ಕಲಬುರಗಿ: ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದು, ಸ್ವಾತಂತ್ರ್ಯ ಹೋರಾಟದಲ್ಲಿ ಆರ್ ಎಸ್ ಎಸ್ ನ ಪಾತ್ರವೇನು ಎಂದು ಪ್ರಶ್ನಿಸಿದ್ದಾರೆ.
ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ಪ್ರಾಣಾರ್ಪಣೆ ಮಾಡಿದ ತಮ್ಮ ಸದಸ್ಯರ ಹೆಸರುಗಳನ್ನು ಬಹಿರಂಗಪಡಿಸುವಂತೆ ಸವಾಲು ಹಾಕಿದ ಅವರು, “ಸ್ವಾತಂತ್ರ್ಯ ಹೋರಾಟದಲ್ಲಿ ಹುತಾತ್ಮರಾದ 500 ಕಾಂಗ್ರೆಸ್ ಸದಸ್ಯರ ಪಟ್ಟಿಯನ್ನು ನಾನು ನೀಡಬಲ್ಲೆ. ಆರ್‌ಎಸ್‌ಎಸ್ ಅಂತಹ ಕನಿಷ್ಠ 50 ಹೆಸರುಗಳ ಪಟ್ಟಿಯನ್ನಾದರೂ ನೀಡಲಿ” ಎಂದು ಆಗ್ರಹಿಸಿದರು.
ಆರ್ ಎಸ್ ಎಸ್ ನೋಂದಾಯಿತ ಸಂಘಟನೆಯಲ್ಲದಿರುವುದರಿಂದ ಅದನ್ನು ಸುಲಭವಾಗಿ ನಿಷೇಧಿಸಲು ಸಾಧ್ಯವಿಲ್ಲ ಎಂದು ಖರ್ಗೆ ಪ್ರತಿಪಾದಿಸಿದರು. “ಅವರನ್ನು ನಿಷೇಧಿಸಲು ಸಾಧ್ಯವಿಲ್ಲ ಎಂದು ಬಿ.ಎಲ್. ಸಂತೋಷ್ ಮತ್ತು ಮೋಹನ್ ಭಾಗವತ್ ಹೇಳಿರುವುದು ಸತ್ಯ. ಏಕೆಂದರೆ ಆ ಸಂಘಟನೆ ನೋಂದಣಿಯೇ ಆಗಿಲ್ಲ. ನಿಷೇಧಿಸಬೇಕಾದರೆ ಮೊದಲು ಸಂಘಟನೆ ನೋಂದಣಿಯಾಗಿರಬೇಕಲ್ಲವೇ?” ಎಂದು ಅವರು ಹೇಳಿದರು.
ಸಾಮಾಜಿಕ ಜಾಲತಾಣ ‘ಎಕ್ಸ್’ (X) ಮೂಲಕ ವಿಪಕ್ಷ ನಾಯಕ ಆರ್. ಅಶೋಕ್ ಅವರಿಗೆ ಸವಾಲೆಸೆದ ಪ್ರಿಯಾಂಕ್ ಖರ್ಗೆ, “ಆರ್ ಎಸ್ ಎಸ್ ಅಷ್ಟೊಂದು ಉತ್ತಮವಾಗಿದ್ದರೆ, ಬಿಜೆಪಿ ನಾಯಕರ ಮಕ್ಕಳು ಏಕೆ ಪೂರ್ಣಕಾಲಿಕ ಪ್ರಚಾರಕರಾಗಿ ಅಥವಾ ಸ್ವಯಂಸೇವಕರಾಗಿ ಕಾರ್ಯನಿರ್ವಹಿಸುತ್ತಿಲ್ಲ? ನಿಮ್ಮ ಮಕ್ಕಳು ಎಷ್ಟು ಬಾರಿ ಆರ್ ಎಸ್ ಎಸ್ ಶಾಖೆಗಳಿಗೆ ಭೇಟಿ ನೀಡಿದ್ದಾರೆ?” ಎಂದು ಪ್ರಶ್ನಿಸಿದ್ದಾರೆ.
ಸಾರ್ವಜನಿಕ ಸ್ಥಳಗಳಲ್ಲಿ ಆರ್ ಎಸ್ ಎಸ್ ಚಟುವಟಿಕೆಗಳನ್ನು ನಿಯಂತ್ರಿಸುವ ಕುರಿತು ರಾಜ್ಯ ಸರ್ಕಾರ ಪ್ರಸ್ತಾವಿತ ಕಾನೂನು ತರಲು ಚಿಂತಿಸುತ್ತಿರುವ ಬೆನ್ನಲ್ಲೇ ಈ ರಾಜಕೀಯ ವಾಗ್ದಾಳಿ ನಡೆದಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
