ಹಾಸನ: ತಮ್ಮ ವಿರುದ್ಧ ಲಂಚದ ಆರೋಪ ಮಾಡಿರುವ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಶಿವಲಿಂಗೇಗೌಡ, ಅವರು ಒಬ್ಬ “ಬೇಜವಾಬ್ದಾರಿ ಕೇಂದ್ರ ಸಚಿವ” ಎಂದು ಕಟುವಾಗಿ ತಿರುಗೇಟು ನೀಡಿದ್ದಾರೆ.
ಹಾಸನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, “ಇದು ಎಐ (ಕೃತಕ ಬುದ್ಧಿಮತ್ತೆ) ಯುಗ, ಯಾರು ಬೇಕಾದರೂ ಸುಳ್ಳು ವಾಟ್ಸ್ ಆ್ಯಪ್ ಚಾಟ್ ಗಳನ್ನು ಸೃಷ್ಟಿ ಮಾಡಿ ಹಂಚಿಕೊಳ್ಳಬಹುದು. ಕುಮಾರಸ್ವಾಮಿ ಬಿಡುಗಡೆ ಮಾಡಿರುವ ಚಾಟ್ನಲ್ಲಿ ಶಶಿಕಿರಣ್ ಎಂಬ ವ್ಯಕ್ತಿಯ ಹೆಸರಿದೆ ಹೊರತು, ಆತ ಯಾರ ಜೊತೆ ಚಾಟ್ ಮಾಡಿದ್ದಾನೆ ಎಂಬುದರ ಯಾವುದೇ ಸ್ಪಷ್ಟ ವಿವರಗಳಿಲ್ಲ. ರಾತ್ರಿ ಯಾರೋ ತಂದುಕೊಟ್ಟ ದಾಖಲೆ ಎಂದು ಹೇಳುವ ಕುಮಾರಸ್ವಾಮಿ, ಮೊದಲು ಆ ದಾಖಲೆಗಳನ್ನು ತಂದುಕೊಟ್ಟ ವ್ಯಕ್ತಿಯ ಹೆಸರನ್ನು ಬಹಿರಂಗಪಡಿಸಲಿ” ಎಂದು ಸವಾಲು ಹಾಕಿದರು.
“ನನ್ನ ವಿರುದ್ಧ ಮಾಡಿರುವ ಆರೋಪವನ್ನು ಸಾಬೀತು ಮಾಡದಿದ್ದರೆ ನಾನು ಸುಮ್ಮನೆ ಬಿಡುವುದಿಲ್ಲ” ಎಂದು ಎಚ್ಚರಿಕೆ ನೀಡಿದ ಶಿವಲಿಂಗೇಗೌಡ, ಈ ವಾಟ್ಸ್ಆ್ಯಪ್ ಚಾಟ್ನ ಸತ್ಯಾಸತ್ಯತೆಯನ್ನು ತಿಳಿಯಲು ತನಿಖೆಗೆ ಕಳುಹಿಸಲಾಗಿದೆ ಎಂದರು. “ಒಂದು ವೇಳೆ ಈ ಆರೋಪ ಸಾಬೀತಾದರೆ ತಪ್ಪು ಮಾಡಿದವರಿಗೆ ಶಿಕ್ಷೆ ಕೊಡಿಸಲು ನಾವು ಸಿದ್ಧರಿದ್ದೇವೆ. ಆದರೆ, ಆರೋಪ ಸುಳ್ಳು ಎಂದು ಸಾಬೀತಾದಾಗ ಕುಮಾರಸ್ವಾಮಿ ಅವರ ಗೌರವ ಏನಾಗಬೇಕು?” ಎಂದು ಪ್ರಶ್ನಿಸಿದರು.
ಈ ಸಂಬಂಧ ಈಗಾಗಲೇ ದೂರು ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ರಾಜಕೀಯ ಲಾಭಕ್ಕಾಗಿ ನಿರಪರಾಧಿಗಳು ಹಾಗೂ ಮರ್ಯಾದಸ್ಥರ ಮಾನಹಾನಿ ಮಾಡುವ ಚಾಳಿ ಮತ್ತು ಪ್ರವೃತ್ತಿಯನ್ನು ರಾಜಕಾರಣಿಗಳು ನಿಲ್ಲಿಸಬೇಕು ಎಂದು ಅವರು ಆಗ್ರಹಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
