ಬೀದರ್: ಜಿಲ್ಲೆಯ ಔರಾದ್ (ಬಿ) ತಾಲ್ಲೂಕನ್ನು ಕೂಡಲೇ ಬರಪೀಡಿತ ಪ್ರದೇಶವೆಂದು ಘೋಷಿಸಿ, ರೈತರಿಗೆ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿ ಶಾಸಕ ಪ್ರಭು ಬಿ. ಚವ್ಹಾಣ್ ನೇತೃತ್ವದಲ್ಲಿ ಬಿಜೆಪಿ ಮಂಡಲ ವತಿಯಿಂದ ಶನಿವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು. ಪಟ್ಟಣದ ಅಮರೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಆರಂಭವಾದ ಪ್ರತಿಭಟನಾ ಮೆರವಣಿಗೆಯು ಪ್ರಮುಖ ವೃತ್ತಗಳ ಮೂಲಕ ಸಾಗಿ ಎಪಿಎಂಸಿ ವೃತ್ತದಲ್ಲಿ ಸಮಾವೇಶಗೊಂಡಿತು.
ಪ್ರತಿಭಟನೆಯಲ್ಲಿ ಎತ್ತಿನ ಬಂಡಿಯಲ್ಲಿ ತಲೆಯ ಮೇಲೆ ನಾಶವಾದ ಬೆಳೆ ಹೊತ್ತು ವಿನೂತನವಾಗಿ ಭಾಗವಹಿಸಿದ್ದ ಶಾಸಕ ಪ್ರಭು ಚವ್ಹಾಣ್ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್ ಸೇರಿದಂತೆ ಮುಖಂಡರು ಒಣಗಿದ ಸೋಯಾಬೀನ್, ಉದ್ದು ಮತ್ತು ಹೆಸರು ಕಾಳುಗಳನ್ನು ಪ್ರದರ್ಶಿಸಿ ರಾಜ್ಯ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಔರಾದ್ ತಾಲ್ಲೂಕನ್ನು ತಕ್ಷಣವೇ ಬರಪೀಡಿತ ಪ್ರದೇಶವೆಂದು ಘೋಷಿಸಬೇಕು, ನಾಶವಾದ ಬೆಳೆಗಳಿಗೆ ಪ್ರತಿ ಎಕರೆಗೆ ₹50 ಸಾವಿರ ಪರಿಹಾರ ನೀಡಬೇಕು, ರೈತರ ಸಂಪೂರ್ಣ ಬೆಳೆ ಸಾಲ ಮನ್ನಾ ಮಾಡಬೇಕು ಹಾಗೂ ಕಮಲನಗರ ತಾಲ್ಲೂಕಿನೊಂದಿಗೆ ಔರಾದ್ ತಾಲ್ಲೂಕಿನ ಕುಡಿಯುವ ನೀರು ಮತ್ತು ರಸ್ತೆ ಅಭಿವೃದ್ಧಿಗಾಗಿ ಪ್ರತ್ಯೇಕವಾಗಿ ₹10 ಕೋಟಿ ಅನುದಾನ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿ ತಹಸೀಲ್ದಾರ್ ಮಹೇಶ್ ಪಾಟೀಲ್ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ಶಾಸಕ ಪ್ರಭು ಚವ್ಹಾಣ್, ಬೀದರ್ ಜಿಲ್ಲೆಯ ಇತರೆ ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ, ಆದರೆ ಔರಾದ್ ತಾಲೂಕನ್ನು ಮಾತ್ರ ಕೈಬಿಟ್ಟು ಅನ್ಯಾಯ ಮಾಡಲಾಗಿದೆ ಎಂದು ಆರೋಪಿಸಿದರು. ಬಿತ್ತನೆಯಾದ ಬಳಿಕ ಮೂರು ವಾರ ಮಳೆಯಾಗದಿದ್ದರೆ ಬರ ಘೋಷಿಸುವುದಾಗಿ ಅಧಿಕಾರಿಗಳು ಹೇಳಿದ್ದರು, ಆದರೆ ಐದು ವಾರಕ್ಕೂ ಹೆಚ್ಚು ಮಳೆಯಾಗದೆ ಬೆಳೆಗಳು ಸಂಪೂರ್ಣ ಒಣಗಿವೆ. ಬರ ಘೋಷಣೆಗೆ ಹತ್ತು ದಿನಗಳ ಗಡುವು ನೀಡುತ್ತಿದ್ದು, ಈ ಅವಧಿಯೊಳಗೆ ಕ್ರಮ ಕೈಗೊಳ್ಳದಿದ್ದರೆ ಮುಖ್ಯಮಂತ್ರಿ ಕಚೇರಿಗೆ ಮುತ್ತಿಗೆ ಹಾಕಿ ಔರಾದ್-ಬೀದರ್ ಚಲೋ ಪಾದಯಾತ್ರೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಔರಾದ್ ತಾಲ್ಲೂಕಿನ ಜನರ ಮೇಲೆ ದ್ವೇಷವಿದ್ದರೆ ನನಗೆ ಗುಂಡು ಹೊಡೆಯಿರಿ, ಆದರೆ ರೈತರಿಗೆ ಅನ್ಯಾಯ ಮಾಡಬೇಡಿ ಎಂದು ಅವರು ಭಾವನಾತ್ಮಕವಾಗಿ ಆಕ್ರೋಶ ಹೊರಹಾಕಿದರು.
ಪ್ರತಿ ವಿಚಾರಕ್ಕೂ ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡುವುದನ್ನು ಬಿಟ್ಟು ರಾಜ್ಯ ಸರ್ಕಾರ ಜನರ ಸಮಸ್ಯೆಗಳತ್ತ ಗಮನ ಹರಿಸಬೇಕು ಎಂದು ಒತ್ತಾಯಿಸಿದ ಶಾಸಕರು, ಅನುದಾನದ ಕೊರತೆಯಿಂದ ₹560 ಕೋಟಿ ವೆಚ್ಚದ ಕೆರೆ ತುಂಬಿಸುವ ಯೋಜನೆ, ₹84 ಕೋಟಿ ವೆಚ್ಚದ ನೀರು ಸರಬರಾಜು ಯೋಜನೆ ಹಾಗೂ ಸಿಪೆಟ್ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳು ಮಂದಗತಿಯಲ್ಲಿ ಸಾಗುತ್ತಿವೆ ಎಂದು ತಿಳಿಸಿದರು. ಪ್ರತಿಭಟನೆಯಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ರಾಮಶೆಟ್ಟಿ ಪನ್ನಾಳೆ, ವಸಂತ ಬಿರಾದಾರ, ಕಿರಣ ಪಾಟೀಲ, ಅರಹಂತ ಸಾವಳೆ, ವಿಜಯಲಕ್ಷ್ಮಿ ಕೌಟಗೆ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಕಾರ್ಯಕರ್ತರು, ಮುಖಂಡರು ಹಾಗೂ ರೈತರು ಉಪಸ್ಥಿತರಿದ್ದರು.
ವರದಿ: ಅರವಿಂದ ಮಲ್ಲೀಗೆ, ಬೀದರ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
