೇರಿ ಮಾತನಾಡಿ, “ನನ್ನ ಪತಿ ತಮ್ಮ ಕೃಷಿ ಭೂಮಿಯಲ್ಲಿ ಬೆಳೆದಿದ್ದ ಮೆಕ್ಕೆಜೋಳವನ್ನು ಕಾಡುಪ್ರಾಣಿಗಳಿಂದ ಕಾಪಾಡಲು ಅಲ್ಲಿಯೇ ಮಲಗಿದ್ದರು. ಅವರನ್ನು ಕೃಷಿ ಭೂಮಿಯಿಂದ ಬಲವಂತವಾಗಿ ಕರೆದೊಯ್ದು ಗುಂಡು ಹಾರಿಸಲಾಗಿದೆ. ಅವರು ತಪ್ಪು ಮಾಡಿದ್ದರೂ ಕೊಲ್ಲಲು ಅಧಿಕಾರ ಕೊಟ್ಟವರು ಯಾರು?” ಎಂದು ಪ್ರಶ್ನಿಸಿದ್ದಾರೆ.
ಘಟನಾ ಸ್ಥಳದಿಂದ ತಪ್ಪಿಸಿಕೊಂಡಿರುವ ಮಹಿಮಾ ದಾಸ್ ನೀಡಿರುವ ಮಾಹಿತಿಯಂತೆ, ಅವರು ಬೇಟೆಗೆ ಹೋಗಿರಲಿಲ್ಲ; ಕಾಣೆಯಾಗಿದ್ದ ತಮ್ಮ ದನಗಳನ್ನು ಹುಡುಕಿಕೊಂಡು ಅರಣ್ಯ ಪ್ರದೇಶದತ್ತ ತೆರಳಿದ್ದರು. ಆದರೆ ಅರಣ್ಯ ಸಿಬ್ಬಂದಿ ಅವರನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿದ್ದಾರೆ.
ಮೃತರ ಕುತ್ತಿಗೆ, ಎದೆ ಹಾಗೂ ಹೊಟ್ಟೆಯ ಭಾಗಗಳಿಗೆ ಗುಂಡೇಟು ಬಿದ್ದಿದ್ದು, ಇದು ಚಕಮಕಿಯಲ್ಲಿ ನಡೆದ ಸಾವಲ್ಲ, ಬದಲಿಗೆ ಉದ್ದೇಶಪೂರ್ವಕವಾಗಿ ಗುರಿಹಿಡಿದು ನಡೆಸಿದ ಕೊಲೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ.
ಅರಣ್ಯ ಸಿಬ್ಬಂದಿಯ ಪ್ರಕಾರ, ಸ್ವಾತಂತ್ರ್ಯ ದಿನಾಚರಣೆ ರಜೆಯ ಸಂದರ್ಭವನ್ನು ದುರುಪಯೋಗಪಡಿಸಿಕೊಂಡು ಜಿಂಕೆ ಬೇಟೆಗೆ ತೆರಳಿದ್ದ ಗುಂಪನ್ನು ಶೇಖರ್ ನೇತೃತ್ವದ 7 ಜನರ ತಂಡ ತಡೆದಾಗ ಚಕಮಕಿ ನಡೆದಿದೆ. ಘಟನಾ ಸ್ಥಳದಿಂದ ಜಿಂಕೆ ಮಾಂಸವಿದ್ದ 4 ಚೀಲಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಇಲಾಖೆ ತಿಳಿಸಿದೆ.
ಗೃಹ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, “ಇದು ಎನ್‌ಕೌಂಟರ್ ಅಲ್ಲ, ಬೇಟೆ ವಿರೋಧಿ ಕಾರ್ಯಾಚರಣೆಯ ವೇಳೆ ನಡೆದ ಗುಂಡಿನ ಚಕಮಕಿ” ಎಂದು ಸ್ಪಷ್ಟಪಡಿಸಿದ್ದಾರೆ. ಪ್ರಸ್ತುತ ಈ ಶೂಟೌಟ್ ಪ್ರಕರಣದ ಕುರಿತು ಮ್ಯಾಜಿಸ್ಟ್ರೇಟ್ ನೇತೃತ್ವದಲ್ಲಿ ತನಿಖೆಗೆ ಆದೇಶಿಸಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
