ತುರುವೇಕೆರೆ: ಎಂ.ಟಿ.ಕೃಷ್ಣಪ್ಪನವರೇ ಮುಖ್ಯಮಂತ್ರಿಗಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವ ನೀವು 20 ವರ್ಷ ತಾಲೂಕಿನಲ್ಲಿ ಶಾಸಕರಾಗಿದ್ದೀರಿ, ತಾಲೂಕಿಗೆ ನಿಮ್ಮ ಕೊಡುಗೆ ಏನು ಎಂದು ಕಾಂಗ್ರೆಸ್ ಮುಖಂಡ ವಸಂತ್ ಕುಮಾರ್ ಡಿ.ಕೆ.ಶಿ ಪರ ಘಾಟಿ ಬೀಸಿದರು. ಅವರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಡಿ.ಕೆ.ಶಿ ಅಭಿಮಾನಿ ಬಳಗದಿಂದ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಪದೇ ಪದೇ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆದಾಗಿನಿಂದಲೂ ವೈಯಕ್ತಿಕ ತೇಜೋವಧೆ ಮಾಡುತ್ತಲೇ ಬಂದಿದ್ದೀರಿ. ನೌಕರ ಸಂಘದ ಅಧ್ಯಕ್ಷರಾಗಿ ಬಂದಂತಹವರು ಬಹಳ ಪ್ರಜ್ಞಾವಂತ, ತಿಳಿವಳಿಕೆಯುಳ್ಳವರು, ಸಂವಿಧಾನ ಬಲ್ಲವರಾಗಿದ್ದು ಪ್ರಜಾಪ್ರಭುತ್ವಕ್ಕೆ ಗೌರವ ಕೊಡುವಂತಹ ವ್ಯಕ್ತಿ ನಮ್ಮ ತಾಲೂಕಿಗೆ ಶಾಸಕರಾಗಿ ಬಂದಿದ್ದಾರೆ ಎಂದು ಭಾವಸಿದ್ದೆವು. ಆದರೆ ನೀವು ಮಾಡುತ್ತಿರುವುದಾದರೂ ಏನು?
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವನೊಬ್ಬ ಅಸನುಭವಿ ರಾಜಕಾರಣಿ, ರಿಯಲ್ ಎಸ್ಟೇಟ್ನವರು ಮುಖ್ಯಮಂತ್ರಿಯಾದರೆ ಇದೇ ಗತಿ ಎಂದು ಲೇವಡಿ ಮಾಡುವ ಎಂ.ಟಿ.ಕೃಷ್ಣಪ್ಪನವರೇ ನೀವೇನಾಗಿ ಬಂದಿದ್ದೀರಿ? ವೃತ್ತಿ ಬಗ್ಗೆ ಪ್ರಶ್ನೆ ಮಾಡುವುದಾದರೆ ಅಬಕಾರಿಯೂ ಒಂದು ವೃತ್ತಿಯಲ್ಲವೇ? ನಿಮ್ಮ ಮಕ್ಕಳು ಮಾಡುತ್ತಿರುವುದಾದರೂ ಏನು? ಒಬ್ಬ ಮನುಷ್ಯ ಬದುಕಲಿಕ್ಕೆ ವೃತ್ತಿ ಅತ್ಯಾವಶ್ಯಕ.
ಹಾಗೆಯೆ ಸಿಎಂಗೆ ಆಗಲಿ, ಶಾಸಕರಾಗಲಿ ಅವರವರದೇ ಆದ ವೃತ್ತಿಯಿದೆ. ಆದರೆ ಆ ವೃತ್ತಿಯನ್ನುವಿಟ್ಟುಕೊಂಡು ಹೀಯಾಳಿಸುವುದು ನಿಮ್ಮ ಘನತೆಗೆ ತಕ್ಕದ್ದಲ್ಲ. ಡಿ.ಕೆ.ಶಿ ಅವರ ಹತ್ತಿರ ತಾವು ಹೋದಾಗಲೆಲ್ಲಾ ತಮ್ಮನ್ನು ಜೆಡಿಎಸ್ ಪಕ್ಷದ ದೃಷ್ಟಿಯಿಂದ ನೋಡದೆ ಗೌರವಯುತವಾಗಿ ನಡೆಸಿಕೊಂಡಿದ್ದಾರೆ. ಆದರೆ ನಿಮ್ಮದು ದ್ವಂದ್ವ ನಿಲುವು. ಮುಂದೊಂದು ಒಂದೊಂದು ಮಾತನಾಡುತ್ತೀರಿ.
ಡಿಕೆಶಿ ಕೆಳಮಟ್ಟದಿಂದ ಪಕ್ಷ ಕಟ್ಟಿ ಬೆಳೆದೋರು. ಅವರನ್ನು ಗುರುತಿಸಿ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಸಿ.ಎಂ ಸ್ಥಾನ ನೀಡಿದೆ. ಭೂತಕಾಲದ ಬಗ್ಗೆ ಯೋಚಿಸುವವರು. ಆದರೆ ನೀವು 20ವರ್ಷಗಳ ನಿಮ್ಮ ಸಾಧನೆ ಏನು? ನೀರಾವರಿ ಹೋರಾಟಗಾರ ಎಂದು ಬಿಂಬಿಸಿಕೊಳ್ಳುತ್ತಿರುವ ನೀವು ದುಬ್ಬೇಘಟ್ಟ ನೀರಾವರಿ ಫಲಪ್ರದವಾಗಿದೆಯೆ? ಬಿಗನೇನಹಳ್ಳಿ ಸುತ್ತ ಮುತ್ತ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕುಡಿಯಲು ಯೋಗ್ಯವಾಗಿದೆಯೆ?
ಅದೇ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ನೀರಗುಂದ ಕೆರೆಗೆ ನೀರು ಹರಿಸಿದ್ದು ಸುತ್ತಮುತ್ತಲ ಗ್ರಾಮಗಳಿಗೂ ಪ್ರಯೋಜನಕಾರಿಯಾಗಿದ್ದು ಇದು ನಿಮ್ಮ ಅವಧಿಯಲ್ಲಾಗಿದ್ದರೂ ಸಹ ಆ ಗ್ರಾಮದ ನಿವೃತ್ತ ಅಧಿಕಾರಿ ಆರ್.ಅಲ್ಲಪ್ಪನವರ ಹೋರಾಟದ ಫಲವೇ ಹೊರತು ಇದರಲ್ಲಿ ನಿಮ್ಮ ಪಾತ್ರವೇನೂ ಇಲ್ಲ ಎಂದರು.
ಮಾಜಿ ಪ್ರಧಾನಿ ಹೆಚ್.ಡಿ.ದೇವೇ ಗೌಡರ ಫೋಟೋ ಹಾಕಿಕೊಂಡು 4 ಬಾರಿ ಶಾಸಕರಾಗಿದ್ದೀರ ಹೊರತು ನಿಮ್ಮ ಸಾಧನೆ ಶೂನ್ಯ. ಹೇಮಾವತಿ ನೀರು ಹರಿಸುವ ವಿಚಾರ ಗೊತ್ತಿದ್ದರೂ ಸಹ ತಾವು ಪ್ರತಿಭಟನೆ ನಾಟಕವಾಡಿ ಜನರನ್ನು ಯಾಮಾರಿಸಿದ್ದು ಕ್ಷೇತ್ರದ ಜನತೆ ಅರಿಯದಷ್ಟು ದಡ್ಡರೇನಲ್ಲ. ಮಾತತ್ತಿದ್ದರೆ ಎಡಮುಟ್ಟೆ ಸೇವೆ ಎನ್ನುವ ನೀವುಗಳು, ಈ ಹಿಂದೆ ಅದೇ ಎಡಮುಟ್ಟೆ ನಿಮಗೆ ಮುಳುವಾಯಿತೆಂಬುದನ್ನು ಜನ ಅರ್ಥಮಾಡಿಕೊಂಡಿದ್ದಾರೆ. ನಾವೇನು ಒತ್ತಿ ಹೇಳಬೇಕಿಲ್ಲ.
— ವಸಂತ್ ಕುಮಾರ್, ಕಾಂಗ್ರೆಸ್ ಮುಖಂಡ
ಈ ಸಂದರ್ಭದಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಪ್ರಸನ್ನಕುಮಾರ್, ಮುಖಂಡರಾದ ಎನ್.ಆರ್.ಜಯರಾಮ್, ಸಿ.ಎಸ್.ಮೂರ್ತಿ, ನಂಜುಂಡಯ್ಯ, ಶಶಿಶೇಖರ್, ರಂಗಸ್ವಾಮಿ, ರುದ್ರೇಶ್, ಗವಿರಂಗಯ್ಯ, ರಂಗನಾಥ್, ಉದಯ್, ಅಪ್ಸರ್, ಶಿವರಾಜು, ಮಲ್ಲೂರು ತಿಮ್ಮೇಶ್, ಕಲ್ಲುಹಳ್ಳಿ ಬಸವರಾಜು, ಲಕ್ಷ್ಮೀದೇವಮ್ಮ ಸೇರಿದಂತೆ ಹಲವಾರು ಕಾಂಗ್ರೆಸ್ ಮುಖಂಡರು ಪಾಲ್ಗೊಂಡಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
