ಚಿಕ್ಕನಾಯಕನಹಳ್ಳಿ: ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಕುಟುಂಬ ನಿರ್ವಹಣೆ ಮಾಡುವುದರ ಜೊತೆಗೆ ಮಕ್ಕಳನ್ನು ಸಂಸ್ಕಾರವಂತರನ್ನಾಗಿ ಬೆಳೆಸುವಲ್ಲಿ ಮಹಿಳೆಯರು ಮಹತ್ವದ ಪಾತ್ರ ವಹಿಸುತ್ತಿದ್ದು, ಅವರ ಕಾರ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಶಾಸಕ ಸಿ.ಬಿ.ಸುರೇಶ್ ಬಾಬು ತಿಳಿಸಿದರು.
ಪಟ್ಟಣದ ಅಕ್ಕಮಹಾದೇವಿ ಮಹಿಳಾ ಸಮಾಜದ ಸಮುದಾಯ ಭವನದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಆಯೋಜಿಸಿದ್ದ 12ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ನಡೆದ ಮಹಿಳಾ ಸಂವೇದನೆ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಇಂದಿನ ತಾಂತ್ರಿಕ ಯುಗದಲ್ಲಿ ಮಹಿಳೆಯರು ತಾಯಿ, ತಂಗಿ, ಸೊಸೆ ಸೇರಿದಂತೆ ವಿವಿಧ ಸಂಬಂಧಗಳ ಮೂಲಕ ಕುಟುಂಬದಲ್ಲಿ ಮಹತ್ವದ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಇಂತಹ ಮಹಿಳೆಯರಿಗೆ ಸಮಾಜದಲ್ಲಿ ಸೂಕ್ತ ಸ್ಥಾನಮಾನ ಕಲ್ಪಿಸುವುದರ ಜತೆಗೆ ಅವರಿಗೆ ದೊರೆಯಬೇಕಾದ ಅವಕಾಶ ಮತ್ತು ಗೌರವ ನೀಡಬೇಕು. ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಮಹಿಳೆಯರನ್ನು ಸದೃಢರನ್ನಾಗಿಸುವ ಅಗತ್ಯವಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷೆ ಬಾ.ಹ.ರಮಾಕುಮಾರಿ, ಇಂದಿನ ಸಮಾಜದಲ್ಲಿ ಮಹಿಳೆಯರಿಗೆ ದೊರೆಯಬೇಕಾದ ಮೀಸಲಾತಿ ಹಾಗೂ ಅವಕಾಶಗಳು ಸಮರ್ಪಕವಾಗಿ ಸಿಗುತ್ತಿಲ್ಲ. ಮಹಿಳೆಯರ ಹಕ್ಕುಗಳು, ಸಾಮಾಜಿಕ ಭಾಗವಹಿಸುವಿಕೆ ಮತ್ತು ಸಬಲೀಕರಣದ ಕುರಿತು ಚರ್ಚಿಸಲು ಇಂತಹ ವೇದಿಕೆಗಳು ಹೆಚ್ಚು ನಿರ್ಮಾಣವಾಗಬೇಕು. ಸಮ್ಮೇಳನದ ಅಂಗವಾಗಿ ಆಯೋಜಿಸಿರುವ ಮಹಿಳಾ ಸಂವೇದನೆ ಗೋಷ್ಠಿ ಅರ್ಥಪೂರ್ಣವಾಗಿದೆ ಎಂದರು.
ಮಹಿಳೆಯರ ದುಡಿಮೆಗೆ ಮನ್ನಣೆ ಸಿಗಲಿ
ಸಮಕಾಲೀನ ಗ್ರಾಮೀಣ ಮತ್ತು ನಗರ ಮಹಿಳೆಯರ ಸಂವೇದನೆ ಹಾಗೂ ಸ್ಥಿತ್ಯಂತರಗಳ ಕುರಿತು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷೆ ಎನ್.ಇಂದಿರಮ್ಮ ವಿಷಯ ಮಂಡಿಸಿದರು.
ನಗರ ಹಾಗೂ ಗ್ರಾಮೀಣ ಭಾಗದ ಮಹಿಳೆಯರ ಜೀವನದಲ್ಲಿ ಹೆಚ್ಚಿನ ವ್ಯತ್ಯಾಸವಿಲ್ಲ. ಇಂದಿಗೂ ಅನೇಕ ಮಹಿಳೆಯರು ಮೂಢನಂಬಿಕೆಗಳಿಗೆ ಒಳಗಾಗುತ್ತಿದ್ದು, ವೈಚಾರಿಕ ನೆಲೆಗಟ್ಟಿನಲ್ಲಿ ಚಿಂತಿಸುವ ಪ್ರವೃತ್ತಿ ಕಡಿಮೆಯಾಗುತ್ತಿದೆ. ಮಹಿಳೆಯರ ದುಡಿಮೆಯನ್ನು ಕೇವಲ ಹಣ ಸಂಪಾದಿಸುವ ಕೆಲಸಕ್ಕೆ ಸೀಮಿತಗೊಳಿಸಲಾಗುತ್ತಿದೆ. ಮನೆಯಲ್ಲಿ ನಿರ್ವಹಿಸುವ ಕೌಟುಂಬಿಕ ಕೆಲಸಗಳಿಗೆ ದುಡಿಮೆಯ ಮನ್ನಣೆ ದೊರೆಯುತ್ತಿಲ್ಲ. ಮಹಿಳೆಯರ ಶ್ರಮಕ್ಕೆ ಸೂಕ್ತ ಗೌರವ ನೀಡುವ ಜತೆಗೆ ಅವರಲ್ಲಿ ಇನ್ನಷ್ಟು ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ತಿಳಿಸಿದರು.
ಆಧುನಿಕ ಕನ್ನಡ ಸಾಹಿತ್ಯದಲ್ಲಿ ಹೆಣ್ಣಿನ ಅಭಿವ್ಯಕ್ತಿ ಮತ್ತು ಒಳನೋಟ ಕುರಿತು ನವೋದಯ ಕಾಲೇಜಿನ ಪ್ರಾಂಶುಪಾಲ ಸಿ.ರವಿಕುಮಾರ್ ವಿಷಯ ಮಂಡಿಸಿದರು. ತಾಲ್ಲೂಕಿನ ಸಾಹಿತ್ಯ ಮತ್ತು ಸಾಂಸ್ಕೃತಿಕ ಚರಿತ್ರೆಯಲ್ಲಿ ಮಹಿಳೆಯರ ಕೊಡುಗೆ ಕುರಿತು ಹುಳಿಯಾರಿನ ಬಿ.ಎಂ.ಎಸ್. ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಕೆ.ಬಿ.ಸರಸ್ವತಿ ಮಾತನಾಡಿದರು.
ನಂತರ ನಡೆದ ಮಹಿಳಾ ಕವಿಗೋಷ್ಠಿಯಲ್ಲಿ ಸುಮಾರು 11 ಮಹಿಳಾ ಕವಿಯರು ತಮ್ಮ ಕವನಗಳನ್ನು ವಾಚಿಸಿದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಎಸ್.ರವಿ ಕುಮಾರ್, ಉಪಾಧ್ಯಕ್ಷ ನಂದೀಶ್ ಬಟ್ಲೇರಿ ಉಪಸ್ಥಿತರಿದ್ದರು. ಮಹಿಳಾ ಘಟಕದ ಸಂಚಾಲಕಿ ವರಮಹಾಲಕ್ಷ್ಮಿ ಟಿ.ಆರ್. ಆಶಯ ನುಡಿಗಳನ್ನಾಡಿದರು.
ವಿಚಾರಗೋಷ್ಠಿಯ ಅಧ್ಯಕ್ಷತೆಯನ್ನು ಲೇಖಕಿಯರ ಸಂಘದ ನಿಕಟಪೂರ್ವ ಅಧ್ಯಕ್ಷೆ ಮಲ್ಲಿಕಾ ಬಸವರಾಜು ವಹಿಸಿದ್ದರು. ಕವಿಗೋಷ್ಠಿಯ ಅಧ್ಯಕ್ಷತೆಯನ್ನು ರಂಗಮ್ಮ ಹೊದೇಕಲ್ ವಹಿಸಿದ್ದರು. ಕವಯತ್ರಿ ರಾಧಾಮಣಿ ಆಶಯ ನುಡಿಗಳನ್ನಾಡಿದರು. ನಾಗಮಣಿ, ಭವಾನಿ ಜಯರಾಂ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
