ತುಮಕೂರು: ನಗರಪಾಲಿಕೆ ವ್ಯಾಪ್ತಿಯ ಸ್ಲಂ ಜನರ ಕುಂದುಕೊರತೆ ಸಭೆಯನ್ನು ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಕರೆಯಲಾಯಿತು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ಶುಭಕಲ್ಯಾಣ್, ದಿನಾಂಕ:14-8-2026 ರಂದು ಸ್ಲಂ ಸಮಿತಿ 11 ಬೇಡಿಕೆಗಳ ಕುಂದು ಕೊರತೆಯನ್ನು ನನ್ನ ಗಮನಕ್ಕೆ ಸಲ್ಲಿಸಿದ್ದು ಅದರಂತೆ ಇದುವರೆಗೂ 36 ಸ್ಲಂಗಳಲ್ಲಿ ಹಕ್ಕುಪತ್ರ ಸಂಬಂಧ ಸಮೀಕ್ಷೆ ಕೈಗೊಂಡಿದ್ದು ಸ್ಥಳೀಯ ಸಂಸ್ಥೆಗಳ ಸ್ವಾಧೀನದಲ್ಲಿರುವ ಕೊಳಚೆ ಪ್ರದೇಶಗಳಲ್ಲಿ 1250 ಅರ್ಹ ಫಲಾನುಭವಿಗಳನ್ನು ಗುರುತಿಸಲಾಗಿದೆ, 140 ಫಲಾನುಭವಿಗಳಿಗೆ ಇದುವರೆಗೂ ಹಕ್ಕುಪತ್ರ ವಿತರಿಸಲಾಗಿದೆ. ಬಾಕಿ ಉಳಿದಿರುವ 110 ಫಲಾನುಭವಿಗಳಿಗೆ ಡಿಸೆಂಬರ್ ಮೊದಲ ವಾರದಲ್ಲಿ ಹಕ್ಕುಪತ್ರ ನೀಡಲು ಅಗತ್ಯವಾದ ಕ್ರಮವಹಿಸಲು ಉಪವಿಭಾಗಾಧಿಕಾರಿ ಮತ್ತು ತಹಶೀಲ್ದಾರ್ ಹಾಗೂ ಸ್ಲಂ ಬೋರ್ಡ್ ಇಂಜಿನಿಯರ್ ಕ್ರಮವಹಿಸಬೇಕು ಎಂದರು.
ಸಭೆಯಲ್ಲಿ ಸ್ಲಂ ಜನರಿಗೆ ಹೊನ್ನೇನಹಳ್ಳಿ ಸರ್ವೆ ನಂ, 44 ರಲ್ಲಿ ನಿರ್ಮಾಣವಾಗುತ್ತಿರುವ 192 ವಸತಿ ಸಮುಚ್ಚಯಗಳಿಗೆ ಪಿಎಂವಿಎ ವಸತಿ ಯೋಜನೆಯ ಗ್ರಿಡ್ ಲೈನ್ ನಂತೆ ಆಯ್ಕೆ ಮಾಡಬೇಕು. ಭಾರತಿ ನಗರ ಎಸ್.ಎನ್ ಪಾಳ್ಯ ಸ್ಲಂಗಳಿಗೆ ಮಳೆ ಹಾನಿಯಿಂದ ರಕ್ಷಿಸಲು ತಡೆಗೋಡೆ ನಿರ್ಮಿಸಲು ಪಾಲಿಕೆ ಮುಂದಾಗಬೇಕು. ಉಳಿದಂತೆ 35 ವಾರ್ಡ್ ಗಳಲ್ಲಿ ದಾಖಲಾತಿಗಳಿಲ್ಲದ ಏರಿಯಾಗಳನ್ನು ಕಂದಾಯ ಗ್ರಾಮದಲ್ಲಿ ಪ್ರಸ್ತಾವನೆ ಸಲ್ಲಿಸಲು ಪ್ರಧಾನಮಂತ್ರಿ ಆವಾಸ್ ಯೋಜನೆಯಲ್ಲಿ ಪೂರ್ಣಗೊಳ್ಳದ ಮನೆಗಳನ್ನು ಸೆಪ್ಟೆಂಬರ್ ಒಳಗಾಗಿ ಭಾರತ ಸರ್ಕಾರದ ಗಡುವಿನಂತೆ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಮತ್ತು ಅಧಿಕಾರಿಗಳಿಗೆ ಸೂಚಿಸಬೇಕೆಂದು, ತುಮಕೂರು ಕೊಳಚೆರೀ ಸಮಿತಿಯ ಅಧ್ಯಕ್ಷರಾದ ಎ.ನರಸಿಂಹಮೂರ್ತಿ ಸಭೆಯಲ್ಲಿ ಒತ್ತಾಯಿಸಿದರು.
ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಯೋಗಾನಂದ್, ಪಾಲಿಕೆ ಆಯುಕ್ತರಾದ ಶುಭ, ಉಪಕಂದಾಯ ಅಧಿಕಾರಿ ನಾಗರಾಜು, ಸಾರ್ವಜನಿಕ ಸಂಪರ್ಕ ಅಧಿಕಾರಿ ತಬ್ಬುಮ್, ಕೌನ್ಸಿಲ್ ಕಾರ್ಯದರ್ಶಿ ಸನ್ಯಾ, ಇಂಜಿನಿಯರ್ ವಿನಯ್, ತಹಶೀಲ್ದಾರ್ ಪಿ.ಎಸ್ ರಾಜೇಶ್ವರಿ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರಾದ ಸೋನಿಯ ವರ್ಣೇಕರ್, ಐಐ ಭಾನುಪ್ರತಾಪ್, ಜಗದೀಶ್, ರಕ್ಷಿತ್ ಉಪಸ್ಥಿತರಿದ್ದರು.
ಕೊಳಚೇರಿ ಸಮಿತಿಯ ಅರುಣ್, ಶಂಕ್ರಯ್ಯ, ಜಾಸೀರ್ ಖಾನ್, ಶಾರದಮ್ಮ, ಗುಲಾಬ್, ಕೆಂಪಣ್ಣ, ಕೃಷ್ಣಮೂರ್ತಿ, ಧನಂಜಯ್, ಕಣ್ಣನ್, ಕೃಷ್ಣ, ಮುಬಾರಕ್, ಮಂಜುನಾಥ್, ನಿವೇಶನ ರಹಿತರ ಹೋರಾಟ ಸಮಿತಿಯ ಪೂರ್ಣಿಮಾ, ಮಂಗಳಮ್ಮ, ಹನುಮಕ್ಕ, ಗಂಗಾ, ಸಲ್ಮಾ ಮುಂತಾದವರು ಪಾಲ್ಗೊಂಡಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
