ಚಿಕ್ಕನಾಯಕನಹಳ್ಳಿ : ತಾಲ್ಲೂಕಿನ 12ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಾಲುಗೋಣ ಗ್ರಾಮದ ಹಿರಿಯ ಸಾಹಿತಿ ಡಾ. ಶಿವತಾರಕ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಶಾಸಕ ಹಾಗೂ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸಿ.ಬಿ. ಸುರೇಶ್ ಬಾಬು ತಿಳಿಸಿದರು.
ತಾಲ್ಲೂಕಿನ ಹಾಲುಗೋಣ ಗ್ರಾಮದ ಸಮ್ಮೇಳನಾಧ್ಯಕ್ಷರ ನಿವಾಸಕ್ಕೆ ಭೇಟಿ ನೀಡಿದ ಶಾಸಕರು, ಡಾ. ಶಿವತಾರಕ್ ಅವರಿಗೆ ಸಮ್ಮೇಳನದ ಅಧಿಕೃತ ಆಹ್ವಾನ ನೀಡಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಸಿ.ಬಿ. ಸುರೇಶ್ಬಾಬು, ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಗೆ ಚಿಕ್ಕನಾಯಕನಹಳ್ಳಿ ತಾಲ್ಲೂಕು ತನ್ನದೇ ಆದ ಕೊಡುಗೆ ನೀಡಿದೆ. ಈವರೆಗೆ ನಡೆದಿರುವ 11 ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನಗಳ ಪೈಕಿ ಎಂಟು ಸಮ್ಮೇಳನಗಳು ತಮ್ಮ ಅವಧಿಯಲ್ಲಿಯೇ ನಡೆದಿರುವುದು ಹೆಮ್ಮೆಯ ಸಂಗತಿ. ಇದೀಗ 12ನೇ ಸಮ್ಮೇಳನವನ್ನು ಅರ್ಥಪೂರ್ಣವಾಗಿ ಆಯೋಜಿಸಲು ಸಿದ್ಧತೆ ನಡೆಸಲಾಗಿದೆ ಎಂದರು.
ಕನ್ನಡ ಭಾಷೆ, ಸಂಸ್ಕೃತಿ ಹಾಗೂ ನಾಡಿನ ನೆಲ-ಜಲದ ಸಂರಕ್ಷಣೆಯಲ್ಲಿ ಸಾಹಿತಿಗಳ ಕೊಡುಗೆ ಅಪಾರ. ಕುವೆಂಪು ಅವರಿಂದ ಹಿಡಿದು ನಮ್ಮ ತಾಲ್ಲೂಕಿನ ತೀ.ನಂ. ಶ್ರೀಕಂಠಯ್ಯ, ಸಾ.ಶಿ. ಮರುಳಯ್ಯ ಅವರಂತಹ ಹಿರಿಯ ಸಾಹಿತಿಗಳ ಸಾಹಿತ್ಯಿಕ ಸೇವೆಯಿಂದ ಕನ್ನಡ ಸಾಹಿತ್ಯ ಶ್ರೀಮಂತವಾಗಿದೆ. ಈ ಬಾರಿಯ ಸಮ್ಮೇಳನದಲ್ಲಿ ವಿವಿಧ ಗೋಷ್ಠಿಗಳ ಮೂಲಕ ವಿಚಾರ ವಿನಿಮಯ ನಡೆಸಿ, ಕನ್ನಡ ಮನಸ್ಸುಗಳನ್ನು ಒಗ್ಗೂಡಿಸುವ ಉದ್ದೇಶ ಹೊಂದಲಾಗಿದೆ. ಈ ಹಿನ್ನೆಲೆಯಲ್ಲಿ ಹಿರಿಯ ಸಾಹಿತಿ ಡಾ. ಶಿವತಾರಕ್ ಅವರನ್ನು ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದು, ಅಧಿಕೃತವಾಗಿ ಆಹ್ವಾನಿಸಲಾಗಿದೆ ಎಂದು ತಿಳಿಸಿದರು.
ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾಗಿರುವ ಹಿರಿಯ ಸಾಹಿತಿ ಡಾ. ಶಿವತಾರಕ್ ಮಾತನಾಡಿ, ತಮ್ಮನ್ನು ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವ ಕನ್ನಡ ಸಾಹಿತ್ಯ ಪರಿಷತ್ತಿಗೆ ಧನ್ಯವಾದಗಳನ್ನು ಅರ್ಪಿಸಿದರು. ತಮ್ಮ ಹುಟ್ಟೂರಾದ ಹಾಲುಗೋಣದಲ್ಲಿಯೇ ಈ ಬಾರಿ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ಸಂತಸ ತಂದಿದೆ. ಸಮ್ಮೇಳನ ಯಶಸ್ವಿಯಾಗಲು ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.
ತಮ್ಮ ತಂದೆ ಕಬ್ಬಿಣದ ಬಸವರಾಜು ಹಾಗೂ ತಾಯಿ ಗೋಡೆಕೆರೆ ಗೌರಮ್ಮ ಅವರ ಮಾರ್ಗದರ್ಶನದಲ್ಲಿ ಬೆಳೆದು ಬಂದಿರುವುದಾಗಿ ಸ್ಮರಿಸಿದ ಅವರು, ಈ ಗೌರವ ತಮ್ಮ ಪಾಲಿಗೆ ಸಂತಸದ ಕ್ಷಣವಾಗಿದೆ ಎಂದರು.
ಹೋಬಳಿ ಮಟ್ಟದಲ್ಲೂ ಸಾಹಿತ್ಯ ಗೋಷ್ಠಿಗಳ ಆಯೋಜನೆ
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಎಸ್. ರವಿಕುಮಾರ್ ಮಾತನಾಡಿ, ತಾಲ್ಲೂಕಿನಲ್ಲಿ ಈವರೆಗೆ 12 ತಾಲ್ಲೂಕು ಸಾಹಿತ್ಯ ಸಮ್ಮೇಳನಗಳು, ಐದು ಹೋಬಳಿ ಸಮ್ಮೇಳನಗಳು ಹಾಗೂ ಒಂದು ಜಿಲ್ಲಾ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಲಾಗಿದೆ. ಮೂರು ಸಮ್ಮೇಳನಗಳನ್ನು ಹೊರತುಪಡಿಸಿ ಉಳಿದ ಸಮ್ಮೇಳನಗಳಿಗೆ ಶಾಸಕ ಸಿ.ಬಿ. ಸುರೇಶ್ಬಾಬು ಅವರು ಮಹಾಪೋಷಕರಾಗಿ ನೇತೃತ್ವ ವಹಿಸಿ ಯಶಸ್ವಿಗೊಳಿಸಿದ್ದಾರೆ ಎಂದರು.
ಈ ಬಾರಿಯೂ ಶಾಸಕರ ನೇತೃತ್ವದಲ್ಲಿ ಸಮ್ಮೇಳನ ನಡೆಯಲಿದ್ದು, ವಿಶೇಷವಾಗಿ ಹೋಬಳಿ ಮಟ್ಟದಲ್ಲಿಯೂ ಸಾಹಿತ್ಯ ಗೋಷ್ಠಿಗಳನ್ನು ಆಯೋಜಿಸುವ ಚಿಂತನೆ ಇದೆ. ಯುವ ಗೋಷ್ಠಿ, ದಲಿತ ಸಂವೇದನೆ ಗೋಷ್ಠಿ, ಮಹಿಳಾ ಗೋಷ್ಠಿ, ಕವಿಗೋಷ್ಠಿ ಹಾಗೂ ಸಾಹಿತ್ಯ ಗೋಷ್ಠಿಗಳು ನಡೆಯಲಿವೆ. ವಿವಿಧ ಕ್ಷೇತ್ರಗಳ ಸಂಪನ್ಮೂಲ ವ್ಯಕ್ತಿಗಳು ಮತ್ತು ಸಾಹಿತಿಗಳು ಭಾಗವಹಿಸಲಿದ್ದು, ತಾಲ್ಲೂಕಿನ ಎಲ್ಲಾ ಕನ್ನಡಾಭಿಮಾನಿಗಳು ಸಮ್ಮೇಳನದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಬಿಇಒ ಕಾಂತರಾಜು ಸಿ.ಎಸ್., ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಶಿವರಾಜ್, ಕಸಾಪ ಉಪಾಧ್ಯಕ್ಷರಾದ ಎಂ.ವಿ. ರಾಜ್ಕುಮಾರ್, ನಂದೀಶ್ ಬಟ್ಲೇರಿ, ಮಂಜುನಾಥರಾಜ್ ಅರಸ್, ವರಮಹಾಲಕ್ಷ್ಮಿ, ಸಿ.ಎನ್. ಮಂಜುನಾಥ್, ಪ್ರಧಾನ ಕಾರ್ಯದರ್ಶಿಗಳಾದ ನಿರೂಪ್ ರಾವತ್, ಸಿ. ರವಿಕುಮಾರ್, ಖಜಾಂಚಿ ಯೋಗೀಶ್, ಸಂಚಾಲಕ ಗುರುಮೂರ್ತಿ ಕೊಟಿಗೆಮನೆ, ಕಿರಣ್ ನಿಶಾನಿ, ಷಡಾಕ್ಷರಿ ತರಬೇನಹಳ್ಳಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
