ತುಮಕೂರು : ಶಾಂತಿ ಮತ್ತು ಅಹಿಂಸೆಯ ಸಂದೇಶ ಸಾರುವ ಜೈನ ಸಮಾಜವು ತ್ಯಾಗ ಹಾಗೂ ಸೇವೆಗೆ ಹೆಸರುವಾಸಿಯಾಗಿದೆ. ಜೈನ ಮುನಿಗಳು ತಮ್ಮ ತ್ಯಾಗಮಯ ಜೀವನದ ಮೂಲಕ ಸಮಾಜಕ್ಕೆ ಆದರ್ಶವಾಗಿದ್ದರೆ, ಜೈನ ಸಮುದಾಯದವರು ವಿವಿಧ ಸೇವಾ ಕಾರ್ಯಗಳ ಮೂಲಕ ಸಮಾಜದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡುತ್ತಿದ್ದಾರೆ ಎಂದು ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ ತಿಳಿಸಿದರು.
ನಗರದ ಗಾಜಿನ ಮನೆಯಲ್ಲಿ ಭಾನುವಾರ ಆಯೋಜಿಸಿದ್ದ ಆಚಾರ್ಯಶ್ರೀ 108 ಪ್ರಮುಖ್ ಸಾಗರ್ಜೀ ಮಹಾರಾಜರ ಸಂಘದ 31ನೇ ಪುಷ್ಪ ಪ್ರಮುಖ್ ವರ್ಷಾಯೋಗದ ಅಂಗವಾಗಿ ನಡೆದ ಭವ್ಯ ಜಿನೇಶ್ವರಿ ಜಿನದೀಕ್ಷಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ತುಮಕೂರಿನಲ್ಲಿ ಇದೇ ಮೊದಲ ಬಾರಿಗೆ ಜೈನ ಸಮಾಜದ ಮುನಿದೀಕ್ಷಾ ಕಾರ್ಯಕ್ರಮ ನಡೆಯುತ್ತಿರುವುದು ಸಂತಸದ ಸಂಗತಿ. ಇಂತಹ ಅಪರೂಪದ ಧಾರ್ಮಿಕ ಕಾರ್ಯಕ್ರಮಗಳು ಸುವರ್ಣಾಕ್ಷರಗಳಲ್ಲಿ ದಾಖಲಿಸುವಂತಹ ಮಹತ್ವ ಹೊಂದಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಗುರು-ಶಿಷ್ಯರ ಸಂಬಂಧ ಅವಿನಾಭಾವವಾದುದು. ತಮ್ಮ ಧಾರ್ಮಿಕ ಸಂದೇಶಗಳ ಮೂಲಕ ಸಮಾಜಕ್ಕೆ ಆಧ್ಯಾತ್ಮಿಕ ಬೆಳಕು ನೀಡುತ್ತಿರುವ ಆಚಾರ್ಯಶ್ರೀ ಪ್ರಮುಖ್ ಸಾಗರ್ಜೀ ಮಹಾರಾಜರ ನೇತೃತ್ವದಲ್ಲಿ ಮುನಿಗಳು ತುಮಕೂರಿನಲ್ಲಿ ಚಾತುರ್ಮಾಸದ ಧಾರ್ಮಿಕ ಕೈಂಕರ್ಯಗಳನ್ನು ನಡೆಸುತ್ತಿರುವುದು ಶ್ಲಾಘನೀಯ. ಸಿದ್ಧಗಂಗಾ ಮಠಕ್ಕೂ ಜೈನ ಸಮುದಾಯಕ್ಕೂ ಹಿಂದಿನಿಂದಲೂ ಉತ್ತಮ ಬಾಂಧವ್ಯವಿದೆ. ಈ ದೀಕ್ಷಾ ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಹಾರೈಸಿದರು.
ದರ್ಶನ್, ರಚನಾ ದೀದಿ ಸನ್ಯಾಸತ್ವ ಸ್ವೀಕಾರ
ಕಾರ್ಯಕ್ರಮದಲ್ಲಿ ಆಚಾರ್ಯಶ್ರೀ 108 ಪ್ರಮುಖ್ ಸಾಗರ್ ಮಹಾರಾಜರ 26ನೇ ಮುನಿದೀಕ್ಷಾ ಮಹೋತ್ಸವವೂ ನಡೆಯಿತು. ಆಚಾರ್ಯಶ್ರೀ ಪ್ರಮುಖ್ ಸಾಗರ್ಜೀ ಅವರ ದಿವ್ಯ ನೇತೃತ್ವದಲ್ಲಿ ಜೈನ ಧರ್ಮದ ಸಂಪ್ರದಾಯದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ದರ್ಶನ್ ಹಾಗೂ ರಚನಾ ದೀದಿ ಅವರು ಸನ್ಯಾಸತ್ವ ಸ್ವೀಕರಿಸಿದರು.
ಗೃಹಸ್ಥ ಜೀವನದ ಲೌಕಿಕ ಸುಖ, ಆಸ್ತಿ-ಪಾಸ್ತಿ ಹಾಗೂ ಕುಟುಂಬದ ಬಂಧನಗಳನ್ನು ತ್ಯಜಿಸಿ ಸಾಧು-ಸಾಧ್ವಿ ಜೀವನಕ್ಕೆ ಪ್ರವೇಶಿಸುವುದು ಜೈನ ಧರ್ಮದಲ್ಲಿ ಅತ್ಯಂತ ಪವಿತ್ರವಾದ ಆಧ್ಯಾತ್ಮಿಕ ಆಚರಣೆಯಾಗಿದೆ. ಆತ್ಮಕಲ್ಯಾಣ ಮತ್ತು ಮೋಕ್ಷ ಸಾಧನೆಯ ಹಾದಿಯಲ್ಲಿ ಮುನಿದೀಕ್ಷೆಗೆ ವಿಶೇಷ ಮಹತ್ವವಿದೆ. ದೀಕ್ಷೆ ಸ್ವೀಕರಿಸುವವರು ಸನ್ಯಾಸ ಜೀವನದ ಕಠಿಣ ನಿಯಮಗಳನ್ನು ಪಾಲಿಸಲು ಮಾನಸಿಕವಾಗಿ ಮತ್ತು ದೈಹಿಕವಾಗಿ ಸಿದ್ಧರಾಗಿರುವುದನ್ನು ಗುರುಗಳು ಪರಿಶೀಲಿಸಿದ ಬಳಿಕ ದೀಕ್ಷೆ ನೀಡಲಾಗುತ್ತದೆ.
ಕಾರ್ಯಕ್ರಮದಲ್ಲಿ ಗುಬ್ಬಿ ಶಾಸಕ ಎಸ್.ಆರ್. ಶ್ರೀನಿವಾಸ್ ಭಾಗವಹಿಸಿ ಮುನಿಗಳ ಭಾವಚಿತ್ರ ಅನಾವರಣಗೊಳಿಸಿದರು. ಶಾಸಕ ಜಿ.ಬಿ. ಜ್ಯೋತಿಗಣೇಶ್ ಉಪಸ್ಥಿತರಿದ್ದರು. ದಿಗಂಬರ ಜೈನಶ್ರೀ ಪಾರ್ಶ್ವನಾಥ ಸ್ವಾಮಿ ಜಿನಮಂದಿರದ ಅಧ್ಯಕ್ಷ ಟಿ.ಡಿ. ಬಾಹುಬಲಿಬಾಬು ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದ ಅಂಗವಾಗಿ 26 ಕುಟುಂಬಗಳಿಂದ ಪಾದಪ್ರಕ್ಷಾಳನೆ, 26 ಕುಟುಂಬಗಳಿಂದ ಶಾಸ್ತ್ರದಾನ, 26 ಕುಟುಂಬಗಳಿಂದ ಪಾದಪೂಜೆ ಹಾಗೂ 26 ಕುಟುಂಬಗಳಿಂದ ಆರತಿ ಸೇವೆ ನೆರವೇರಿಸಲಾಯಿತು.
ಜೈನ ಸಮಾಜದ ಮುಖಂಡರಾದ ಆರ್.ಎ. ಸುರೇಶ್ ಕುಮಾರ್, ಎನ್.ಡಿ. ವಿನಯ್ ಜೈನ್, ಶುಭೋದ್ ಕುಮಾರ್ ಜೈನ್, ಬಿ.ಎಲ್. ಚಂದ್ರಕೀರ್ತಿ, ಬಿ.ಎಸ್. ಪಾರ್ಶ್ವನಾಥ್, ಟಿ.ಎನ್. ಜಿನೇಶ್, ಬ್ರಹ್ಮಪ್ರಕಾಶ್ ಸೇರಿದಂತೆ ಜೈನ ಸಮಾಜದ ಗಣ್ಯರು ಹಾಗೂ ಭಕ್ತರು ಭಾಗವಹಿಸಿದ್ದರು.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
