ಚಿಕ್ಕನಾಯಕನಹಳ್ಳಿ: ವಿದ್ಯಾರ್ಥಿಗಳು ಪದವಿ ಹಂತದ ಶಿಕ್ಷಣವನ್ನು ಅತಿ ಶಿಸ್ತು ಹಾಗೂ ಅರ್ಥಪೂರ್ಣವಾಗಿ ಕಲಿತರೆ, ಅದು ಅವರ ಉಜ್ವಲ ಭವಿಷ್ಯಕ್ಕೆ ದಾರಿದೀಪವಾಗುತ್ತದೆ ಎಂದು ಮಾಜಿ ಸಚಿವ ಜೆ.ಸಿ. ಮಾಧುಸ್ವಾಮಿ ಕರೆ ನೀಡಿದ್ದಾರೆ. ಪಟ್ಟಣದ ನವೋದಯ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ 2026-27ನೇ ಸಾಲಿನ ಸಹ-ಪಠ್ಯ ಚಟುವಟಿಕೆಗಳ ಉದ್ಘಾಟನೆ ಹಾಗೂ ಪ್ರಥಮ ಬಿ.ಎ. ವಿದ್ಯಾರ್ಥಿಗಳ ಸ್ವಾಗತ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಅಗಾಧ ಶಕ್ತಿಯಿರುತ್ತದೆ. ಅದನ್ನು ಅರಿತುಕೊಂಡು ಶ್ರದ್ಧೆ ಹಾಗೂ ಏಕಾಗ್ರತೆಯಿಂದ ಓದಿನಲ್ಲಿ ತೊಡಗಿಸಿಕೊಂಡರೆ ಸುಂದರ ಬದುಕನ್ನು ರೂಪಿಸಿಕೊಳ್ಳಬಹುದು ಎಂದ ಅವರು, ಕಲಾ ಮಾಧ್ಯಮದ ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ಕೀಳರಿಮೆ ಬೆಳೆಸಿಕೊಳ್ಳದೆ, ಭಾಷಾ ಸಂಪತ್ತನ್ನು ವೃದ್ಧಿಸಿಕೊಂಡರೆ ವಿದ್ಯಾಭ್ಯಾಸ ಅತ್ಯಂತ ಸುಲಭವಾಗುತ್ತದೆ ಎಂದು ಸಲಹೆ ನೀಡಿದರು. ಇಂದಿನ ಯುವ ಸಮುದಾಯ ನಿರುಪಯುಕ್ತ ಫ್ಯಾಷನ್‌ಗೆ ಮರುಳಾಗದೆ, ಬದುಕನ್ನು ಗೆಲ್ಲುವ ಕಡೆಗೆ ತಮ್ಮ ಹೆಜ್ಜೆಗಳನ್ನು ಇಡಬೇಕು ಎಂದು ಎಚ್ಚರಿಸಿದ ಅವರು, ಪದವಿಯಲ್ಲಿ ಮಾನವೀಯ ಮೌಲ್ಯಗಳ ವಿಷಯಗಳು ಬದುಕಿನ ಪಾಠ ಕಲಿಸುತ್ತವೆ ಎಂದರು. ಆದ್ದರಿಂದ ವಿದ್ಯಾರ್ಥಿಗಳು ಪುಸ್ತಕಗಳ ಅಧ್ಯಯನಕ್ಕೆ ಹೆಚ್ಚು ಗಮನ ನೀಡಿ, ಗ್ರಂಥಾಲಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು. ನವೋದಯ ಸಂಸ್ಥೆಯು ಗ್ರಾಮೀಣ ವಿದ್ಯಾರ್ಥಿಗಳಿಗೆ ವರದಾನವಾಗಿದೆ ಎಂದು ಬಣ್ಣಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ತುಮಕೂರು ವಿಶ್ವವಿದ್ಯಾನಿಲಯದ ಕಲಾ ಕಾಲೇಜಿನ ಪ್ರಾಧ್ಯಾಪಕ ಡಾ. ಎಸ್. ಶಿವಣ್ಣ ಬೆಳವಾಡಿ, ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ನವೋದಯ ವಿದ್ಯಾ ಸಂಸ್ಥೆಯು ಗ್ರಾಮೀಣ ಮಕ್ಕಳಿಗೆ ಆಸರೆಯಾಗಿದ್ದು, ಇಲ್ಲಿ ಓದಿದ ಸಾವಿರಾರು ವಿದ್ಯಾರ್ಥಿಗಳು ಉತ್ತಮ ಬದುಕು ರೂಪಿಸಿಕೊಂಡಿದ್ದಾರೆ ಎಂದರು. ಇಂದಿನ ದಿನಗಳಲ್ಲಿ ಸಾಹಿತ್ಯ, ಶಿಕ್ಷಣ ಮತ್ತು ರಾಜಕಾರಣ ಅತಿ ಸೂಕ್ಷ್ಮವಾಗಿದ್ದು, ವಿದ್ಯಾರ್ಥಿಗಳು ಸರಿ-ತಪ್ಪುಗಳನ್ನು ವಿಮರ್ಶಿಸುವ ಗುಣವನ್ನು ರೂಢಿಸಿಕೊಳ್ಳಬೇಕು ಮತ್ತು ಒಳ್ಳೆಯ ಗುರಿ ಸಾಧಿಸಲು ಸತತ ಶ್ರಮ ಹಾಗೂ ಏಕಾಗ್ರತೆ ಮುಖ್ಯ ಎಂದು ತಿಳಿಸಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಸಂಸ್ಥೆಯ ಕಾರ್ಯದರ್ಶಿ ಬಿ.ಕೆ. ಚಂದ್ರಶೇಖರ್ ಮಾತನಾಡಿ, ಕಾಲೇಜು ಹಿಂದಿನ ಅವಧಿಯಲ್ಲಿ ವಿಶ್ವವಿದ್ಯಾನಿಲಯ ಮಟ್ಟದಲ್ಲಿ ರಾಂಕ್ ಗಳಿಸಿದ್ದು ಎಲ್ಲರಿಗೂ ಸ್ಫೂರ್ತಿಯಾಗಿದೆ ಎಂದರು. ಇದೇ ವೇಳೆ ತುಮಕೂರು ವಿಶ್ವವಿದ್ಯಾನಿಲಯದ ಪದವಿ ಪರೀಕ್ಷೆಯಲ್ಲಿ ಪ್ರಥಮ ರಾಂಕ್ ಪಡೆದ ರಂಗನಾಥ್ ಅವರನ್ನು ಅದ್ಧೂರಿಯಾಗಿ ಅಭಿನಂದಿಸಲಾಯಿತು. ಅಭಿನಂದನೆ ಸ್ವೀಕರಿಸಿ ಮಾತನಾಡಿದ ರಂಗನಾಥ್, ಉಪನ್ಯಾಸಕರು ಮತ್ತು ಪೋಷಕರ ಒತ್ತಾಸೆಯಿಂದ ಈ ಸಾಧನೆ ಸಾಧ್ಯವಾಯಿತು ಎಂದು ತಿಳಿಸಿದರು.
ಕಾಲೇಜಿನ ಪ್ರಭಾರ ಪ್ರಾಚಾರ್ಯ ಡಾ. ರವಿಕುಮಾರ್. ಸಿ ಸ್ವಾಗತಿಸಿದರು, ಇತಿಹಾಸ ವಿಭಾಗದ ಡಾ. ಶ್ರೀನಿವಾಸ್. ವಿ ವಂದಿಸಿದರು. ಕಾರ್ಯಕ್ರಮದಲ್ಲಿ ಐ.ಕ್ಯೂ.ಎ.ಸಿ. ಸಂಯೋಜಕ ಡಾ. ಅರುಣ್ ಕುಮಾರ್. ಪಿ, ಉಪನ್ಯಾಸಕ ಸದಾನಂದ ಸ್ವಾಮಿ ಉಪಸ್ಥಿತರಿದ್ದರು. ಕುಮಾರಿ ಧನ್ಯ ಕಾರ್ಯಕ್ರಮ ನಿರೂಪಿಸಿದರು.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
