ಬೆಂಗಳೂರು: ಸರ್ಕಾರಿ ನೌಕರರ ಬಹುದಿನಗಳ ಬೇಡಿಕೆಯಾಗಿದ್ದ ಹಾಗೂ ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷ ನೀಡಿದ್ದ ಭರವಸೆಯಂತೆ, ಹೊಸ ಪಿಂಚಣಿ ಯೋಜನೆಯನ್ನು (NPS) ರದ್ದುಗೊಳಿಸಿ ಶೀಘ್ರದಲ್ಲೇ ಹಳೆಯ ಪಿಂಚಣಿ ಯೋಜನೆಯನ್ನು (OPS) ಮರು ಅನುಷ್ಠಾನಗೊಳಿಸಲಾಗುವುದೆಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಉನ್ನತ ಶಿಕ್ಷಣ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ರಾಜ್ಯಮಟ್ಟದ ಶಿಕ್ಷಕರ ದಿನಾಚರಣೆ ಮತ್ತು ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೆಲವು ತಾಂತ್ರಿಕ ಹಾಗೂ ಅನಿವಾರ್ಯ ಕಾರಣಗಳಿಂದ ಹಳೆ ಪಿಂಚಣಿ ಯೋಜನೆಯನ್ನು ಇದುವರೆಗೆ ಮರುಜಾರಿಗೆ ತರಲು ಸಾಧ್ಯವಾಗಿರಲಿಲ್ಲ. ಆದರೆ, ಮುಖ್ಯಮಂತ್ರಿಗಳು ಹೊಸ ಪಿಂಚಣಿ ಯೋಜನೆಯನ್ನು ರದ್ದುಪಡಿಸುವ ಕುರಿತು ಒಲವು ಹೊಂದಿದ್ದು, ಸದ್ಯದಲ್ಲೇ ಹಳೆಯ ಪಿಂಚಣಿ ಯೋಜನೆಯನ್ನು ಮರುಜಾರಿ ಮಾಡಲು ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದೆ ಎಂದು ಡಿಸಿಎಂ ತಿಳಿಸಿದರು.
ಶಿಕ್ಷಕರಿಗೆ ‘Tr’ ಗೌರವನಾಮ:
ಇದೇ ವೇಳೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವೈದ್ಯರು ತಮ್ಮ ಹೆಸರಿನ ಮುಂದೆ ‘Dr’ ಹಾಗೂ ಎಂಜಿನಿಯರ್ಗಳು ‘Er’ ಎಂದು ಬಳಸುವಂತೆ, ಇನ್ನುಮುಂದೆ ರಾಜ್ಯದ ಪ್ರತಿಯೊಬ್ಬ ಶಿಕ್ಷಕರು ತಮ್ಮ ಹೆಸರಿನ ಮುಂದೆ ಗೌರವಸೂಚಕವಾಗಿ ‘Tr’ (Teacher) ಎಂದು ಬಳಸಿಕೊಳ್ಳಬಹುದು ಎಂದು ಸರ್ಕಾರದ ಮಹತ್ವದ ನಿರ್ಧಾರವನ್ನು ಪ್ರಕಟಿಸಿದರು. ಮುಖ್ಯಮಂತ್ರಿಗಳ ನಿರ್ದೇಶನದಂತೆ ಶಿಕ್ಷಣ ಸಚಿವರು ಈಗಾಗಲೇ ಒಂದೇ ದಿನದಲ್ಲಿ ಈ ಕುರಿತು ಸರ್ಕಾರಿ ಆದೇಶ ಹೊರಡಿಸಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
