ಔರಾದ್: ಪಟ್ಟಣದಲ್ಲಿ ಎದುರಾಗಿರುವ ತೀವ್ರ ಕುಡಿಯುವ ನೀರಿನ ಅಭಾವವನ್ನು ತಕ್ಷಣವೇ ಪರಿಹರಿಸಲು ₹2.5 ಕೋಟಿ ಅನುದಾನ ಬಿಡುಗಡೆ ಮಾಡುವಂತೆ ಶಾಸಕ ಪ್ರಭು ಚವ್ಹಾಣ ಅವರು ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಅವರಿಗೆ ಒತ್ತಾಯಿಸಿದ್ದಾರೆ.
ತಾಲೂಕಿನ ತೇಗಂಪೂರ್ ಸಣ್ಣ ನೀರಾವರಿ ಇಲಾಖೆಯ ಕೆರೆಗೆ ಸಚಿವ ಈಶ್ವರ್ ಖಂಡ್ರೆ ಭೇಟಿ ನೀಡಿದ್ದಾಗ ಮನವಿ ಪತ್ರ ಸಲ್ಲಿಸಿದ ಶಾಸಕರು, ಹಿಂದೆ ಔರಾದ್ ಪಟ್ಟಣಕ್ಕೆ ಇದೇ ತೇಗಂಪೂರ್ ಕೆರೆಯಿಂದ ನೀರು ಪೂರೈಸಲಾಗುತ್ತಿತ್ತು, ಆದರೆ ಹಾಲಹಳ್ಳಿಯಿಂದ ನೀರು ಸರಬರಾಜು ಆರಂಭವಾದ ನಂತರ ಈ ಯೋಜನೆ ನಿರ್ಲಕ್ಷ್ಯಕ್ಕೆ ಒಳಗಾಗಿ ಮೋಟಾರ್ ಹಾಗೂ ಪೈಪ್ ಲೈನ್ ವ್ಯವಸ್ಥೆ ಸಂಪೂರ್ಣ ಹಾಳಾಗಿದೆ ಎಂದು ವಿವರಿಸಿದರು.
ಪ್ರಸ್ತುತ ಮಾಂಜ್ರಾ ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿ ನೀರು ಪೂರೈಕೆ ಸ್ಥಗಿತಗೊಂಡಿರುವುದರಿಂದ ಜನರು ತೊಂದರೆ ಅನುಭವಿಸುತ್ತಿದ್ದು, ಪಟ್ಟಣದ ಜನಸಂಖ್ಯೆಗೆ ತಕ್ಕಂತೆ ನೀರು ಒದಗಿಸಲು ಕೆರೆಯಲ್ಲಿ ಹೊಸ ಮೋಟಾರ್ಗಳನ್ನು ಅಳವಡಿಸಿ ಹೊಸ ಪೈಪ್ಲೈನ್ ಅಳವಡಿಸಲು ₹2.5 ಕೋಟಿ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದರು.
ಶಾಸಕರ ಮನವಿಗೆ ಸ್ಪಂದಿಸಿದ ಸಚಿವ ಖಂಡ್ರೆ, ಜಿಲ್ಲಾಧಿಕಾರಿಗಳ ಮೂಲಕ ಸಲ್ಲಿಕೆಯಾಗಿರುವ ₹30 ಲಕ್ಷ ಅನುದಾನದ ಪ್ರಸ್ತಾವನೆಗೆ ಮಂಜೂರಾತಿ ನೀಡಲು ಹಾಗೂ ತಮ್ಮ ಇಲಾಖೆಯಿಂದ ₹50 ಲಕ್ಷ ಬಿಡುಗಡೆ ಮಾಡಲು ಅಧಿಕಾರಿಗಳಿಗೆ ಮೌಖಿಕ ನಿರ್ದೇಶನ ನೀಡಿದ್ದಲ್ಲದೆ, ಮುಂದಿನ ಮೂರು ದಿನಗಳಲ್ಲಿ ತಾತ್ಕಾಲಿಕ ಪರಿಹಾರ ರೂಪಿಸಿ ನೀರು ಸರಬರಾಜು ಮಾಡಲು ಸೂಚಿಸಿದರು.
ಈ ವೇಳೆ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಪಂ ಸಿಇಒ ಗಿತ್ತೆ ಮಾಧವ್, ತಹಶೀಲ್ದಾರ್ ಮಹೇಶ ಪಾಟೀಲ್, ತಾಪಂ ಇಒ ಕಿರಣ ಪಾಟೀಲ್, ಸಹಾಯಕ ನಿರ್ದೇಶಕ ಶಿವಕುಮಾರ ಘಾಟೆ, ಕಾಂಗ್ರೆಸ್ ಮುಖಂಡರಾದ ಭೀಮಸೇನರಾವ ಸಿಂಧೆ, ಸುಧಾಕರ ಕೋಳ್ಳುರ ಸೇರಿದಂತೆ ಹಲವು ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ವರದಿ: ಅರವಿಂದ ಮಲ್ಲಿಗೆ, ಬೀದರ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
