ಮಧುಗಿರಿ: ಜಿಲ್ಲೆಯ ಕಾಂಗ್ರೆಸ್ ನ ಪ್ರಭಾವಿ ನಾಯಕ ಕೆ.ಎನ್.ರಾಜಣ್ಣ ಅವರ ಬಗ್ಗೆ ಸಚಿವ ಬಾಲಕೃಷ್ಣ ಅವರು ಲಘುವಾಗಿ ಮಾತನಾಡುವುದನ್ನು ತಕ್ಷಣ ನಿಲ್ಲಿಸಬೇಕು. ಇಲ್ಲವಾದರೆ ಮಾಗಡಿಯಲ್ಲಿಯೇ ಅವರ ವಿರುದ್ಧ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಮಧುಗಿರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆದಿನಾರಾಯಣ ರೆಡ್ಡಿ ಎಚ್ಚರಿಕೆ ನೀಡಿದರು.
ಇತ್ತೀಚೆಗೆ ನಡೆದ ವಿಧಾನಪರಿಷತ್ ಚುನಾವಣೆ ಫಲಿತಾಂಶದ ಹಿನ್ನೆಲೆಯಲ್ಲಿ ಸಚಿವ ಬಾಲಕೃಷ್ಣ ಅವರು ಕೆ.ಎನ್.ರಾಜಣ್ಣ ಅವರ ಕುರಿತು ನೀಡಿರುವ ಹೇಳಿಕೆಗಳನ್ನು ಖಂಡಿಸಿ, ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲೂಕು ಕಾಂಗ್ರೆಸ್ ವತಿಯಿಂದ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಕಾಂಗ್ರೆಸ್ ಪಕ್ಷದ ನಿಷ್ಠಾವಂತ ನಾಯಕ ಕೆ.ಎನ್.ರಾಜಣ್ಣ ಅವರ ಬಗ್ಗೆ ಬೇರೆ ಪಕ್ಷಗಳಿಂದ ಕಾಂಗ್ರೆಸ್‌ಗೆ ಬಂದಿರುವ ಸಚಿವ ಬಾಲಕೃಷ್ಣ ಅವರು ಕೀಳಾಗಿ ಮಾತನಾಡುತ್ತಿರುವುದು ಸರಿಯಲ್ಲ. ಈ ವಿಚಾರದಲ್ಲಿ ಕಾಂಗ್ರೆಸ್ ರಾಜ್ಯ ಹೈಕಮಾಂಡ್ ಮೌನ ವಹಿಸಿರುವುದೂ ಸಮಂಜಸವಲ್ಲ. ಜಿಲ್ಲೆಯಲ್ಲಿ ರಾಜಣ್ಣ ಅವರನ್ನು ನಿರ್ಲಕ್ಷಿಸಿದರೆ ಪಕ್ಷಕ್ಕೆ ದೊಡ್ಡ ಹೊಡೆತ ಬೀಳಲಿದೆ ಎಂಬುದನ್ನು ಇತಿಹಾಸವೇ ಸಾಬೀತುಪಡಿಸಿದೆ ಎಂದರು.
ಇತ್ತೀಚೆಗೆ ಕೊಡಿಗೇನಹಳ್ಳಿಯಲ್ಲಿ ಎನ್‌ಡಿಎ ಪಕ್ಷದ ಎಲ್.ಸಿ.ನಾಗರಾಜ್ ಅವರು ವಿಧಾನಪರಿಷತ್ ಚುನಾವಣೆಯಲ್ಲಿ ಕೆ.ಎನ್.ರಾಜಣ್ಣ ಅವರ ಕುಟುಂಬ ನಮ್ಮ ಅಭ್ಯರ್ಥಿಗೆ ಸಹಕಾರ ನೀಡಿದೆ ಎಂದು ಹೇಳಿ ಅಭಿನಂದನೆ ಸಲ್ಲಿಸಿರುವುದು ಸರಿಯಲ್ಲ. ರಾಜಣ್ಣ ಅವರು ಎಲ್ಲಿಯೂ ಪಕ್ಷದ್ರೋಹ ಮಾಡಿಲ್ಲ. ಬದಲಾಗಿ ನಮ್ಮೆಲ್ಲರನ್ನೂ ಸಭೆಗೆ ಕರೆದು ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡುವಂತೆ ಸೂಚಿಸಿದ್ದರು. ಎಲ್.ಸಿ.ನಾಗರಾಜ್ ಅವರು ಅಭಿವೃದ್ಧಿ ವಿಚಾರವಾಗಿ ಪ್ರಶ್ನೆ ಮಾಡಲಿ, ಆದರೆ ಆಧಾರರಹಿತ ಆರೋಪ ಹಾಗೂ ಅಪಪ್ರಚಾರ ಮಾಡುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ 26 ಕಾಂಗ್ರೆಸ್ ಶಾಸಕರ ಕ್ಷೇತ್ರಗಳಲ್ಲಿಯೂ ಪಕ್ಷಕ್ಕೆ ಹಿನ್ನಡೆಯಾಗಿದೆ. ಹೀಗಿರುವಾಗ ಒಬ್ಬ ರಾಜಣ್ಣ ಅವರನ್ನೇ ಹೊಣೆ ಮಾಡುವುದು ಯಾವ ನ್ಯಾಯ? ಎಂಬುದನ್ನು ಸಚಿವ ಬಾಲಕೃಷ್ಣ ಅವರು ಅರ್ಥಮಾಡಿಕೊಳ್ಳಬೇಕು. ರಾಜಣ್ಣ ಅವರ ತಂದೆಯ ಊರು ಮಾಗಡಿಯಾಗಿದ್ದು, ಅಲ್ಲಿ ನಾಯಕ ಸಮುದಾಯದ ಸುಮಾರು 20 ಸಾವಿರ ಜನರಿದ್ದಾರೆ. ಆದ್ದರಿಂದ ಮಾತನಾಡುವಾಗ ಎಚ್ಚರಿಕೆ ವಹಿಸಬೇಕು. ಜಿಲ್ಲೆಯ ಹತ್ತು ಕ್ಷೇತ್ರಗಳಲ್ಲಿಯೂ ರಾಜಣ್ಣ ತಮ್ಮದೇ ಆದ ರಾಜಕೀಯ ಪ್ರಭಾವ ಹೊಂದಿದ್ದಾರೆ. ಅವರನ್ನು ನಿರ್ಲಕ್ಷಿಸಿದರೆ ಮುಂದಿನ ದಿನಗಳಲ್ಲಿ ಪಕ್ಷಕ್ಕೆ ಅಪಾಯ ಎದುರಾಗಲಿದೆ. ಒಬ್ಬ ಬಾಲಕೃಷ್ಣ ಅವರಿಂದಲೇ ಮತ್ತೊಂದು ಕ್ಷೇತ್ರವನ್ನು ಗೆಲ್ಲಿಸಲು ಸಾಧ್ಯವಿಲ್ಲ ಎಂಬುದನ್ನು ಅರಿಯಬೇಕು ಎಂದು ಹೇಳಿದರು.
ರಾಜ್ಯ ಸಹಕಾರ ಮಹಾಮಂಡಳದ ಮಾಜಿ ಅಧ್ಯಕ್ಷ ಗಂಗಣ್ಣ ಮಾತನಾಡಿ, ಕೆ.ಎನ್.ರಾಜಣ್ಣ ಅವರು ಮಧುಗಿರಿ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಅವರು ಕೇವಲ ವ್ಯಕ್ತಿಯಲ್ಲ, ಒಂದು ಶಕ್ತಿ. ಅವರ ಬಗ್ಗೆ ಮಾತನಾಡುವ ನೈತಿಕತೆ ಸಚಿವ ಬಾಲಕೃಷ್ಣ ಅವರಿಗಿಲ್ಲ. ನೇರ ನುಡಿಯ ರಾಜಕಾರಣಿಯಾಗಿರುವ ರಾಜಣ್ಣ ಅವರ ಶಕ್ತಿ ಇಡೀ ಜಿಲ್ಲೆಗೆ ತಿಳಿದಿದೆ. ಅವರ ಬಗ್ಗೆ ಮಾತನಾಡುವಾಗ ಎಚ್ಚರಿಕೆ ಇರಲಿ ಎಂದರು.
ಬಾಲಕೃಷ್ಣ ಅವರು ಬೇರೆ ಪಕ್ಷದಿಂದ ಕಾಂಗ್ರೆಸ್‌ಗೆ ಬಂದವರು. ಆದರೆ ರಾಜಣ್ಣ ಅವರು ಮೂಲ ಕಾಂಗ್ರೆಸ್ಸಿಗರು. ವಿಧಾನ ಪರಿಷತ್ ಚುನಾವಣೆಯಲ್ಲಿ ಪುಟ್ಟಣ್ಣ ಅವರ ಸೋಲಿಗೆ ಯಾರು ಕಾರಣ ಎಂಬುದನ್ನು ಮೊದಲು ಆತ್ಮಾವಲೋಕನ ಮಾಡಿಕೊಳ್ಳಲಿ. ಸಮಸ್ಯೆಗಳಿದ್ದರೆ ಕೆಪಿಸಿಸಿಗೆ ದೂರು ಸಲ್ಲಿಸಲಿ. ರಾಜೀನಾಮೆ ಕೇಳಲು ನೀವು ಯಾರು? ಸಚಿವರಾಗಿ ನಿಮ್ಮ ಕೊಡುಗೆ ಏನು? ಮೊದಲು ನಿಮ್ಮ ಕ್ಷೇತ್ರದ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಿ ಎಂದು ಹೇಳಿದರು.
ಪುರಸಭೆ ಮಾಜಿ ಅಧ್ಯಕ್ಷ ಎಂ.ಕೆ.ನಂಜುಂಡಯ್ಯ ಮಾತನಾಡಿ, ರಾಜಣ್ಣ ಅವರು ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತಮ್ಮದೇ ಆದ ಶಕ್ತಿ ತುಂಬಿದ್ದಾರೆ. ಕ್ಷೇತ್ರದ ಅಭಿವೃದ್ಧಿ ವಿಚಾರವಾಗಿ ರಾಜೇಂದ್ರ ಅವರು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದರೆ ತಪ್ಪೇನು? ಕ್ಷೇತ್ರದಲ್ಲಿ ಕೈಗಾರಿಕೆ ಸ್ಥಾಪನೆ ಕುರಿತು ಚರ್ಚಿಸಲು ತೆರಳಿರುವುದಕ್ಕೆ ಅಪಾರ್ಥ ಕಲ್ಪಿಸುವುದು ಸರಿಯಲ್ಲ. ಯಾರನ್ನೋ ಮೆಚ್ಚಿಸಲು ಸಚಿವ ಬಾಲಕೃಷ್ಣ ಅವರು ಮಾತನಾಡಬಾರದು ಎಂದು ಹೇಳಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಪಾಲಯ್ಯ, ಟಿಎಪಿಸಿಎಂಎಸ್ ಅಧ್ಯಕ್ಷ ಮಲ್ಲಿಕಾರ್ಜುನಯ್ಯ ಮಾತನಾಡಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಪಿ.ಟಿ.ಗೋವಿಂದಪ್ಪ, ಸಿದ್ದಾಪುರ ಈರಣ್ಣ, ವಕೀಲ ನಾರಾಯಣ ಗೌಡ್ರು, ಕಲ್ಲಹಳ್ಳಿ ದೇವರಾಜು, ಮೈದನಹಳ್ಳಿ ಕಾಂತರಾಜು, ಅನಿಲ್ ಕುಮಾರ್, ತಿಮ್ಮಾರೆಡ್ಡಿ, ಅಶ್ವತ್ಥಪ್ಪ, ಬಾಬಾ ಫಕ್ರುದ್ದೀನ್, ಮರಿಯಣ್ಣ, ಅಯೂಬ್, ಕೆ.ಪ್ರಕಾಶ್, ಎಸ್.ಬಿ.ಟಿ. ರಾಮು, ಕಿಶೋರ್, ಶ್ರೀಧರ್, ಉಮೇಶ್, ಸಾದಿಕ್, ಶ್ರೀನಿವಾಸ ರೆಡ್ಡಿ, ಶನಿವಾರಂ ರೆಡ್ಡಿ, ಡಿ.ಹೆಚ್.ನಾಗರಾಜು, ಶಿವಪ್ಪನಾಯಕ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
