ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಪಟಾಕಿ ಸಿಡಿಸುವುದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಜಾರಿಗೆ ತಂದಿದೆ. ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ಪರಿಸರ ಸಚಿವ ರಾಮಲಿಂಗಾರೆಡ್ಡಿ ಅವರು, ಸುಪ್ರೀಂ ಕೋರ್ಟ್ ಆದೇಶದಂತೆ ಸಾರ್ವಜನಿಕರು ಪಟಾಕಿ ಸಿಡಿಸಬೇಕು ಎಂದು ಸೂಚಿಸಿದ್ದಾರೆ. ಪರಿಸರ ಮಾಲಿನ್ಯ ನಿಯಂತ್ರಣ ಹಾಗೂ ಜನರ ಸುರಕ್ಷತೆಯ ದೃಷ್ಟಿಯಿಂದ ಹಸಿರು ಪಟಾಕಿಗಳನ್ನೇ ಬಳಸುವಂತೆ ಮನವಿ ಮಾಡಿದ್ದಾರೆ.
ದೀಪಾವಳಿ ಹಬ್ಬದ ಸಂದರ್ಭದಲ್ಲಿ ಸಾರ್ವಜನಿಕರು ಮನಬಂದಂತೆ ಪಟಾಕಿ ಸಿಡಿಸುವಂತಿಲ್ಲ. ರಾತ್ರಿ 8 ಗಂಟೆಯಿಂದ 10 ಗಂಟೆಯವರೆಗೆ ಮಾತ್ರ ಪಟಾಕಿ ಸಿಡಿಸಲು ಅವಕಾಶವಿದ್ದು, ನಿಗದಿತ ಸಮಯದ ಹೊರಗೆ ಪಟಾಕಿ ಸಿಡಿಸುವುದನ್ನು ನಿಷೇಧಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ಸುಪ್ರೀಂ ಕೋರ್ಟ್ ಆದೇಶಗಳನ್ನು ಜಿಲ್ಲಾಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚನೆ ನೀಡಲಾಗಿದೆ. ನಿಷೇಧಿತ ಪಟಾಕಿಗಳನ್ನು ದಾಸ್ತಾನು ಮಾಡುವುದು ಅಥವಾ ಮಾರಾಟ ಮಾಡುವುದು ಕಂಡುಬಂದರೆ ಅವುಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು. ಅಗತ್ಯವಿದ್ದಲ್ಲಿ ಸಂಬಂಧಿತ ಗೋದಾಮುಗಳ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.
ಪಟಾಕಿಗಳಲ್ಲಿ ವಿವಿಧ ಲೋಹಗಳು ಹಾಗೂ ರಾಸಾಯನಿಕ ಅಂಶಗಳನ್ನು ಬಳಸಲಾಗುತ್ತದೆ. ಇವುಗಳಿಂದ ಪರಿಸರ ಮಾಲಿನ್ಯ ಹೆಚ್ಚುವುದರ ಜೊತೆಗೆ ಸಾರ್ವಜನಿಕರ ಆರೋಗ್ಯದ ಮೇಲೂ ದುಷ್ಪರಿಣಾಮ ಉಂಟಾಗುವ ಸಾಧ್ಯತೆಯಿದೆ. ಹೀಗಾಗಿ ಪರಿಸರಕ್ಕೆ ಕಡಿಮೆ ಹಾನಿ ಉಂಟುಮಾಡುವ ಹಸಿರು ಪಟಾಕಿಗಳನ್ನು ಬಳಸುವಂತೆ ರಾಮಲಿಂಗಾರೆಡ್ಡಿ ಅವರು ಸಲಹೆ ನೀಡಿದ್ದಾರೆ.ಸಾಮಾನ್ಯ ಪಟಾಕಿಗಳಿಗೆ ಹೋಲಿಸಿದರೆ ಹಸಿರು ಪಟಾಕಿಗಳಲ್ಲಿ ಕೆಲವು ಹಾನಿಕಾರಕ ಅಂಶಗಳ ಪ್ರಮಾಣ ಕಡಿಮೆ ಇರುತ್ತದೆ. ಆದ್ದರಿಂದ ಪರಿಸರ ಸ್ನೇಹಿ ಪಟಾಕಿಗಳ ಬಳಕೆಗೆ ಸಾರ್ವಜನಿಕರು ಹೆಚ್ಚಿನ ಆದ್ಯತೆ ನೀಡಬೇಕು ಎಂದು ತಿಳಿಸಿದ್ದಾರೆ.
ದೀಪಾವಳಿ ಸಂದರ್ಭದಲ್ಲಿ ಪಟಾಕಿಗಳ ಸದ್ದು ಮತ್ತು ಹೊಗೆಯಿಂದ ಪ್ರಾಣಿಪಕ್ಷಿಗಳಿಗೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸಬೇಕು. ಸಾರ್ವಜನಿಕರು ನಿಗದಿಪಡಿಸಿದ ಸಮಯದಲ್ಲೇ ಪಟಾಕಿ ಸಿಡಿಸಬೇಕು ಹಾಗೂ ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಸಚಿವರು ಸೂಚಿಸಿದ್ದಾರೆ.ನಿಯಮಗಳ ಪಾಲನೆ ಖಚಿತಪಡಿಸಿಕೊಳ್ಳಲು ಜಿಲ್ಲಾಧಿಕಾರಿಗಳು, ಅಗ್ನಿಶಾಮಕ ದಳದ ಅಧಿಕಾರಿಗಳು, ಆರೋಗ್ಯಾಧಿಕಾರಿಗಳು, ತಹಶೀಲ್ದಾರರು, ಜಿಲ್ಲಾ ಪರಿಸರ ಅಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳನ್ನು ಒಳಗೊಂಡ ಕಾರ್ಯಪಡೆ ರಚಿಸುವಂತೆ ಸೂಚಿಸಲಾಗಿದೆ.
ಇತ್ತೀಚೆಗೆ ನಟಿ ರಮ್ಯಾ ಅವರು ಪಟಾಕಿಗಳಿಂದ ಉಂಟಾಗುವ ಕಿರಿಕಿರಿ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಟ್ವೀಟ್ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಪಟಾಕಿ ಬಳಕೆಯ ನಿಯಮಗಳ ಬಗ್ಗೆ ಸಾರ್ವಜನಿಕರಿಗೆ ಜಾಹೀರಾತುಗಳ ಮೂಲಕ ಮಾಹಿತಿ ನೀಡಲು ಸೂಚಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ನಿಷೇಧಿತ ಪಟಾಕಿಗಳನ್ನು ಎಲ್ಲಿ ಮಾರಾಟ ಮಾಡಿದರೂ ಅವುಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು. ಪರಿಸರಕ್ಕೆ ಹಾನಿಯಾಗದಂತೆ ಹಾಗೂ ಸಾರ್ವಜನಿಕರ ಸುರಕ್ಷತೆಗೆ ಧಕ್ಕೆಯಾಗದಂತೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ರಾಮಲಿಂಗಾರೆಡ್ಡಿ ಅವರು ಸ್ಪಷ್ಟ ಸೂಚನೆ ನೀಡಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
