ಬೀದರ್: ಜಿಲ್ಲೆಯ ಭಾಲ್ಕಿ ತಾಲೂಕಿನಲ್ಲಿ ಮುಂಗಾರು ಮಳೆಯ ಅನಿಶ್ಚಿತತೆ ಹಾಗೂ ತೀವ್ರ ಮಳೆ ಕೊರತೆಯಿಂದ ಕಂಗಾಲಾದ ರೈತರೊಬ್ಬರು ಮೂರು ಎಕರೆ ಜಮೀನಿನಲ್ಲಿ ಬೆಳೆದಿದ್ದ ಸೋಯಾಬೀನ್ ಬೆಳೆಯನ್ನು ಟ್ರ್ಯಾಕ್ಟರ್ ಹರಿಸಿ ನಾಶಪಡಿಸಿರುವ ಘಟನೆ ನಡೆದಿದೆ.
ಭಾಲ್ಕಿ ತಾಲೂಕಿನ ಕಾಸರತೂಗಾಂವ್ ಗ್ರಾಮದ ರೈತ ದಿಗಂಬರ ಬಿರಾದರ್ ಅವರು ತಮ್ಮ ಸ್ವಂತ 5 ಎಕರೆ ಜಮೀನಿನಲ್ಲಿ ಸೋಯಾಬೀನ್, ಹೆಸರು ಮತ್ತು ಉದ್ದು ಬಿತ್ತನೆ ಮಾಡಿದ್ದರು. ಆದರೆ ಮುಂಗಾರು ಹಂಗಾಮಿನಲ್ಲಿ ಸರಿಯಾದ ಸಮಯದಲ್ಲಿ ಮಳೆಯಾಗದೆ ಬೆಳೆ ಸಂಪೂರ್ಣವಾಗಿ ಬಾಡತೊಡಗಿತು. ಬೆಳೆ ಉಳಿಸಿಕೊಳ್ಳಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಬೇಸತ್ತು ಮೂರು ಎಕರೆ ಪ್ರದೇಶದಲ್ಲಿದ್ದ ಸೋಯಾಬೀನ್ ಬೆಳೆಯನ್ನು ಟ್ರ್ಯಾಕ್ಟರ್ ಮೂಲಕ ನಾಶಪಡಿಸಿದ್ದಾರೆ.
ಈ ಕುರಿತು ಮಾತನಾಡಿರುವ ರೈತ ದಿಗಂಬರ ಬಿರಾದರ್, ಬೀಜ, ಗೊಬ್ಬರ, ಕೀಟನಾಶಕ ಹಾಗೂ ಕೂಲಿ ಸೇರಿ ಇಲ್ಲಿಯವರೆಗೆ 50 ರಿಂದ 60 ಸಾವಿರ ರೂಪಾಯಿ ಖರ್ಚು ಮಾಡಲಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ. ಕಳೆದ ವರ್ಷ ಅತಿವೃಷ್ಟಿಯಿಂದ ಮಾಂಜ್ರಾ ನದಿ ಪ್ರವಾಹದಿಂದ ಬೆಳೆ ನಾಶವಾಗಿತ್ತು. ಈ ಬಾರಿ ಅನಾವೃಷ್ಟಿಯಿಂದ ಬೆಳೆ ಒಣಗಿ ಹೋಗಿದ್ದು, ಸಾಲಶೂಲ ಮಾಡಿ ಬಿತ್ತನೆ ಮಾಡಿದ್ದರೂ ಮಳೆಯಿಲ್ಲದೆ ಫಸಲು ಕೈಸೇರಿಲ್ಲ. ಸಾಲಗಾರರ ಕಾಟದಿಂದ ಬೇಸತ್ತು ಈ ಕಠಿಣ ನಿರ್ಧಾರ ಕೈಗೊಂಡಿರುವುದಾಗಿ ಅವರು ತಿಳಿಸಿದ್ದು, ಇನ್ನೆರಡು ಎಕರೆಯಲ್ಲಿ ಇರುವ ಸೋಯಾ ಬೆಳೆಯನ್ನೂ ನಾಶಪಡಿಸುವುದಾಗಿ ಹೇಳಿದ್ದಾರೆ.
ಮಳೆ ಕೊರತೆ ಹಾಗೂ ಬೆಳೆ ನಷ್ಟದಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ರೈತರ ನೆರವಿಗೆ ಸರ್ಕಾರ ತಕ್ಷಣ ಧಾವಿಸಿ ಪರಿಹಾರ ಒದಗಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ. ರೈತರು ಬೆಳೆದ ಬೆಳೆಗೆ ಸೂಕ್ತ ಮಾರುಕಟ್ಟೆ ಬೆಂಬಲ ಬೆಲೆ ದೊರಕಿಸಿಕೊಡಬೇಕು. ಕೃಷಿಗೆ ಹಾಕಿದ ಬಂಡವಾಳವೇ ಮರಳಿ ಬಾರದಿದ್ದರೆ ರೈತರು ಜೀವನ ನಡೆಸುವುದು ಹೇಗೆ ಎಂದು ಅವರು ಪ್ರಶ್ನಿಸಿದ್ದಾರೆ.
ವರದಿ: ಅರವಿಂದ ಮಲ್ಲೀಗೆ, ಬೀದರ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
