- ವಿ.ಎಂ.ಎಸ್. ಗೋಪಿ
ಭಾರತೀಯರ ಸಾಂಸ್ಕೃತಿಕ ಪರಂಪರೆಯಲ್ಲಿ ಹಬ್ಬಗಳಿಗೆ ವಿಶೇಷ ಸ್ಥಾನವಿದೆ. ಅದರಲ್ಲೂ ಗೌರಿ-ಗಣೇಶ ಹಬ್ಬ ಅಂದರೆ ಮನೆ-ಮನಗಳಲ್ಲಿ ಎಲ್ಲೆಡೆ ಸಂಭ್ರಮದ ವಾತಾವರಣ. ನಗರಗಳಿಂದ ಹಿಡಿದು ಹಳ್ಳಿಗಳ ಪ್ರತಿಯೊಂದು ಬೀದಿಯಲ್ಲೂ ವಿಘ್ನೇಶ್ವರನ ಆಗಮನದ ಸಡಗರ ಕಣ್ಣಿಗೆ ಅಚ್ಚುಮೆಚ್ಚು. ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ಥಿಯಂದು ಆಚರಿಸಲ್ಪಡುವ ಈ ಹಬ್ಬವನ್ನು ವಿಘ್ನರಾಜನ ಹುಟ್ಟುಹಬ್ಬ ಎಂದೇ ಭಾವಿಸಲಾಗುತ್ತದೆ. ಜಾತಿ, ಮತ ಭೇದವಿಲ್ಲದೆ ಎಲ್ಲರೂ ಒಟ್ಟಾಗಿ ಆಚರಿಸುವ ಈ ಹಬ್ಬಕ್ಕೆ ದೇಶಾದ್ಯಂತ ದೊಡ್ಡ ವೈಭವವಿದೆ.
ಹಿಂದೂ ಸಂಪ್ರದಾಯದಂತೆ ಯಾವುದೇ ಶುಭ ಸಮಾರಂಭ ಆರಂಭವಾಗುವುದೇ ಗಣೇಶನ ಪೂಜೆಯಿಂದ. ನಾವು ಮಾಡುವಂತಹ ಯಾವುದೇ ಕೆಲಸವು ತೊಂದರೆಯಿಲ್ಲದೆ ಶೀಘ್ರವಾಗಿ ಪೂರ್ಣಗೊಳ್ಳಲಿ ಎಂದು ವಿನಾಯಕನನ್ನು ಮೊದಲು ಸ್ಮರಿಸಲಾಗುತ್ತದೆ. ಕರ್ನಾಟಕ, ಮಹಾರಾಷ್ಟ್ರ, ಗೋವಾ ಮತ್ತು ತಮಿಳುನಾಡು ಸೇರಿದಂತೆ ಹಲವು ರಾಜ್ಯಗಳಲ್ಲಿ ಗಣೇಶನ ಮೂರ್ತಿಯನ್ನು ಮನೆಗೆ ತಂದು ಭಕ್ತಿಯಿಂದ ಪೂಜಿಸಲಾಗುತ್ತದೆ. ಭಕ್ತರ ನಂಬಿಕೆ ಹಾಗೂ ಸಂಪ್ರದಾಯಕ್ಕೆ ತಕ್ಕಂತೆ ಒಂದು ದಿನ, ಮೂರು, ಐದು, ಏಳು, ಹನ್ನೊಂದು ಹಾಗೂ ಇಪ್ಪತ್ತೊಂದು ದಿನಗಳವರೆಗೆ ಗಣೇಶನನ್ನು ಕೂರಿಸಿ ಆರಾಧಿಸಿ ನಂತರ ವಿಸರ್ಜನೆ ಮಾಡಲಾಗುತ್ತದೆ. ಗಣೇಶನನ್ನು ಏಕದಂತ, ಮಂಗಳಮೂರ್ತಿ, ವಿಘ್ನೇಶ್ವರ, ಲಂಬೋದರ, ವಿನಾಯಕ, ಗಜಮುಖ, ಮೋಷಿಕವಾಹಕ, ಮೋದಕ ಪ್ರಿಯ, ಪಿಲೈಯಾರ್ ಹೀಗೆ ನಾನಾ ಹೆಸರುಗಳಿಂದ ಭಕ್ತರು ಕರೆಯುತ್ತಾರೆ. ವಿಘ್ನಗಳನ್ನು ವಿನಾಶ ಮಾಡುವುದರಿಂದಲೇ ಆತನನ್ನು ವಿಘ್ನೇಶ್ವರ ಎಂದು ಕರೆಯಲಾಗುತ್ತದೆ.
ಹಬ್ಬದ ಆಚರಣೆಯ ಜೊತೆಗೆ ನಮ್ಮ ಸುತ್ತಮುತ್ತಲಿನ ಪರಿಸರವನ್ನು ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಗಣೇಶ ಮೂರ್ತಿಗಳನ್ನು ವಿಸರ್ಜಿಸುವ ಮುನ್ನ ಹೂವು, ವಸ್ತ್ರ ಹಾಗೂ ಇತರ ಅಲಂಕಾರಿಕ ವಸ್ತುಗಳನ್ನು ತೆಗೆಯಬೇಕು. ಪ್ಲಾಸ್ಟಿಕ್ ಅಥವಾ ಕಾಗದದಿಂದ ಮಾಡಿದ ವಸ್ತುಗಳನ್ನು ನೀರಿನಲ್ಲಿ ವಿಸರ್ಜಿಸದೆ ಕಸ ವಿಲೇವಾರಿ ಸ್ಥಳಗಳಿಗೆ ನೀಡಬೇಕು. ಕೆರೆ ಮತ್ತು ಸಮುದ್ರದ ನೀರಿನ ಮಾಲಿನ್ಯವನ್ನು ತಡೆಯಲು ಕೇವಲ ಮಣ್ಣಿನಿಂದ ಮಾಡಿದ ಗಣೇಶ ವಿಗ್ರಹಗಳನ್ನು ಮಾತ್ರ ಜಲದಲ್ಲಿ ವಿಸರ್ಜಿಸಬೇಕು. ಈ ಬಾರಿಯ ಗೌರಿ-ಗಣೇಶ ಹಬ್ಬವನ್ನು ನಾವೆಲ್ಲರೂ ಪರಿಸರ ಸ್ನೇಹಿಯಾಗಿ ಆಚರಿಸೋಣ. ಮಣ್ಣಿನ ಗಣಪತಿಯನ್ನು ನಮ್ಮ ಮನೆಗಳಲ್ಲಿ ಪ್ರತಿಷ್ಠಾಪಿಸಿ, ಪ್ರಕೃತಿಯನ್ನು ರಕ್ಷಿಸುವ ಮೂಲಕ ಹಬ್ಬದ ನಿಜವಾದ ಅರ್ಥವನ್ನು ಸಾರೋಣ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
