ಕುಣಿಗಲ್: ತಾಲೂಕಿನ ಮಾರ್ಕೋನಹಳ್ಳಿ, ಮಂಗಳ ಅಚ್ಚುಕಟ್ಟು ಪ್ರದೇಶದ ರಾಗಿ ಬೆಳೆಗೆ ನೀರು ಹರಿಸಬೇಕೆ ಅಥವಾ ಸಾಲು ಕೆರೆಗಳನ್ನು ತುಂಬಿಸಬೇಕೆ ಎಂಬುದರ ಬಗ್ಗೆ ಜಲಾಶಯದ ಒಳ ಹರಿವು ಹಾಗೂ ಮಳೆ ಪ್ರಮಾಣ ನೋಡಿಕೊಂಡು ತೀರ್ಮಾನ ಕೈಗೊಳ್ಳಲಾಗುವುದು ಎಂದು ಶಾಸಕ ಡಾ. ಎಚ್.ಡಿ. ರಂಗನಾಥ್ ತಿಳಿಸಿದರು.
ಅವರು ಭಾನುವಾರ ಮಾರ್ಕೋನಹಳ್ಳಿ ಪ್ರವಾಸಿ ಮಂದಿರ ಬಳಿ ಉಪವಿಭಾಗಾಧಿಕಾರಿ ನಾಹೀದಾ ಜಮ್ ಜಮ್ ಅವರ ಅಧ್ಯಕ್ಷತೆಯಲ್ಲಿ, ಶಾಸಕರ ನೇತೃತ್ವದಲ್ಲಿ ಮಾರ್ಕೋನಹಳ್ಳಿ ಹಾಗೂ ಮಂಗಳ ಜಲಾಶಯದ ಅಚ್ಚುಕಟ್ಟು ಪ್ರದೇಶದ ನೂರಾರು ರೈತರೊಂದಿಗೆ ನಡೆದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ರೈತರ ಸಲಹೆ ಪಡೆದು ಮಾತನಾಡಿದರು.
ಮಾರ್ಕೋನಹಳ್ಳಿ ಜಲಾಶಯವು 2.4 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. ಹಾಲಿ 1555 ಎಂಸಿಎಫ್‌ಟಿ ನೀರು ಲಭ್ಯ ಇದೆ. ಇನ್ನೂ 846 ಎಂಸಿಎಫ್‌ಟಿ ನೀರು ಜಲಾಶಯಕ್ಕೆ ತುಂಬಿಸಬೇಕಾಗಿದೆ. ಮಂಗಳ ಜಲಾಶಯ 530 ಎಂಸಿಎಫ್‌ಟಿ ನೀರಿನ ಸಾಮರ್ಥ್ಯ ಹೊಂದಿದೆ. ಜಲಾಶಯದಲ್ಲಿ 197 ಎಂಸಿಎಫ್‌ಟಿ ನೀರು ಇದ್ದು, ಜಲಾಶಯ ತುಂಬಲು 333 ಎಂಸಿಎಫ್‌ಟಿ ನೀರು ಅವಶ್ಯಕತೆ ಇದೆ ಎಂದರು.
ಕುಡಿಯುವ ನೀರಿಗೆ ಆದ್ಯತೆ : ರಾಜ್ಯದ ಬಹುತೇಕ ಜಿಲ್ಲಾ ಮತ್ತು ತಾಲೂಕುಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದೇ ಹಲವು ತಾಲೂಕುಗಳು ಬರ ದವಡೆಗೆ ಸಿಲುಕಿವೆ. ಹೀಗಾಗಿ ಬೆಳೆಯ ಬದಲಾಗಿ ಮೊದಲು ಜನ ಜಾನುವಾರುಗಳ ಕುಡಿಯುವ ನೀರಿಗೆ ಸರ್ಕಾರ ಮೊದಲ ಆದ್ಯತೆ ನೀಡಿದೆ. ನಂತರ ಜಲಾಶಯಗಳಲ್ಲಿನ ನೀರಿನ ಲಭ್ಯತೆ ನೋಡಿಕೊಂಡು ಬೆಳೆಗೆ ನೀರು ಹರಿಸುವ ಸಂಬಂಧ ತೀರ್ಮಾನ ಕೈಗೊಳ್ಳಲಿದೆ. ನಮ್ಮ ತಾಲೂಕು ಮಳೆಯಾಶ್ರಿತ ಪ್ರದೇಶವಾಗಿದ್ದು ಮಳೆ ನಂಬಿ ರೈತರು ಬೆಳೆ ಇಡುತ್ತಿದ್ದಾರೆ. ಮಳೆಯ ಪ್ರಮಾಣ ನೋಡಿಕೊಂಡು ಅಕ್ಟೋಬರ್ ತಿಂಗಳಲ್ಲಿ ರಾಗಿ ಬೆಳೆಗೆ ನೀರು ಕೊಡುವ ಸಂಬಂಧ ಅ.27 ರಂದು ಹಾಸನದಲ್ಲಿ ನಡೆಯುವ ಐಸಿಸಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.
ಸಭೆಯಲ್ಲಿ ಎಡೆಯೂರು ಹೇಮಾವತಿ ನಾಲಾ ವಲಯದ ಇಇ ಎಸ್.ಟಿ. ಶ್ರೀನಿವಾಸ್, ಇಇ ಜಿ.ಬಿ.ರುದ್ರೇಶ್, ಕೃಷಿ ಸಹಾಯಕ ನಿರ್ದೇಶಕ ರಂಗನಾಥ್ ಮತ್ತಿತರರು ಇದ್ದರು.
ನಿಮ್ಮ ನೀರು ನಿಮಗೆ ಕೊಡಲು ನಾವು ಯಾರು…?! : ಇದಕ್ಕೂ ಮುನ್ನ ಸಭೆಯಲ್ಲಿ ಭಾಗವಹಿಸಿದ ರೈತರು ರಾಗಿ ಬೆಳೆಗೆ ನೀರು ಕೊಡಿ ಎಂದು ನೀರಾವರಿ ಸಲಹಾ ಸಮಿತಿಗೆ ಮನವಿ ಮಾಡಿದರು. ರೈತರ ಆಶಯವೇ ನನ್ನ ಆಶಯವೂ ಆಗಿದೆ. ವರುಣ ದೇವ ಕೃಪೆ ತೋರಿ ಮಳೆಯಾಗಿ ಜಲಾಶಯಗಳು ತುಂಬಿದರೆ ರಾಗಿ ಬೆಳೆಗೂ, ಭತ್ತದ ಬೆಳೆಗೂ ನೀರು ಕೊಡಲಾಗುವುದು. ನೀರು ರೈತರ ಸ್ವತ್ತು. ನಿಮ್ಮ ನೀರು ನಿಮಗೆ ಕೊಡಲು ನಾವು ಯಾರು? ನಾವುಗಳು ನಿರ್ವಹಣೆ ಮಾಡುವವರು ಮಾತ್ರ ಎಂದು ಶಾಸಕರು ಹೇಳಿದರು.
ಜಲಾಶಯದಲ್ಲಿ ಈಗಿರುವ ನೀರು ರಾಗಿ ಬೆಳೆಗೆ ಕೊಟ್ಟರೆ ಜನ ಜಾನುವಾರುಗಳಿಗೆ ಕುಡಿಯಲು ನೀರು ಇಲ್ಲದಂತೆ ಆಗುತ್ತದೆ. ಈಗಾಗಲೇ ಅಮೃತೂರು ಹೋಬಳಿ ಸೇರಿದಂತೆ ತಾಲೂಕಿನಲ್ಲಿ ಅಂತರ್ಜಲ ಮಟ್ಟ ಕುಸಿದು ಕೊಳವೆ ಬಾವಿಗಳಲ್ಲಿ ನೀರಿನ ಪ್ರಮಾಣ ಇಳಿಕೆಯಾಗಿದೆ. ಕೆಲವು ಬೋರ್‌ವೆಲ್‌ಗಳಲ್ಲಿ ನೀರೇ ಇಲ್ಲದಂತಾಗಿದೆ. ಹಾಗಾಗಿ ನೀರಿನ ಬಗ್ಗೆ ಎಚ್ಚರ ವಹಿಸಬೇಕು. ಇಲ್ಲವಾದಲ್ಲಿ ಕುಡಿಯುವ ನೀರಿಗೆ ಮತ್ತು ಜಾನುವಾರುಗಳ ಮೇವಿಗೆ ಆಹಾಕಾರ ಉಂಟಾಗಲಿದೆ.
— ಡಾ. ಎಚ್.ಡಿ.ರಂಗನಾಥ್, ಶಾಸಕರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
