ನವೆಂಬರ್ 1, ಒಂದೆಡೆ ಕನ್ನಡ ರಾಜ್ಯೋತ್ಸವದ ಸಂಭ್ರಮವಾದರೆ, ಮತ್ತೊಂದೆಡೆ ನಮ್ಮತುಮಕೂರು ಡಿಜಿಟಲ್ ಮಾಧ್ಯಮದ ಆರಂಭ ವರ್ಷವೂ ಹೌದು. ಇಂದಿಗೆ ನಮ್ಮತುಮಕೂರು ಮಾಧ್ಯಮ ಆರಂಭಗೊಂಡು ಯಶಸ್ವಿಯಾಗಿ 5 ವರ್ಷಗಳನ್ನು ಪೂರೈಸಿ 6ನೇ ವರ್ಷಕ್ಕೆ ಕಾಲಿಡುತ್ತಿದೆ. ಈ ಐದು ವರ್ಷಗಳಲ್ಲಿ ಮಾಧ್ಯಮವು ತುಮಕೂರು ಮಾತ್ರವಲ್ಲದೇ ರಾಜ್ಯದ ಮೂಲೆಮೂಲೆಗಳಲ್ಲಿರುವ ಕನ್ನಡಿಗರು ಹಾಗೂ ದೇಶ ವಿದೇಶಗಳಲ್ಲಿರುವ ಕನ್ನಡಿಗರನ್ನು ಯಶಸ್ವಿಯಾಗಿ ತಲುಪಿದೆ. ಇದು ನಮಗೆ ಸಾರ್ಥಕತೆಯ ಭಾವನೆಯನ್ನು ಮೂಡಿಸಿದೆ.
ಕಳೆದ 5 ವರ್ಷಗಳಲ್ಲಿ ಯಾವುದೇ ಆರ್ಥಿಕ ಲಾಭವಿಲ್ಲದೇ, ಕೇವಲ ಸಾಮಾಜಿಕ ಲಾಭಗಳಿಗೆ ಒತ್ತುಕೊಟ್ಟ ಮಾಧ್ಯಮ ಸಮಾಜಕ್ಕೆ ಒಂದು ಕೊಡುಗೆಯಾಗಿ ಹೊರಹೊಮ್ಮಿರುವುದು ನಮ್ಮೆಲ್ಲರಿಗೂ ಸಂತಸದ ವಿಷಯವಾಗಿದೆ. ಪ್ರತಿ ವರ್ಷವೂ ಕೋಟ್ಯಾಂತರ ಜನರಿಗೆ ಸುದ್ದಿಗಳನ್ನು ಮಾಹಿತಿಗಳನ್ನು, ಉದ್ಯೋಗ ವಾರ್ತೆಗಳನ್ನು ತಿಳಿಸುತ್ತಾ, ಸಾರ್ವಜನಿಕರ ಸಮಸ್ಯೆಗಳಿಗೆ ಧ್ವನಿಯಾಗುತ್ತಾ, ಮಾಧ್ಯಮ 5 ವರ್ಷಗಳ ಸುದೀರ್ಘ ನಡಿಗೆಯನ್ನು ಯಶಸ್ವಿಗೊಳಿಸಿರುವುದು ಮಾತ್ರವಲ್ಲ, 6ನೇ ವರ್ಷಕ್ಕೆ ಪಾದಾರ್ಪಣೆ ಮಾಡುವ ಮೂಲಕ ಇನ್ನಷ್ಟು ಸಮಾಜಮುಖಿ ಕಾರ್ಯಗಳಿಗೆ ದಾರಿದೀಪವಾಗಿ ಹೊರಹೊಮ್ಮಲಿದೆ.
ತುಮಕೂರಿನ ಸಾರ್ವಜನಿಕರ ಸಮಸ್ಯೆಗಳಿಗೆ ನಮ್ಮತುಮಕೂರು ಮಾಧ್ಯಮ ಧ್ವನಿಯಾಗಿದೆ. ಹಲವಾರು ಸಾರ್ವಜನಿಕ ಸಮಸ್ಯೆಗಳನ್ನು ಆಡಳಿತ ಯಂತ್ರದ ಗಮನಕ್ಕೆ ತಂದು ಅವುಗಳನ್ನು ಪರಿಹರಿಸಿರುವ ಹೆಗ್ಗಳಿಗೆ ನಮ್ಮತುಮಕೂರು ಮಾಧ್ಯಮದ್ದಾಗಿದೆ. ಮಾಧ್ಯಮ ಎನ್ನುವುದು ಉದ್ಯಮವಾಗಿರುವ ಕಾಲಘಟ್ಟದಲ್ಲಿ, ಮಾಧ್ಯಮವನ್ನು ಆರ್ಥಿಕ ಲಾಭದ ಸರಕಾಗಿ ಬಳಸದೇ, ಸಮಾಜ ಮುಖಿ ಕಾರ್ಯಗಳಿಗೆ ಬಳಸುವ ಕನಸು ಕಂಡವರು ನಮ್ಮತುಮಕೂರು ಮಾಧ್ಯಮದ ಪ್ರಧಾನ ಸಂಪಾದಕರಾದ ನಟರಾಜ್ ಜಿ.ಎಲ್. ಅವರು. ಇಂದು ಅವರ ಕನಸಿನ ಮಾಧ್ಯಮ ತುಮಕೂರಿನಲ್ಲಿ ಮನೆಮಾತಾಗಿದೆ. ತುಮಕೂರಿನ ಜನರ ದಿನನಿತ್ಯದ ಬದುಕಿನಲ್ಲಿ ಹಾಸುಹೊಕ್ಕಾಗಿದೆ.
ಇಂದು ಮಾರುಕಟ್ಟೆಗಳಲ್ಲಿ ಕಣ್ಮರೆಯಾಗಿರುವ ದಿನಪತ್ರಿಕೆಗಳ ಸ್ಥಾನವನ್ನು ಡಿಜಿಟಲ್ ಮಾಧ್ಯಮಗಳು ತುಂಬುತ್ತಿವೆ. ಆದರೂ ಇಂದಿನ ಸರ್ಕಾರಗಳು ಡಿಜಿಟಲ್ ಸುದ್ದಿ ಮಾಧ್ಯಮವನ್ನು ಸರಿಯಾಗಿ ಬಳಕೆ ಮಾಡಿಕೊಳ್ಳದೇ, ಸರ್ಕ್ಯುಲೇಶನ್ ಇಲ್ಲದ ಪತ್ರಿಕೆಗಳಿಗೆ ಜಾಹೀರಾತುಗಳನ್ನು ಸುರಿದು ಸಾರ್ವಜನಿಕರ ಕೋಟ್ಯಾಂತರ ಹಣವನ್ನು ವ್ಯರ್ಥ ಮಾಡುತ್ತಿದೆ. ದಿನಪತ್ರಿಕೆಗಳಿಗೆ ನೀಡುವ ಒತ್ತು ಆನ್ ಲೈನ್ ಮಾಧ್ಯಮಗಳಿಗೆ ಸರ್ಕಾರ ನೀಡದೇ ಇರುವುದು, “ಅಪ್ಪ ನೆಟ್ಟ ಆಳದ ಮರಕ್ಕೆ ನೇಣು ಹಾಕಿಕೊಂಡಂತೆ” ಎಂಬ ಗಾದೆ ಮಾತಿನಂತಾಗಿದೆ. ಸರ್ಕಾರ ಡಿಜಿಟಲ್ ಮಾಧ್ಯಮಗಳಿಗೆ ಒತ್ತು ನೀಡಬೇಕು ಎಂದು ಕೇವಲ ಬಾಯಿ ಮಾತಿನಿಂದ ಹೇಳದೇ ಕಾರ್ಯ ಪ್ರವೃತವಾಗಬೇಕಿದೆ.
ಡಿಜಿಟಲ್ ಮಾಧ್ಯಮಗಳು ಇಂದು ಅತೀ ವೇಗವಾಗಿ ಜನರನ್ನು ತಲುಪುತ್ತಿವೆ. ತುಮಕೂರಿನಲ್ಲಿ ನಮ್ಮತುಮಕೂರು, ಆನ್ ಲೈನ್ ಮಾಧ್ಯಮ ಕ್ಷೇತ್ರದಲ್ಲಿ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಾ, ತನ್ನದೇ ಸ್ವಂತ ಶಕ್ತಿಯ ಮೂಲಕ ಜನರಿಗೆ ಹತ್ತಿರವಾಗಿದೆ. ಮುಂದಿನ ದಿನಗಳಲ್ಲಿ ಮಾಧ್ಯಮವು ಹೊಸ ಬದಲಾವಣೆಗಳೊಂದಿಗೆ ಜನರಿಗೆ ಮತ್ತಷ್ಟು ಹತ್ತಿರವಾಗುವ ಯೋಜನೆ, ಯೋಚನೆಗಳಿಂದ ಕಾರ್ಯ ನಿರ್ವಹಿಸಲಿದೆ. ನಮ್ಮೆಲ್ಲ ಓದುಗರ ಜೊತೆಗೆ ಈ 5ನೇ ವರ್ಷದ ಸಂಭ್ರಮದ ಸಿಹಿ ಸುದ್ದಿಯನ್ನು ಹಂಚಿಕೊಳ್ಳುತ್ತಾ, ಜೊತೆಯಾಗಿ ಸಾಗೋಣ, ಉತ್ತಮ ಸಮಾಜವನ್ನು ನಿರ್ಮಾಣ ಮಾಡೋಣ…
ನಮಸ್ಕಾರ
— ಸಂಪಾದಕೀಯ ಮಂಡಳಿ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
