ಕೆ.ಆರ್. ಪೇಟೆ: ಭಾರತದ ಸಂವಿಧಾನ ಶಿಲ್ಪಿ, ಭಾರತರತ್ನ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಸಂವಿಧಾನದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಹೇಳಿಕೆಗಳನ್ನು ಹರಿಬಿಟ್ಟಿದ್ದ ಆರೋಪದ ಮೇರೆಗೆ ವೇದಮೂರ್ತಿ ಎಂಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಈ ಆಕ್ಷೇಪಾರ್ಹ ಪೋಸ್ಟ್ ಗಳು ಹಾಗೂ ವಿಡಿಯೋಗಳು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದವು. ಸಂವಿಧಾನ ಮತ್ತು ಡಾ. ಅಂಬೇಡ್ಕರ್ ಅವರಂತಹ ಮಹಾನ್ ನಾಯಕರ ಬಗ್ಗೆ ಕೀಳು ಮಟ್ಟದ ಟೀಕೆ ಮಾಡಿರುವುದು ಸಮಾಜದಲ್ಲಿ ಅಶಾಂತಿ ಹಾಗೂ ಅಸಮಾಧಾನ ಮೂಡಿಸಿತ್ತು.
ಘಟನೆಯ ಗಂಭೀರತೆಯನ್ನು ಪರಿಗಣಿಸಿರುವ ಪೊಲೀಸರು, ತಕ್ಷಣವೇ ಪ್ರಕರಣ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ್ದಾರೆ. ಬಂಧಿತ ಆರೋಪಿ ವೇದಮೂರ್ತಿಯನ್ನು ವಶಕ್ಕೆ ಪಡೆದು, ಆಕ್ಷೇಪಾರ್ಹ ಮಾಹಿತಿ ಹರಡಿರುವ ಹಿನ್ನೆಲೆ ಕುರಿತು ತೀವ್ರ ವಿಚಾರಣೆ ನಡೆಸಲಾಗುತ್ತಿದೆ.
ದೇಶದ ಪ್ರಜಾಪ್ರಭುತ್ವದ ಮೂಲ ಆಧಾರವೇ ಸಂವಿಧಾನವಾಗಿದ್ದು, ಅದರ ಗೌರವವನ್ನು ಕಾಪಾಡುವುದು ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯವಾಗಿದೆ. ಸಾಮಾಜಿಕ ಜಾಲತಾಣಗಳನ್ನು ಬಳಸುವಾಗ ಯಾವುದೇ ಸಮುದಾಯ ಅಥವಾ ಮಹನೀಯರ ಬಗ್ಗೆ ಪ್ರಚೋದನಕಾರಿ ಹಾಗೂ ಅವಹೇಳನಕಾರಿ ವಿಷಯಗಳನ್ನು ಹಂಚಿಕೊಳ್ಳದೆ ಪ್ರತಿಯೊಬ್ಬರೂ ಜವಾಬ್ದಾರಿಯಿಂದ ವರ್ತಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ತಪ್ಪಿತಸ್ಥರ ವಿರುದ್ಧ ಪೊಲೀಸ್ ಹಾಗೂ ನ್ಯಾಯಾಂಗ ಇಲಾಖೆಯು ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ನಾಗರಿಕರು ಹಾಗೂ ವಿವಿಧ ಸಂಘಟನೆಗಳು ಬಲವಾಗಿ ಆಗ್ರಹಿಸಿವೆ.
ವರದಿ: ಮಂಜು ಶ್ರವಣೂರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
