ಕಲಬುರಗಿ: ನಗರದ ಹೀರಾಪುರ ರಸ್ತೆಯ ಫ್ಲೈ ಓವರ್ ಮೇಲೆ ಗಣೇಶ ಮೂರ್ತಿ ತರಲು ತೆರಳುತ್ತಿದ್ದಾಗ ಸಂಭವಿಸಿದ ಭೀಕರ ಬೈಕ್ ಅಪಘಾತದಲ್ಲಿ ಯುವಕನೊಬ್ಬ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೊಬ್ಬನ ಸ್ಥಿತಿ ಚಿಂತಾಜನಕವಾಗಿದೆ.
ಕೊಟನೂರು ಬಡಾವಣೆಯ ಪ್ರಶಾಂತ್ ಬಿರಾದರ್ (23) ಮೃತ ದುರ್ದೈವಿ. ಸ್ನೇಹಿತರೊಂದಿಗೆ ಬೈಕ್ ನಲ್ಲಿ ಗಣೇಶ ಮೂರ್ತಿ ತರಲು ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.
ಕಳೆದ ರಾತ್ರಿ ಪ್ರಶಾಂತ್ ಹಾಗೂ ಅವರ ಸ್ನೇಹಿತರು ಗಣೇಶನ ಮೂರ್ತಿಯನ್ನು ತರಲು ಬೈಕ್ ನಲ್ಲಿ ಹೊರಟಿದ್ದರು. ಈ ವೇಳೆ ಮತ್ತೊಂದು ಬೈಕ್ ಡಿಕ್ಕಿ ಹೊಡೆದ ಪರಿಣಾಮ (ಪಕ್ಕದ ಬೈಕ್ ಟಚ್ ಆಗಿ) ಸವಾರರು ಕೆಳಗೆ ಬಿದ್ದಿದ್ದಾರೆ. ಅಪಘಾತದ ರಭಸಕ್ಕೆ ಇಬ್ಬರು ಸವಾರರ ತಲೆಗೆ ತೀವ್ರ ಸ್ವರೂಪದ ಗಾಯಗಳಾಗಿವೆ.
ಗಂಭೀರವಾಗಿ ಗಾಯಗೊಂಡಿದ್ದ ಪ್ರಶಾಂತ್ ಬಿರಾದರ್ ಅವರನ್ನು ತಕ್ಷಣವೇ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯೊಪ್ಪಿದ್ದಾರೆ. ಈ ಘಟನೆಯಲ್ಲಿ ಗಾಯಗೊಂಡಿರುವ ಮತ್ತೊಬ್ಬ ಯುವಕನ ಸ್ಥಿತಿ ಅತೀವ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ದುರ್ಘಟನಾ ಸಂಬಂಧ ಕಲಬುರಗಿ ಸಂಚಾರಿ ಪೊಲೀಸ್ ಠಾಣೆ–1ರಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ. ಗಣೇಶ ಚತುರ್ಥಿಯ ಸಂಭ್ರಮದ ಸಡಗರದ ನಡುವೆ ಸಂಭವಿಸಿದ ಈ ದುರ್ಮರಣದಿಂದ ಮೃತನ ಕುಟುಂಬದಲ್ಲಿ ಮತ್ತು ಸ್ಥಳೀಯರಲ್ಲಿ ಶೋಕಮೂಡಿಸಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
