ಕೊರಟಗೆರೆ: ತಾಲ್ಲೂಕಿನ ಗೊರವನಹಳ್ಳಿ ಶ್ರೀ ಮಹಾಲಕ್ಷ್ಮಿ ಅಮ್ಮನವರ ದೇವಸ್ಥಾನದಲ್ಲಿ ವರಮಹಾಲಕ್ಷ್ಮಿ ಹಬ್ಬಕ್ಕೆ ದೂರದ ಊರುಗಳಿಂದ ಸಾವಿರಾರು ಭಕ್ತರು ಆಗಮಿಸಿ ಅಮ್ಮನವರ ದರ್ಶನ ಪಡೆದರು.
ಇತಿಹಾಸ ಪ್ರಸಿದ್ದ ಪುಣ್ಯ ಕ್ಷೇತ್ರವಾದ ಗೊರವನಹಳ್ಳಿಯಲ್ಲಿ ನೆಲೆಸಿರುವ ತಾಯಿ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಬೆಳಗ್ಗೆ ೬ ಗಂಟೆಯಿಂದಲೇ ದೇವಾಲಯಕ್ಕೆ ವಿಶೇಷ ಹೂವನ ಅಲಂಕಾರ, ತಾಯಿಗೆ ಅಲಂಕಾರ, ವಿಶೇಷ ಪೂಜೆ ಹಾಗೂ ಧಾರ್ಮಿಕ ಪೂಜಾ ಕೈಂಕಾರ್ಯಗಳು ನೆಡೆದವು. ತಾಯಿ ಮಹಾಲಕ್ಷ್ಮಿಗೆ ಪಂಚಾಮೃತ ಅಭಿಷೇಕ, ಕುಂಕುಮಾಚನೆ ವಿಶೇಷ ಪೂಜೆ, ಹೋಮ-ಹವನ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ದೇವಾಲಯದ ಆಡಳಿತ ಮಂಡಳಿ ವತಿಯಿಂದ ಏರ್ಪಡಿಸಲಾಗಿತ್ತು.
ಮಹಾಲಕ್ಷ್ಮಿ ಚಾರಿಟಬಲ್ ಟ್ರಸ್ಟ್ ನಾ ಅಧ್ಯಕ್ಷರಾದ ವಾಸುದೇವ್ ಮಾತನಾಡಿ, ವೈಭವದ ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆಯಲ್ಲಿ ಗೊರವನಹಳ್ಳಿ ಮಹಾಲಕ್ಷ್ಮಿ ಸನ್ನಿಧಾನಕ್ಕೆ ಸಾವಿರಾರು ಭಕ್ತರು ಆಗಮಿಸುವ ಅಂಗವಾಗಿ ಭಕ್ತರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಕುಡಿಯವ ನೀರು, ಪ್ರಸಾದ, ಪಾರ್ಕಿಂಗ್ ವ್ಯವಸ್ಥೆ, ಅಗತ್ಯ ವ್ಯವಸ್ಥೆಗಳನ್ನು ಆಂಬ್ಯುಲೆನ್ಸ್, ಪೊಲೀಸ್ ಅಧಿಕಾರಿಗಳಿಂದ ಬಂದೋಬಸ್ತ್ ಸೇರಿದಂತೆ ಭಕ್ತರಿಗೆ ಯಾವುದೇ ತೊಂದರೆ ಆಗದಂತೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ವಿಶೇಷ ಪೂಜೆ, ಅಭಿಷೇಕ, ಮಹಾಮಂಗಳಾರತಿ ಜೊತೆಗೆ ದಾಸೋಹದ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ನೂತನ ತೇರಿನಲ್ಲಿ ಬೆಳ್ಳಿ ಉತ್ಸವ ಮೂರ್ತಿಯ ಮೆರವಣಿಗೆ ಈ ಬಾರಿಯ ವಿಶೇಷ ಆಕರ್ಷಣೆಯಾಗಿದೆ. ತಾಯಿ ಮಹಾಲಕ್ಷ್ಮಿಯ ಕೃಪೆ ನಾಡಿನ ಸಮಸ್ತ ಭಕ್ತರ ಮೇಲಿರಲಿ” ಎಂದು ಹೇಳಿದರು.
ತಹಶೀಲ್ದಾರ್ ಕೆ. ಮಂಜುನಾಥ್ ಮಾತನಾಡಿ, ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿರುವುದರಿಂದ ಭಕ್ತರ ಸುರಕ್ಷತೆ ಹಾಗೂ ಮೂಲಭೂತ ಸೌಕರ್ಯಗಳಿಗೆ ಆದ್ಯತೆ ನೀಡಲಾಗಿದೆ. ಪೊಲೀಸ್, ಕಂದಾಯ ಇಲಾಖೆ ಗ್ರಾಪಂ ಹಾಗೂ ದೇವಾಲಯದ ಆಡಳಿತ ಮಂಡಳಿ ಸಮನ್ವಯದಿಂದ ಅಗತ್ಯ ವ್ಯವಸ್ಥೆ ಕೈಗೊಳ್ಳಲಾಗಿದೆ. ಭಕ್ತರು ಶಾಂತಿಯಿಂದ ತಾಯಿ ಮಹಾಲಕ್ಷ್ಮಿಯ ದರ್ಶನ ಪಡೆದು ಸಹಕರಿಸಬೇಕು ಎಂದು ಮನವಿ ಮಾಡಿದರು.
ನೂತನ ತೇರು ಪ್ರಮುಖ ಆಕರ್ಷಣೆ :
ಈ ಬಾರಿಯ ವರಮಹಾಲಕ್ಷ್ಮಿ ಹಬ್ಬದ ಪ್ರಮುಖ ಆಕರ್ಷಣೆಯಾಗಿದ್ದು, ಸುಮಾರು ೨೪ ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ನೂತನ ತೇರು. ತೇರಿನಲ್ಲಿ ಸುಮಾರು ೨೩ ಕೆ.ಜಿ. ತೂಕದ ಬೆಳ್ಳಿಯ ಮಹಾಲಕ್ಷ್ಮಿ ತಾಯಿಯ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ ವೈಭವದ ಮೆರವಣಿಗೆ ನಡೆಸಲಾಯಿತು. ಉತ್ಸವ ಮೂರ್ತಿಯ ಮೆರವಣಿಗೆ ಭಕ್ತರ ಕಣ್ಮನ ಸೆಳೆಯಿತು ಇದೆ ಸಂದರ್ಭದಲ್ಲಿ ಟ್ರಸ್ಟ್ ಆಡಳಿತ ಮಂಡಳಿ ಸೇರಿದಂತೆ ಇತರರು ಇದ್ದರು.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
